ಕಂಬಳ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಮತ್ತು ಕಂಬಳದ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಆಸಕ್ತ ಯುವ ಜನತೆಗೆ ಸೂಕ್ತ ತರಬೇತಿ ನೀಡಿ ಸಿದ್ಧಗೊಳಿಸುವ ಇರಾದೆಯಿಂದ ಕಂಬಳ ಅಕಾಡೆಮಿಯ ವತಿಯಿಂದ 7ನೇ ಕಂಬಳ ತರಬೇತಿ ಶಿಬಿರ 26 ರಿಂದ ಹತ್ತು ದಿನಗಳ ಕಾಲ ಮೂಡುಬಿದಿರೆಯ ಕಡಲಕೆರೆಯ ಸೃಷ್ಟಿ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ತಿಳಿಸಿದರು.
ಮೂಡುಬಿದಿರೆ: ಕಂಬಳ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಮತ್ತು ಕಂಬಳದ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಆಸಕ್ತ ಯುವ ಜನತೆಗೆ ಸೂಕ್ತ ತರಬೇತಿ ನೀಡಿ ಸಿದ್ಧಗೊಳಿಸುವ ಇರಾದೆಯಿಂದ ಕಂಬಳ ಅಕಾಡೆಮಿಯ ವತಿಯಿಂದ 7ನೇ ಕಂಬಳ ತರಬೇತಿ ಶಿಬಿರ 26 ರಿಂದ ಹತ್ತು ದಿನಗಳ ಕಾಲ ಮೂಡುಬಿದಿರೆಯ ಕಡಲಕೆರೆಯ ಸೃಷ್ಟಿ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ತಿಳಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು 12ರಂದು ಮೊದಲ ಸುತ್ತಿನ ಆಯ್ಕೆ ನಡೆಯಲಿದ್ದು, ಬಳಿಕ ರಾಷ್ಟ್ರೀಯ ತರಬೇತುದಾರರು ಎರಡನೇ ಸುತ್ತಿನ ಆಯ್ಕೆ ನಡೆಸಿ ಅಂತಿಮವಾಗಿ 40 ಮಂದಿಯನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದ ಶಿಬಿರಾರ್ಥಿಗಳಿಗೆ 26ರಿಂದ 10 ದಿನಗಳ ಕಾಲ ಕಂಬಳ ಕ್ಷೇತ್ರದ ವಿವಿಧ ಅನುಭವಿಗಳಿಂದ ತರಬೇತಿ ನೀಡಲಾಗುವುದು ಎಂದು ಹೇಳಿದರು. ಮಹಿಳೆಯರಿಗೂ ಅವಕಾಶ!: ಕಂಬಳ ಕ್ಷೇತ್ರದತ್ತ ಮಹಿಳೆಯರನ್ನು ಆಕರ್ಷಿಸುವ ಉದ್ದೇಶದಿಂದ ಅವರಿಗೆ ತೀರ್ಪುಗಾರರು ಹಾಗೂ ಉದ್ವೇಷಕರಾಗಿ ಕಾರ್ಯನಿರ್ವಹಿಸುವ ಕುರಿತು ತರಬೇತಿ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಯ 18 ವರ್ಷ ಮೇಲ್ಪಟ್ಟ ಆಸಕ್ತರು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಬಹುದು. ತರಬೇತಿ ಅವಧಿಯಲ್ಲಿ ಕೋಣಗಳನ್ನು ಓಡಿಸುವುದು, ಕೋಣಗಳ ಸಾಕಣೆ ಮತ್ತು ಆಹಾರ ಪದ್ಧತಿ, ಹಗ್ಗ ನೇಯ್ದೆ ಸೇರಿದಂತೆ ಕಂಬಳಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು. ಜತೆಗೆ ಯೋಗ, ಆತ್ಮಸ್ಥೆರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮಾನಸಿಕ ತಜ್ಞರಿಂದ ಮಾಹಿತಿ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಗುಣಪಾಲ ಕಡಂಬ ತಿಳಿಸಿದರು.ಅಕಾಡೆಮಿಯ ಮೊದಲ ಬ್ಯಾಚ್‌ನ ಶಿಬಿರಾರ್ಥಿ ಹಾಗೂ ಓಟಗಾರ ಪಣಪಿಲ ಪ್ರವೀಣ್ ಕೋಟ್ಯಾನ್ ಮತ್ತು ಎರಡನೇ ಬ್ಯಾಚ್‌ನ ಶಿಬಿರಾರ್ಥಿ, ಓಟಗಾರ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು.