ಸಾರಾಂಶ
ನಿಂಗರಾಜ ಬೇವಿನಕಟ್ಟಿ
ಕನ್ನಡಪ್ರಭ ವಾರ್ತೆ ನರೇಗಲ್ಲಶತಮಾನಗಳ ಇತಿಹಾಸ ಹೊಂದಿರುವ ಇಲ್ಲಿಯ ಕಾಮಣ್ಣನ ಪೂಜೆಯನ್ನು ಭಕ್ತಿಯಿಂದ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಸೋಮವಾರ ಕಾಮದೇವರ ಪ್ರತಿಷ್ಠಾಪಿಸಲಾಗಿದ್ದು, 14ರ ವರೆಗೆ ದರ್ಶನ ನೀಡಲಿದ್ದಾರೆ. 15ರಂದು ರಂಗಪಂಚಮಿ ನಡೆಯಲಿದೆ.ನರೇಗಲ್ಲನಲ್ಲಿ ಪ್ರತಿ ವರ್ಷ ಹೋಳಿ ರಂಗಪಂಚಮಿ ನಡೆಯುತ್ತದೆ. ಆದರೆ ಪ್ರತಿ ಮೂರು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಪ್ರತಿಷ್ಠಾಪಿಸುವ ಪರಮೇಶ್ವರನ ನೀತಿ ಪಾಠದ ಸಭಾ ಮಂಟಪ ಮೂರು ಶತಮಾನಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವನ್ನು ಹೊಂದಿದೆ. ಎಲ್ಲ ಮೂರ್ತಿಗಳು ಹಾಗೂ ಹಳೇ ಕಾಲದ ಅಲಂಕಾರ ನೋಡುಗರನ್ನು ತನ್ನೆಡೆಗೆ ಆಕರ್ಷಿಸುತ್ತದೆ.
320 ವರ್ಷಗಳ ಹಿಂದಿನಿಂದ ಪ್ರತಿಷ್ಠಾಪಿಸಿಕೊಂಡು ಬಂದಿರುವ ಎಲ್ಲ ಮೂರ್ತಿಗಳು ಮುಕ್ಕಾಗದಂತೆ ಬಣ್ಣಗಳಿಂದ ಅಲಂಕೃತಗೊಳಿಸಿ ಜೋಪಾನವಾಗಿ ಕಾಪಾಡಿಕೊಂಡು ಉತ್ಸವ ಸಮಿತಿಯವರು ಬಂದಿದ್ದಾರೆ. ಇಂದಿಗೂ ಹಿರಿಯರು ಸಂಪ್ರದಾಯದಂತೆ ರತಿ ಮನ್ಮಥರನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಹೋಳಿ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.ಸೋಮವಾರ ಪ್ರತಿಷ್ಠಾಪನೆ ಮಾಡಲಾಗಿರುವ ಸಭಾ ಮಂಟಪದಲ್ಲಿ ಶಿವನು ತಪಸ್ಸಿಗೆ ಕುಳಿತಿರುವಂತಿದೆ. ಸಭೆಯ ಎಡಕ್ಕೆ ವಿಶ್ವಾಮಿತ್ರ, ಬಲಕ್ಕೆ ನಾರದ ಮುನಿಗಳು ನಿಂತಿದ್ದಾರೆ. ಶಿವನ ಎದುರಿಗೆ ಕುಳಿತಿರುವ ಭಂಗಿಯಲ್ಲಿ ದೊಡ್ಡಾಕಾರದ ಕಾಮ-ರತಿ ಮೂರ್ತಿಗಳಿವೆ. ಅದರ ಬಲಕ್ಕೆ ಮುಂಭಾಗದಲ್ಲಿ ಮನ್ಮಥನು ಬಿಲ್ಲು ಬಾಣವನ್ನು ಹಿಡಿದು ಶಿವನಿಗೆ ಬಿಡುತ್ತಿರುವ ದೃಶ್ಯವಿದೆ. ಮನ್ಮಥನ ಎದುರಿಗೆ ಅವನ ಹೆಂಡತಿ ಸೀರೆಯುಟ್ಟು ನಿಂತಿರುವಂತೆ ಕಾಣುತ್ತದೆ. ಅಲ್ಲಿಯೇ ಪಕ್ಕದಲ್ಲಿ ರಾಜನೊಬ್ಬ ಸಭೆಗೆ ಬಂದಿರುವ ಹಾಗಿದೆ. ಮುಂದೆ ಕೋತಿಯಾಡಿಸುವ ದೃಶ್ಯ ಕಂಡುಬರುತ್ತದೆ. ಶಿವನು ತಪಸ್ಸಿಗೆ ಕುಳಿತಾಗ ಅದನ್ನು ಭಗ್ನಗೊಳಿಸಲು ಪಾರ್ವತಿಯೂ ಮನ್ಮಥನನ್ನು ಕಳುಹಿಸುತ್ತಾಳೆ. ಆಗ ಹೂವಿನ ಬಾಣದ ಪ್ರಯೋಗ ಮಾಡುವ ಮನ್ಮಥನಿಗೆ ಮೂರನೇ ಕಣ್ಣು ಬಿಡುವ ಶಿವ ಕಾಮದಹನ ಮಾಡುತ್ತಾನೆ. ನಂತರ ಗಂಡನನ್ನು ಕಳೆದುಕೊಂಡ ರತಿ ಶಿವ-ಪಾರ್ವತಿಯರಲ್ಲಿ ಬದುಕಿಸುವಂತೆ ಹರಕೆಯಿಡುತ್ತಾಳೆ. ಆಗ ನಿನ್ನ ಗಂಡನ ಕಾಮ (ಕೆಟ್ಟ ಗುಣ) ನನ್ನು ಸುಟ್ಟಿರುವೆ. ಆದರೆ ಮನ್ಮಥ ಯಾವತ್ತೂ ಬದುಕಿರುತ್ತಾನೆ ಎಂದು ಶಿವ ಆಶೀರ್ವದಿಸುತ್ತಾನೆ. ಅದೇ ನೀತಿಪಾಠದ ಸಭೆ ನಿರ್ಮಾಣ ಮಾಡಿ ಮಕ್ಕಳಿಗೆ ತಿಳಿಸುತ್ತೇವೆ. ಅವುಗಳ ಮುಂದೆ ಹಾಸ್ಯಕ್ಕಾಗಿ ಕೋತಿ, ಇತರೆ ಮೂರ್ತಿ, ಬೊಂಬೆಗಳನ್ನು ಈಡಲಾಗಿದೆ ಎಂದು ವಿವರಿಸುತ್ತಾರೆ ಹಿರಿಯರು.
14ರ ವರೆಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜೆ, ಉಡಿತುಂಬುವ ಕಾರ್ಯಕ್ರಮಗಳು ನಡೆಯುತ್ತವೆ. ಮಾ.15ಕ್ಕೆ ಬೆಳಗ್ಗೆ 7 ಗಂಟೆಯಿಂದ ವಿವಿಧ ವೇಷ (ಸೋಗು) ಹಾಕುವ ಯುವಕರು ಟ್ರ್ಯಾಕ್ಟರ್‌ನಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೋಗುತ್ತಾರೆ.ಕಂಕಣಭಾಗ್ಯ: ''ಬಯಕೆ ಈಡೇರಿಸುವ ಕಾಮರತಿ ಎಂದು ಪ್ರಸಿದ್ಧಿ ಪಡೆದಿರುವ ಇಲ್ಲಿನ ಉತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಅದರಲ್ಲೂ ಮಕ್ಕಳು, ಮದುವೆ ಆಗದವರು ಭಕ್ತಿಯಿಂದ ಬೇಡಿ ಕೊಂಡವರ ಇಷ್ಟಾರ್ಥ ಈಡೇರಿದ ಉದಾಹರಣೆಗಳು ಇವೆ.'''' ಅದಕ್ಕಾಗಿ ಮದುವೆಗಾಗಿ, ಮಕ್ಕಳಿಗಾಗಿ ಮೂರ್ತಿಗಳಿಗೆ ಸೀರೆ ಉಡಿಸುವ, ಅಲಂಕಾರ, ಪೂಜೆ ಮಾಡಿಸುವ ಕಾರ್ಯಗಳಿಗೆ ಜನರು ಮುಂದಾಗುತ್ತಾರೆ. ಕೆಲವರು ಬೆಳ್ಳಿ, ಬಂಗಾರ ಇನ್ನಿತರೆ ಆಭರಣ, ಉಪಕರಣಗಳನ್ನು ಹಾಕಿ ಪೂಜಿಸುವ ಸಾಂಪ್ರದಾಯವಿದೆ.
ನಮ್ಮ ಮನೆತನದ ಹಿರಿಯರು ಲೋಕ ಕಲ್ಯಾಣಕ್ಕಾಗಿ ಹಾಗೂ ಮೂಲ ಸಂಸ್ಕೃತಿಯನ್ನು ಬೆಳೆಸುವ ದೃಷ್ಟಿಯಿಂದ ಬೊಂಬೆಗಳನ್ನು ಕೊಡುಗೆಯಾಗಿ ನೀಡಿದರು ಎಂದು ಹೇಳುತ್ತಾರ ಕಳಕಪ್ಪ ಶಿವಪ್ಪ ಹುಯಿಲಗೋಳ.ಪ್ರತಿ 3 ವರ್ಷಕ್ಕೊಮ್ಮೆ ಧಾರ್ಮಿಕ ವಿಧಿವಿಧಾನದಂತೆ ಕಾಮಣ್ಣ ಹಬ್ಬವನ್ನು ನರೇಗಲ್ ಜನತೆ ಸಾಂಘಿಕವಾಗಿ ಆಚರಣೆ ಮಾಡುತ್ತಾರೆ ಎಂದು ಸ್ಥಳೀಯರಾದ ಉಮೇಶ ಕೊತಬಾಳ ಹೇಳುತ್ತಾರೆ.