ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ.26ರಂದು ಚುನಾವಣೆ ನಿಗದಿಯಾಗಿದೆ. ಇದಕ್ಕೆ ಬೇಕಾದ ಅಗತ್ಯ ಸಂಖ್ಯಾಬಲವಿದ್ದರೂ ಬಿಜೆಪಿ ಅಷ್ಟೊಂದು ಉತ್ಸಾಹ ತೋರದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ನಡುವೆ ಕಾಂಗ್ರೆಸ್ ಪುರಸಭೆಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.ಇಲ್ಲಿನ ಪುರಸಭೆಯ ಅಧ್ಯಕ್ಷ ಸ್ಥಾನ ಪಜಾ ಹಾಗೂ ಉಪಾಧ್ಹಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಪುರಸಭೆಯಲ್ಲಿ ಒಟ್ಟು 23 ಜನ ಸದಸ್ಯ ಬಲವಿದೆ. ಈ ಪೈಕಿ ಬಿಜೆಪಿ 11, ಕಾಂಗ್ರೆಸ್ 8, ಜೆಡಿಎಸ್ 2, ಪಕ್ಷೇತರರು 2 ಜನ ಸದಸ್ಯರಿದ್ದಾರೆ. ಬಹುಮತಕ್ಕೆ 13 ಜನರ ಬೆಂಬಲ ಬೇಕು. ರಾಜ್ಯಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಅದರಂತೆ ಇಲ್ಲಿಯೂ ಹೊಂದಾಣಿಕೆ ಮಾಡಿಕೊಂಡಲ್ಲಿ ಬಿಜೆಪಿ 11, ಜೆಡಿಎಸ್‌ನ 2 ಸದಸ್ಯರು ಸೇರಿದಂತೆ ಸರಳ ಬಹುಮತಕ್ಕೆ ಅವಕಾಶವಿದೆ. ಆದರೆ, ಕಮಲ ಪಾಳಯದಲ್ಲಿ ಅಷ್ಟೊಂದು ಉತ್ಸಾಹ ಮರೀಚಿಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ಶಾಸಕರ ಕೈಯಲ್ಲಿದೆ ತೀರ್ಮಾನ:
ಕಳೆದ ಅವಧಿಯಲ್ಲಿ ಬಿಜೆಪಿ ಪುರಸಭೆಯ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಬಿಜೆಪಿಗೆ ಅಧಿಕಾರ ಗದ್ದುಗೆ ಏರಲು ಸಾಧ್ಯವಾಗುತ್ತಿಲ್ಲ. ಕಾರಣ, ಬಿಜೆಪಿಯಲ್ಲಿ ಪಜಾಗೆ ಸೇರಿದ 3 ಜನ ಸದಸ್ಯರಿದ್ದಾರೆ. ಆದರೆ, ಅವರಲ್ಲಿ ಯಾರೂ ಪೈಪೋಟಿಗೆ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ಸಿನಲ್ಲಿ 4 ಜನ ಪಜಾ ಸದಸ್ಯರಿದ್ದು, ಅವರಲ್ಲಿ ಶಾಸಕರು ಯಾರನ್ನು ಸೂಚಿಸುತ್ತಾರೆಯೋ ಅವರು ಅಧ್ಯಕ್ಷರಾಗುವ ಸಾಧ್ಯತೆ ಇದೆ. ವಿಶೇಷವೆಂದರೆ, ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಪಜಾ ಬಲಗೈ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ದೊರಕಿರಲಿಲ್ಲ.ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಾಮಾಜಿಕ ನ್ಯಾಯದಡಿಯಲ್ಲಿ ಪಜಾ ಬುದ್ದವ್ವ ಕಾಳೆ ಎಂಬುವವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಾಮಾಜಿಕ ನ್ಯಾಯ ದೊರಕಿಸಿದ್ದಾರೆ. ಈ ಬಾರಿಯೂ ಶಾಸಕರು ಸಾಮಾಜಿಕ ನ್ಯಾಯದಡಿಯಲ್ಲಿ ಬಂಜಾರ ಸಮುದಾಯ ಲಿಂಬಾಜಿ ರಾಠೋಡ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಬಂದಿರುವ ಪಜಾ ಬಲಿಗೈ ಸಮುದಾಯದ ಕಾಂಗ್ರೆಸ್ ಪಕ್ಷದ ಹಿರಿಯ ಭೀಮಾಶಂಕರ ಮೂರಮನ ಅವರ ಧರ್ಮಪತ್ನಿಗೆ ಅಧ್ಯಕ್ಷರನ್ನಾಗಿಯೂ ಮಾಡಬಹುದು ಎಂಬುದನ್ನು ಅಲ್ಲಗಳೆಯುಂತಿಲ್ಲ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಜಹಾಂಗೀರ ಸೌದಾಗರ ಇಲ್ಲವೆ ಜೆಡಿಎಸ್ ಪಕ್ಷದಿಂದ ಗೆದ್ದು ಕಾಂಗ್ರೆಸ್ ಪಕ್ಷನಲ್ಲಿ ಗುರುತಿಸಿಕೊಂಡಿರುವ ಸುಧೀರ ಕರಕಟ್ಟಿ ಅವರ ಧರ್ಮಪತ್ನಿ ಸಂಗೀತಾ ಕರಕಟ್ಟಿ ಅವರಲ್ಲಿ ಒಬ್ಬರಿಗೆ ಸದಾವಕಾಶ ಸಿಗುವ ಸಾಧ್ಯತೆ ಇದೆ. ಶಾಸಕರು ಆ.26 ರಂದು ಬೆಳಗ್ಗೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಯಾರನ್ನು ಅಧ್ಯಕ್ಷ,ಉಪಾಧ್ಯಕ್ಷ ಎಂದು ಘೋಷಿಸುತ್ತಾರೆಯೋ ಅವರು ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.ಬಿಜೆಪಿಯಲ್ಲಿ ಶಾಸಕಾಂಕ್ಷಿಗಳ ದಂಡು ಸಾಕಷ್ಟಿದ್ದರೂ ಅವರೆಲ್ಲ ಮೌನವಹಿಸಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಸಾಧ್ಯವಾಗದಿದ್ದರೂ ಸರಿ ಪಕ್ಷದಿಂದ ಅಭ್ಯರ್ಥಿಗಳನ್ನು ಘೋಷಿಸಿ ನಾಮಪತ್ರವಾದರೂ ಸಲ್ಲಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಆ ಚಟುವಟಿಕೆಗಳು ಬಿಜೆಪಿ ಸದಸ್ಯರಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಕ್ಷದ ಪಾಲಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕಾಂಗ್ರೆಸ್ ಪಕ್ಷದ ಸದಸ್ಯರು 8 ಜನರಿದ್ದರೂ ಪಕ್ಷೇತರರು ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಸೇರಿ ಒಟ್ಟು 13 ರಿಂದ 14 ಜನ ಸದಸ್ಯರು ನಮ್ಮ ಬಳಿ ಇದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನೂ ಅಭ್ಯರ್ಥಿಯನ್ನಾಗಿ ಘೋಷಿಸುತ್ತಾರೆಯೋ ಅವರು ಅಧ್ಯಕ್ಷ, ಉಪಾಧ್ಯಕ್ಷರಾಗಲಿದ್ದಾರೆ. ಒಟ್ಟಿನಲ್ಲಿ ಪುರಸಭೆ ಗದ್ದುಗೆ ಕಾಂಗ್ರೆಸ್ ಪಕ್ಷ ಹಿಡಿಯಲಿದೆ.- ಜಾವೇದ ಮೋಮಿನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಇಂಡಿ.ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಲಾಗುತ್ತಿದೆ. ಪಕ್ಷದ ಸದಸ್ಯರಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಅವಿರೋಧವಾಗುವುದಿಲ್ಲ. ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಗೆಲ್ಲಿಸಲು ಶ್ರಮಿಸಲಾಗುತ್ತದೆ.
- ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಮಂಡಲ ಅಧ್ಯಕ್ಷ, ಇಂಡಿ.