ಕಮಲನಗರದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

| Published : Jan 16 2024, 01:45 AM IST

ಸಾರಾಂಶ

ನದಿ, ಕೆರೆ ಕಟ್ಟೆಗಳನ್ನು ನಿರ್ಮಿಸಿ ಶ್ರಮಿಕ ವರ್ಗದ ಆರಾಧ್ಯ ದೈವವಾಗಿ ಗುರುತಿಸಿಕೊಂಡಿರುವ ಶಿವಯೋಗಿ ಸಿದ್ಧರಾಮೇಶ್ವರರು ವಚನದ ಮೂಲಕ ನಾಡಿಗೆ ನೀಡಿದ ಸಂದೇಶ ಅನುಕರಣೀಯವಾಗಿದೆ.

ಕಮಲನಗರ: ನದಿ, ಕೆರೆ ಕಟ್ಟೆಗಳನ್ನು ನಿರ್ಮಿಸಿ ಶ್ರಮಿಕ ವರ್ಗದ ಆರಾಧ್ಯ ದೈವವಾಗಿ ಗುರುತಿಸಿಕೊಂಡಿರುವ ಶಿವಯೋಗಿ ಸಿದ್ಧರಾಮೇಶ್ವರರು ವಚನದ ಮೂಲಕ ನಾಡಿಗೆ ನೀಡಿದ ಸಂದೇಶ ಅನುಕರಣೀಯವಾದದ್ದು, ಎಂದು ತಹಸೀಲ್ದಾರ್‌ ಅಮೀತ್‌ ಕುಮಾರ ಕುಲಕರ್ಣಿ ಹೇಳಿದರು.

ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಸೋಮವಾರ ಶಿವಯೋಗಿ ಸಿದ್ಧರಾಮೇಶ್ವರ 852ನೇ ಜಯಂತಿ ನಿಮಿತ್ತ ಹಮ್ಮಿಕೊಂಡ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ಧರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ, ವರ್ಣ, ಜಾತಿ, ಲಿಂಗ ಭೇದ ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು ಎಂದು ನುಡಿದರು.

ಸಂಜುಕುಮಾರ ಒಡೆಯಾರ ಜಯಂತ್ಯೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿ, 12ನೇ ಶತಮಾನದ ಮಹಾಶರಣ ಸಿದ್ಧರಾಮೇಶ್ವರರು ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕ ಯೋಗಿ. ಹೀಗಾಗಿ ಜಾತಿ, ಮತ, ಪಂಥಗಳೆನ್ನದೆ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು. ಅಲ್ಲದೇ, ಅವರ ಆದರ್ಶವನ್ನು ಪಾಲಿಸಬೇಕು ಎಂದರು.

ಗ್ರೇಡ್‌ 2 ತಹಸೀಲ್ದಾರ್‌ ರಮೇಶ ಪೆದ್ದೆ, ತಾಪಂ ಸಹಾಯಕ ನಿರ್ದೇಶಕ ಹಣಮಂತರಾವ್‌ ಕೌಟಗೆ, ಗ್ರಾಪಂ ಅಧ್ಯಕ್ಷರಾದ ಸುಶೀಲಾ ಮಹೇಶ, ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಜ ಝಲ್ಫೆ, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಗ್ರಾಪಂ ಸದಸ್ಯ ಬಾಲಾಜಿ ತೇಲಂಗ, ಮುಖಂಡರಾದ ಶಿವಾನಂದ ವಡ್ಡೆ, ಗಿರೀಶ ಒಡೆಯಾರ, ಮಹೇಶ ಸಜ್ಜನ, ಪ್ರಕಾಶ ಸೋಲ್ಲಾಪೂರೆ, ಸಂಜು ಒಡೆಯಾರ, ರಮೇಶ ಒಡೆಯಾರ, ಶಾಲಿವಾನ ಒಡೆಯಾರ ಹಾಗೂ ಅನೇಕರು ಇದ್ದರು.

ಮೆರವಣಿಗೆ: ಶಿವಯೋಗಿ ಸಿದ್ಧರಾಮೇಶ್ವರರ ಮೆರವಣಿಗೆ ಸೋಮವಾರ ಬೆಳಿಗ್ಗೆ ತಹಸೀಲ್‌ ಕಚೇರಿಯಿಂದ ಆರಂಭಗೊಂಡು ಬಸವೇಶ್ವರ ವೃತ್ತ, ಅತಿಥಿ ಗೃಹ, ಅಲ್ಲಮಪ್ರಭು ವೃತ್ತ, ಬೀದರ್‌ ರಾಷ್ಟ್ರೀಯ ಹೆದ್ದಾರಿಯಿಂದ ಸಾಗಿ ರೈಲ್ವೆ ಗೇಟ್‌ ಬಳಿಯ ಹನುಮಾನ ಮಂದಿರದವರೆಗೆ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು, ಯುವಕರು ಸಿದ್ಧರಾಮೇಶ್ವರರ ಜಯಘೋಷಗಳನ್ನು ಕೂಗಿದರು.