ನಾಳೆಯಿಂದ ಕಮತಪುರ ಉತ್ಸವ ಪ್ರಾರಂಭ: ಹೊಳೆ ಹುಚ್ಚೇಶ್ವರ ಶ್ರೀ

| Published : Feb 14 2025, 12:45 AM IST

ಸಾರಾಂಶ

ಪಟ್ಟಣದಲ್ಲಿನ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವ ಹಾಗೂ ಕಮತಪುರ ಉತ್ಸವ-2025ನ್ನು ಫೆ.15ರಿಂದ 19ರವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕಮತಗಿ

ಪಟ್ಟಣದಲ್ಲಿನ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವ ಹಾಗೂ ಕಮತಪುರ ಉತ್ಸವ-2025ನ್ನು ಫೆ.15ರಿಂದ 19ರವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಶ್ರೀಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀಮಠದ ಪೀಠಾಧ್ಯಕ್ಷ ಹೊಳೆ ಹುಚ್ಚೇಶ್ವರ ಶ್ರೀ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀಮಠದ ಜಾತ್ರೆ ಹಾಗೂ ಕಮತಪುರ ಉತ್ಸವ ಅದ್ಧೂರಿ ಆಚರಣೆ ಮಾಡಲು ತಿರ್ಮಾನಿಸಲಾಗಿದೆ. ಅದರಂತೆ ಫೆ.15ರಂದು ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರಮಹೋತ್ಸವ ಹಾಗೂ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಿಂ.12ನೇ ಹುಚ್ಚೇಶ್ವರ ಶ್ರೀಗಳ ನೂತನ ಮಂಟಪ ಹಾಗೂ ಅಮೃತ ಶಿಲಾಮೂರ್ತಿ ಅನಾವರಣ, ಸಂಘದ ಸಭಾಭವನದ ಅಡಿಗಲ್ಲು ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಫೆ.16ರಂದು ಶ್ರೀಮಠದ ಸದ್ಯದ ಪೀಠಾಧ್ಯಕ್ಷ ಹೊಳೆ ಹುಚ್ಚೇಶ್ವರ ಶ್ರೀಗಳ 25ನೇ ವರ್ಷದ ಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ಶ್ರೀಗಳ ಪಲ್ಲಕ್ಕಿ ಮಹೋತ್ಸವ, ಬೆಳ್ಳಿ ತುಲಾಭಾರ, ಬಸವ ಪುರಾಣ, ಉಡಿತುಂಬುವ ಕಾರ್ಯಕ್ರಮ. ಫೆ.17ರಂದು ಹೊಳೆ ಹುಚ್ಚೇಶ್ವರ ಜಾತ್ರೆ ನಿಮಿತ್ತ ಬೆಳಗ್ಗೆ ಲಘು ರಥೋತ್ಸವ, ಸಾಂಸ್ಕೃತಿಕ ಭವನ ಶಿಲನ್ಯಾಸ, ನಂತರ ಬೃಹತ್ ಜಾನಪದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೆರವಣಿಗೆ ಹಾಗೂ ಕಳಸದ ಮೆರವಣಿಗೆ, ಸಂಜೆ 5ಗಂಟೆಗೆ ಮಹಾರಥೋತ್ಸವ ನಡೆಯುವುದು. ಫೆ.18ರಂದು ಸಂಜೆ 5ಗಂಟೆಗೆ ಬಸವ ಪುರಾಣ ಮಹಾಮಂಗಲ, ಲಕ್ಷ ದೀಪೋತ್ಸವ ಹಾಗೂ ಹುಚ್ಚೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವುರು. ಫೆ.19ರಂದು ಸಂಜೆ 6ಗಂಟೆಗೆ ಸಂಗೀತ ಸಂಭ್ರಮ ಹಾಗೂ ತಾರಾ ಮಂಜರಿ ಕಾರ್ಯಕ್ರಮದಲ್ಲಿ ರವೀಂದ್ರ ಸೊರಗಾಂವಿ, ಸುಹಾನ ಸೈಯದ್, ಜೋಗಿ ಸುನೀತಾ, ಕಂಬದ ರಂಗಯ್ಯ, ರಾಜೇಶ್ ಕೃಷ್ಣನ್, ಶಮಿತಾ ಮಲ್ನಾಡ್ ತಂಡ ನಡೆಸಿಕೊಡಲಿದೆ,. ಕಮತಗಿ ಪಟ್ಟಣ ಸೇರಿದಂತೆ ಶ್ರೀಮಠದ ಸದಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಅಮರೇಶ್ವರ ದೇವರು, ಶಿವಶರಣ ದೇವರು ಹಾಗೂ ಕಮತಪುರ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಎಸ್.ಜಮಖಂಡಿ, ಕಮತಪುರ ಉತ್ಸವ ಸಮಿತಿ ಸದಸ್ಯರಾದ ಎಸ್.ಎಸ್.ಮಂಕಣಿ, ಹುಚ್ಚಪ್ಪ ಸಿಂಹಾಸನ, ಎನ್.ಎಲ್.ತಹಸೀಲ್ದಾರ್‌, ದೇವಿಪ್ರಸಾದ ನಿಂಬಲಗುಂದಿ, ಗುರಲಿಂಗಪ್ಪ ಪಾಟೀಲ, ಯಲ್ಲಪ್ಪ ವಡ್ಡರ, ಶ್ರೀಕಾಂತ ಹಾಸಲಕರ, ಬಸವರಾಜ ಕುಂಬಳಾವತಿ, ಸಂಗಮೇಶ ಮನ್ನಿಕೇರಿ, ಚಂದು ಕುರಿ, ಶಾಂತಕುಮಾರ ಯರಗಲ್, ಲಕ್ಷ್ಮಣ ದ್ಯಾಮಣ್ಣವರ ಇತರರಿದ್ದರು.