ಸಾರಾಂಶ
ಕಂಪ್ಲಿ: ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳು ರಾಜ್ಯದ ಹಾಗೂ ರಾಷ್ಟ್ರದ ಇತರೆ ಪ್ರದೇಶಗಳ ಜೊತೆ ಸರಿಸಮನಾಗಿ ವಿಕಸನಗೊಳ್ಳಲು ಹಗಲಿರಳು ಶ್ರಮ ವಹಿಸುವೆ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ತಿಳಿಸಿದರು.
ಪಟ್ಟಣದ ಶ್ರೀ ಪೇಟೆ ಬಸವೇಶ್ವರ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು.ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ. ಈ ಹಿಂದೆ ನನಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಕೈಗೊಂಡಿದ್ದೇನೆ ಎಂದರು.
ಹುದ್ದೆಗಳ ಭರ್ತಿಗೆ ಸದನದಲ್ಲಿ ಧ್ವನಿ ಎತ್ತಿ ಹೋರಾಟ ನಡೆಸಿದ್ದೇನೆ. ಈ ಕ್ಷೇತ್ರ ಬಹಳ ಪವಿತ್ರ ಕ್ಷೇತ್ರವಾಗಿದ್ದು, ಇದರ ಸಂಪೂರ್ಣ ಅಭಿವೃದ್ಧಿಗೆ ಶ್ರಮ ವಹಿಸುವ ಮೂಲಕ ಪಾವಿತ್ರ್ಯತೆ ಕಾಪಾಡುವಂತಹ ಕೆಲಸ ಮಾಡುತ್ತೇನೆ. ಕಲ್ಯಾಣ ಕರ್ನಾಟಕ ಭಾಗದ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಹಾಗೂ ಶಿಕ್ಷಣದ ಏಳಿಗೆಗೆ ಮತ್ತು ಶಿಕ್ಷಕರ ಏಳಿಗೆಗೆ ಪಣತೊಡುವೆ. ಗಂಗಾವತಿಯ ದರೋಜಿ ರೈಲ್ವೆ ಮಾರ್ಗ ಬ್ರಾಡ್ ಗೇಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯಗಳ ಪೂರೈಕೆ, ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ನೀರಾವರಿಯಲ್ಲಿ ಅಭಿವೃದ್ಧಿ ಹಾಗೂ ಬೆಳವಣಿಗೆ ಹೊಂದಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗದ ಸೃಷ್ಟಿಯಾಗಬೇಕು ಹಾಗೂ ಸರ್ಕಾರಿ ಅರೆ ಸರ್ಕಾರಿ ಇಲಾಖೆಗಳಲ್ಲಿ ದೊಡ್ಡ ಪ್ರಮಾಣದಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆ ನಡೆಯಬೇಕು ಎಂದರು.ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಕಾಲಮಿತಿಯೊಳಗೆ ಅದರ ಅನುಷ್ಠಾನವಾಗಬೇಕು. ಮಂಡಳಿಗೆ ತನ್ನದೇ ಆದ ಅನುಷ್ಠಾನ ಸಿಬ್ಬಂದಿ ಹಾಗೂ ಕಚೇರಿಗಳು 7 ಜಿಲ್ಲೆಗಳಲ್ಲಿ ಸ್ಥಾಪಿಸುವಂತೆ ಕ್ರಮ, ಕಲ್ಯಾಣ ಕರ್ನಾಟಕ ಪ್ರದೇಶದ ನೀರಾವರಿ ಯೋಜನೆಗಳು ಜಾರಿಗೆ ತಂದು ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ಮೂಲಕ ರೈತರಿಗೆ ಆಸರೆ ಆಗಬೇಕೆಂಬ ಮೂಲ ಉದ್ದೇಶ ಹೊಂದಿದ್ದೇನೆ. ಹೀಗಾಗಿ ನನಗೆ ಮತ ನೀಡುವ ಮೂಲಕ ನಿಮ್ಮ ಸೇವೆಗೆ ಅನುಕೂಲತೆ ಕಲ್ಪಿಸಿ ಕೊಡುವಂತೆ ಒತ್ತಾಯಿಸಿದರು.
ಬಳಿಕ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಕೈಗೊಂಡಿರುವ ಸಾಧನೆಗಳು ಹಾಗೂ ಜನಪರ ಕಾರ್ಯಗಳನ್ನು ಪದವೀಧರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅಮರನಾಥ ಪಾಟೀಲ್ ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕಾ, ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಪ್ರಧಾನ ಕಾರ್ಯದರ್ಶಿ ಜಿ.ಸುಧಾಕರ್, ಪುರಸಭೆ ಸದಸ್ಯರಾದ ಎಸ್.ಎಂ.ನಾಗರಾಜ್, ಸುದರ್ಶನ್ ರೆಡ್ಡಿ, ಸಿ.ಆರ್.ಹನುಮಂತ, ಮುಖಂಡರಾದ ಗುತ್ತಿಗನೂರು ವಿರೂಪಾಕ್ಷಗೌಡ, ಚಂದ್ರಶೇಖರ್, ಮಹೇಶ್ವರ ಸ್ವಾಮಿ, ಪಿ.ಬ್ರಹ್ಮಯ್ಯ, ವಾಲಿ ಕೊಟ್ರಪ್ಪ, ಬಿ.ಸಿದ್ದಪ್ಪ, ವಿದ್ಯಾಧರ್ ಸೇರಿದಂತೆ ಇತರರಿದ್ದರು.