ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಶುಕ್ರವಾರ ಹೋಳಿ ಹಬ್ಬದಂಗವಾಗಿ ನಡೆದ ಸಾಂಪ್ರದಾಯಿಕ ಬಣ್ಣದಾಟದ ಸಂಭ್ರಮ ಜೋರಾಗಿತ್ತು. ಯುವಕರು, ಚಿಣ್ಣರು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿ ಸಂಭ್ರಮದಿಂದ ಬಣ್ಣ ಎರಚಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಶುಕ್ರವಾರ ಹೋಳಿ ಹಬ್ಬದಂಗವಾಗಿ ನಡೆದ ಸಾಂಪ್ರದಾಯಿಕ ಬಣ್ಣದಾಟದ ಸಂಭ್ರಮ ಜೋರಾಗಿತ್ತು. ಯುವಕರು, ಚಿಣ್ಣರು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿ ಸಂಭ್ರಮದಿಂದ ಬಣ್ಣ ಎರಚಿ ಸಂಭ್ರಮಿಸಿದರು.ಪಟ್ಟಣದಲ್ಲಿ ಮಕ್ಕಳು ಸೇರಿದಂತೆ ಯುವಕರು ಬಣ್ಣದಾಟ ಆಡುವುದು ಕಂಡುಬಂದಿತು. ಹೋಳಿ ಹಬ್ಬದ ಹಿನ್ನಲೆಯಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು. ಪಟ್ಟಣ ವೀರಭದ್ರೇಶ್ವರ ನಗರ, ನಂದಿ ಬಡಾವಣೆ, ಸಾರಂಗ ಬಾವಿ, ಹಾರಿವಾಳ ಗಲ್ಲಿ, ಅಂಬೇಡ್ಕರ್ ಸರ್ಕಲ್, ಗಣೇಶ ಚೌಕ್, ಗಣೇಶ ನಗರ, ಬಸವ ನಗರ, ಹರಳಯ್ಯ ಕಾಲೋನಿ, ಶ್ರೀರಾಮ ನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹೋಳಿ ಹಬ್ಬದ ಬಣ್ಣದಾಟ ಜೋರಾಗಿತ್ತು. ಕಳೆದ ವಾರಕ್ಕಿಂತಲೂ ಇಂದು ಬಿಸಿಲು ಹೆಚ್ಚಾಗಿರುವುದು ಕೂಡ ಕಂಡುಬಂದಿತ್ತು. ಬಸವನಬಾಗೇವಾಡಿ ಪಟ್ಟಣದಲ್ಲಿ ಶುಕ್ರವಾರ 38 ಡಿಗ್ರಿ ಸೆ. ಬಿಸಲಿನ ತಾಪವಿತ್ತು. ಬಿರು ಬಿಸಿಲಿನಿಂದಾಗಿ ಜನರು ಸುಸ್ತಾದಂತೆ ಕಂಡು ಬಂದಿತು. ಬಣ್ಣದ ಹಬ್ಬವಿರುವದರಿಂದಾಗಿ ಮಾರುಕಟ್ಟೆಯಲ್ಲಿ ಜನಜಂಗುಳಿ ವಿರಳವಾಗಿತ್ತು.
ಶುಕ್ರವಾರ ಹೋಳಿ ಹಿನ್ನಲೆಯಲ್ಲಿ ಯುವಕರು, ಮಕ್ಕಳು ಬಣ್ಣದಾಟದಲ್ಲಿ ತೊಡಗಿದ್ದರು. ವಿಶೇಷವಾಗಿ ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಬಣ್ಣದಾಟದಲ್ಲಿ ತೊಡಗಿರುವುದು ಕಂಡುಬಂದಿತ್ತು. ಪಟ್ಟಣದ ಹಿರಿಯರು ಬಹುತೇಕ ಬಣ್ಣದಾಟದಿಂದ ದೂರ ಉಳಿದುಕೊಂಡಿದ್ದರು. ಮಾ.19 ಬುಧವಾರ ನಡೆಯಲಿರುವ ರಂಗಪಂಚಮಿಯ ಬಣ್ಣದಾಟ ರಂಗೇರುವ ಸಾಧ್ಯತೆಯಿದೆ. ತಾಲೂಕಿನ ಕಣಕಾಲ, ಕಾನ್ನಾಳ, ಮನಗೂಳಿ, ಉಕ್ಕಲಿ, ಮಸಬಿನಾಳ, ಯಂಭತ್ನಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆದ ಬಣ್ಣದಾಟದಲ್ಲಿ ಹಿರಿಯರು ಸೇರಿದಂತೆ ಯುವಕರು, ಮಕ್ಕಳು ಭಾಗವಹಿಸುವ ಮೂಲಕ ಸಂಭ್ರಮ ಪಟ್ಟರು. ತಾಲೂಕಿನ ಇಂಗಳೇಶ್ವರದಲ್ಲಿ ಶನಿವಾರ ಬಣ್ಣದಾಟ ನಡೆಯಲಿದೆ.