ಶ್ರೀರಂಗನಾಥ ಸ್ವಾಮಿ ದೇಗುಲದ ಕಲ್ಯಾಣಿ ಸ್ವಚ್ಛತೆ

| Published : May 11 2024, 12:30 AM IST

ಶ್ರೀರಂಗನಾಥ ಸ್ವಾಮಿ ದೇಗುಲದ ಕಲ್ಯಾಣಿ ಸ್ವಚ್ಛತೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಪಟ್ಟಣದ ತಿರುಮಲೆಯ ಐತಿಹಾಸಿಕ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಕಲ್ಯಾಣಿಯನ್ನು ಸ್ವಯಂಸೇವಕರು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್‌ ವಿದ್ಯಾರ್ಥಿಗಳು ಸ್ವಚ್ಛತೆ ಮಾಡಿ ಶ್ರೀ ರಂಗನಾಥನ ಕೃಪೆಗೆ ಪಾತ್ರರಾದರು.

ಮಾಗಡಿ: ಪಟ್ಟಣದ ತಿರುಮಲೆಯ ಐತಿಹಾಸಿಕ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಕಲ್ಯಾಣಿಯನ್ನು ಸ್ವಯಂಸೇವಕರು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್‌ ವಿದ್ಯಾರ್ಥಿಗಳು ಸ್ವಚ್ಛತೆ ಮಾಡಿ ಶ್ರೀ ರಂಗನಾಥನ ಕೃಪೆಗೆ ಪಾತ್ರರಾದರು.

ಶ್ರೀರಂಗನಾಥ ಸ್ವಾಮಿಯ ಕಲ್ಯಾಣಿಯಲ್ಲಿ ಕಸಕಡ್ಡಿ ಬಿದ್ದಿರುವುದಲ್ಲದೆ, ಮೀನುಗಳ ಸಾವಿನಿಂದ ದುರ್ನಾತ ಬೀರುತ್ತಿತ್ತು. ಹೂಳು ತುಂಬಿದ್ದನ್ನು ಸ್ವಚ್ಛಗೊಳಿಸಬೇಕು ಎಂದು ದೇವಸ್ಥಾನದ ಅರ್ಚಕ ಸಂತೋಷ್ ಅಯ್ಯಂಗಾರ್ ಸಾಮಾಜಿಕ ಜಾಲತಾಣಗಳ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಪುರಸಭೆ, ತಾಲೂಕು ಆಡಳಿತ ಮುಂದಾಗಬೇಕೆಂದು ಮನವಿ ಮಾಡಿಕೊಂಡಿದ್ದರು.

ಜಾಲತಾಣಗಳಲ್ಲಿ ಮತ್ತು ದಿನಪತ್ರಿಕೆಯಲ್ಲಿ ಸ್ವಚ್ಛತಾ ಕಾರ್ಯ ಆಗಬೇಕೆಂಬ ಸುದ್ದಿ ಕಂಡು ಹಾಸನ ಮತ್ತು ಶಿರಾ ಸ್ಕೌಟ್ಸ್ ಅಂಡ್ ಗೈಡ್‌ನ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದೆ ಬಂದರು. ಜೊತೆಗೆ ಮಾಗಡಿಯ ಸ್ವಯಂಸೇವಕ ನಿವಾಸಿಗಳು ಸ್ವಚ್ಛತಾ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿದ್ದು ಬುಧವಾರ ಕಲ್ಯಾಣಿಯಲ್ಲಿದ್ದ ನೀರನ್ನು ಸಂಪೂರ್ಣವಾಗಿ ಆಚೆ ಹಾಕಿದರು.ಗುರುವಾರ ಮುಂಜಾನೆ 5 ಗಂಟೆಯಿಂದ ಸಂಜೆವರೆಗೂ ಕಲ್ಯಾಣಿಯಲ್ಲಿದ್ದ ಹೂಳು, ಕಸಕಡ್ಡಿಯೆಲ್ಲಾ ಎತ್ತಿದರು. ಶುಕ್ರವಾರವೂ ಉಳಿದಿದ್ದ ಹೂಳೆತ್ತಿ ಕಲ್ಯಾಣಿ ಸ್ವಚ್ಛತಾ ಕಾರ್ಯ ಸಂಪೂರ್ಣಗೊಳಿಸಿದರು. ಕಲ್ಯಾಣಿಯಲ್ಲಿ ಮಳೆ ನೀರು ಸಂಗ್ರಹವಾದರೆ ಈ ನೀರನ್ನು ದೇವಸ್ಥಾನದ ಪೂಜಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಸ್ವಯಂಸೇವಕರು ಮತ್ತು ಹಾಸನ ಮತ್ತು ಶಿರಾದಿಂದ ಬಂದಿರುವ ವಿದ್ಯಾರ್ಥಿಗಳಿಗೆ ರಂಗನಾಥ ಸ್ವಾಮಿ ಆಯಸ್ಸು ಆರೋಗ್ಯ ನೀಡಿ ಕಾಪಾಡಲಿ ಎಂದು ದೇವಸ್ಥಾನದ ಅರ್ಚಕರಾದ ವೆಂಕಟೇಶ ಅಯ್ಯಂಗಾರ್ ಹಾಗೂ ಸಂತೋಷ್ ಅಯ್ಯಂಗಾರ್ ಹಾರೈಸಿ ಅಭಿನಂದನೆ ತಿಳಿಸಿದರು.

ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಸಂದೇಶಕ್ಕೆ ಇಷ್ಟು ಜನ ಸ್ಪಂದಿಸಿ ದೊಡ್ಡ ಮಟ್ಟದಲ್ಲಿ ಶ್ರಮ ಹಾಕಿ ರಂಗನಾಥಸ್ವಾಮಿ ಸೇವೆ ಮಾಡಿದ ಸ್ವಯಂಸೇವಕರಿಗೆ ದೇವಸ್ಥಾನದ ಆಡಳಿತ ಮಂಡಳಿ ಧನ್ಯವಾದಗಳನ್ನು ತಿಳಿಸಿದೆ. ಇನ್ನು ಮುಂದಾದರೂ ಮುಜರಾಯಿ ಇಲಾಖೆ ಮತ್ತು ಸ್ಥಳೀಯ ಆಡಳಿತ ಕಲ್ಯಾಣಿ ಸ್ವಚ್ಛತೆಗೆ ಆದ್ಯತೆ ಕೊಡಬೇಕೆಂಬುದು ರಂಗನಾಥ ಭಕ್ತರ ಮನವಿಯಾಗಿದೆ. ಪೋಟೋ 9ಮಾಗಡಿ3:

ಮಾಗಡಿ ಶ್ರೀರಂಗನಾಥ ಸ್ವಾಮಿಯ ಕಲ್ಯಾಣಿ ಸ್ವಚ್ಛತೆ ಮಾಡುತ್ತಿರುವ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳು.