ಸಾರಾಂಶ
ಕನ್ನಡಪ್ರಭ ವಾರ್ತೆ ಕಮಲನಗರ
ಪಟ್ಟಣದ ಮಾನಕರಿ ಕ್ರಾಸ್‌ದಿಂದ ಹೊರಂಡಿ ಕ್ರಾಸ್‌ವರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಅನೇಕ ತಗ್ಗು ಗುಂಡಿ ಬಿದ್ದಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆ ಅನುಭವಿಸುವಂತಾಗಿದೆ.ಪ್ರಯಾಣಿಕರ ಸುಗಮ ಸಂಚಾರಕ್ಕೆ ಸಂಚಕಾರ ಉಂಟು ಮಾಡುವಂತಿರುವ ಈ ರಸ್ತೆ ಪ್ರಯಾಣ, ರಸ್ತೆ ದುರುಸ್ತಿ ಕಾಮಗಾರಿ ಆಗದೆ ರಸ್ತೆ ಮಧ್ಯದಲ್ಲಿ ತಗ್ಗು ಗುಂಡಿಗಳು ಸೃಷ್ಟಿಯಾಗಿವೆ. ಅಲ್ಲದೆ ಈ ತಗ್ಗಿನಲ್ಲಿ ನೀರು ನಿಂತು ಹೊಂಡಗಳು ಸೃಷ್ಟಿಯಾಗಿವೆ. ಬೈಕ್ ಸವಾರರು ತಮ್ಮ ಪ್ರಾಣ ಕೈಯಲ್ಲಿ ಹಿಡಿದು ಸವಾರಿ ಮಾಡಬೇಕಿದೆ. ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದು, ಗ್ರಾಮಸ್ಥರು ರಸ್ತೆ ದುಸ್ಥಿತಿ ಕಂಡು ಆಕ್ರೋಶ ವ್ಯಕ್ತ ಪಡಿಸಿ ಅಭಿವೃದ್ಧಿ ಮಂತ್ರ ಜಪಿಸುವ ಸ್ಥಳಿಯ ಶಾಸಕರಾದ ಪ್ರಭು ಚವ್ಹಾಣ ಅವರು ಇಲ್ಲಿಯವರೆಗೆ ಇತ್ತ ಕಡೆ ಇಣುಕಿ ನೋಡಿಲ್ಲಾ ಎಂದು ಜನ ಆರೋಪಿಸಿದ್ದಾರೆ.
ಈ ರಸ್ತೆ ನಿರ್ಮಣಗೊಂಡು ದಶಕಗಳೆ ಕಳೆದಿವೆ. ಈವರೆಗೆ ದುರುಸ್ತಿ ಭಾಗ್ಯ ಕಂಡಿಲ್ಲಾ. ಗುಣಮಟ್ಟದ ರಸ್ತೆ ನಿರ್ಮಿಸಲು ಲೋಕೊಪಯೋಗಿ ಇಲಾಖೆ ಮುಂದಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.ಕೇವಲ 4 ಕಿ.ಮೀ ವ್ಯಾಪ್ತಿಯ ಈ ರಸ್ತೆಯು ಮಳೆಯಾದರೆ ಸಾಕು ತಗ್ಗು ಗುಂಡಿಗಳದೇ ಆರ್ಭಟ ಶುರುವಾಗುತ್ತದೆ.
ಶಾಲಾ ಮಕ್ಕಳು ಆಟೋ ರಿಕ್ಷಾದಲ್ಲಿ ಬರುವಾಗ ತಮ್ಮ ಪ್ರಾಣ ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದು ಪಾಲಕರ ಆಕ್ರೋಶ. ಚುನಾವಣೆಯಲ್ಲಿ ಮಾತ್ರ ಮತ ಕೇಳುವ ಜನಪ್ರತಿನಿಧಿಗಳು ಅಧಿಕಾರ ಬಂದಾಗ ಕಣ್ಣು ಕಾಣದಂತೆ ವರ್ತಿಸುತ್ತಾರೆ ಎಂಬುದು ಸ್ಥಳಿಯರ ಅಸಮಾಧಾನಕ್ಕೆ ಕಾರಣವಾಗಿದೆ.ಕಮಲನಗರದಿಂದ ಬಾಲೂರ ರಸ್ತೆ, ಡೋಣಗಾಂವ ಕ್ರಾಸ್‌ನಿಂದ ವಾಯಾ ಡೋಣಗಾಂವ ತೋರಣಾ ಕ್ರಾಸ್ ವರೆಗೆ ಹಾಗೂ ಡೋಣಗಾಂವ ಎಮ್‌ನಿಂದ ರಂಡ್ಯಾಳವರೆಗೆ, ಕಮಲನಗರದಿಂದ ತೋರಣಾ ಗ್ರಾಮದ ವರೆಗೆ ರಸ್ತೆಗಳು ಹದಗೆಟ್ಟಿವೆ. ಶಾಸಕರು ಮತ್ತು ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರವೇ ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿ ಮಾಡಬೇಕು ಇಲ್ಲದಿದ್ದರೆ ಗ್ರಾಮಸ್ಥರು ಹಾಗೂ ಪ್ರಜ್ಞಾವಂತ ನಾಗರಿಕರು, ಸಂಘಟನೆಗಳು ರಸ್ತೆಗಿಳಿದು ಪ್ರತಿಭಟಿಸಬೇಕಾಗುತ್ತದೆ. ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.