ಗರುಡಗಂಭ ಸ್ವಾಮಿ ಸಾಮಾಜಿಕ ಕಳಕಳಿ ಹೋರಾಟಗಾರರು

| Published : Jan 31 2025, 12:48 AM IST

ಸಾರಾಂಶ

ಫೆಬ್ರವರಿ ತಿಂಗಳಿನಲ್ಲಿ 40 ವರ್ಷಗಳಿಗೆ ಸರ್ಕಾರದೊಂದಿಗೆ ಕರಾರು ನೊಂದಣಿಯಾಗಲಿದ್ದು, ಆನಂತರ ಕಾರ್ಖಾನೆ ಆರಂಭವಾಗಲಿದೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರಗರುಡಗಂಭ ಸ್ವಾಮಿ ಅವರು ಸಾಮಾಜಿಕ ಕಳಕಳಿ ಹೋರಾಟಗಾರರು. ರೈತರ ಹಿತ ಕಾಯುವ ಸಲುವಾಗಿ ಚಳವಳಿ ಮಾಡುವ ಸಂದರ್ಭದಲ್ಲಿ ಗರುಡಗಂಭವೇರಿದ ಕೆ.ಎಲ್. ಸ್ವಾಮಿಯವರು ಗರುಡಗಂಭಸ್ವಾಮಿ ಆಗಿದ್ದು, ಈ ಕಂಬದ ವೈಭವ ಮತ್ತು ಹೆಸರು ಪ್ರಚಾರಗೊಳ್ಳುವಲ್ಲಿ ಇವರ ಪಾತ್ರ ಪ್ರಮುಖವಾದದ್ದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಗರುಡಗಂಭ ಸಂವೇದನಾ ಸೇವಾ ಸಂಘದಿಂದ ಗರುಡಗಂಭ ವೃತ್ತದಲ್ಲಿ ಏರ್ಪಡಿಸಿದ್ದ ಕಂಬದ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆ ಬಿಡುಗಡೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾಮಿ ಅವರಿಗೆ ಗರುಡಗಂಭದ ಮೇಲೆ ಪೂಜ್ಯ ಭಾವನೆ ಇದ್ದು, ಅದರ ಸೌಂದರ್ಯವನ್ನು ಹೆಚ್ಚಿಸಲು ಹೂ ಗಿಡಗಳನ್ನು ಬೆಳೆಸಿ ಪೋಷಿಸುವುದರ ಜತೆಗೆ ತಪ್ಪದೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ ಎಂದರು. ರೈತರು ಮತ್ತು ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಚುಂಚನಕಟ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್‌ನವರು ಗುತ್ತಿಗೆ ಕರಾರು ಮಾಡಿಸಿಕೊಳ್ಳುವಂತೆ ಸರ್ಕಾರಕ್ಕೆ ಈ ಹಿಂದೆ ಮನವಿ ಮಾಡಲಾಗಿದ್ದು, ಫೆಬ್ರವರಿ ತಿಂಗಳಿನಲ್ಲಿ 40 ವರ್ಷಗಳಿಗೆ ಸರ್ಕಾರದೊಂದಿಗೆ ಕರಾರು ನೊಂದಣಿಯಾಗಲಿದ್ದು, ಆನಂತರ ಕಾರ್ಖಾನೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಅಕ್ಕಪಕ್ಕದ ಜಮೀನಿನ ಮಾಲೀಕರ ಒಪ್ಪಿಗೆ ಪಡೆಯಬೇಕೆಂಬ ಕಾನೂನನ್ನು ರಾಮಕೃಷ್ಣ ಹೆಗಡೆ ಅವರ ಸರ್ಕಾರ ಜಾರಿಗೆ ತರುವುದನ್ನು ವಿರೋಧಿಸಿ, ರೈತ ಪರ ಸಂಘಟನೆಗಳು ಹೋರಾಟ ಮಾಡುವ ಸಂದರ್ಭದಲ್ಲಿ ಗರುಡಗಂಭವೇರಿ ಪ್ರತಿಭಟನೆ ಮಾಡಿದ್ದರು ಎಂದು ಹೇಳಿದರು. ರಾಜ್ಯದಲ್ಲಿ ಯೋಜನಾ ಬದ್ದವಾದ ಸುಂದರ ಪಟ್ಟಣ ಕೆ.ಆರ್. ನಗರ ಮತ್ತು ಭದ್ರಾವತಿ ಆಗಿದ್ದು, ಕೆ.ಆರ್. ನಗರದ ಪುರಸಭೆಯವರು ಪಟ್ಟಣದ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ಸಂಪೂರ್ಣವಾಗಿ ಸ್ವಚ್ಛತೆ ಮಾಡುವಲ್ಲಿ ವಿಫಲರಾಗಿರುವ ಇವರು, ಎಲ್ಲೆಂದರಲ್ಲಿ ತರಕಾರಿ ಸೇರಿದಂತೆ ಇತರ ವ್ಯಾಪಾರಸ್ಥರು ರಸ್ತೆ ಬದಿಗಳಲ್ಲೇ ವ್ಯಾಪಾರ ಮಾಡುತ್ತಿದ್ದು, ನಗರ ಮಾಲಿನ್ಯಗೊಂಡಿದೆ ಈ ಬಗ್ಗೆ ಶಾಸಕರು ಮತ್ತು ಪುರಸಭಾ ಆಡಳಿತ ಎಚ್ಚರವಹಿಸಬೇಕೆಂದು ಸಲಹೆ ನೀಡಿದರು. ಪುರಸಭೆ ಅಧ್ಯಕ್ಷೆ ಶಿವುನಾಯಕ್, ಸದಸ್ಯರಾದ ಕೆ.ಪಿ. ಪ್ರಭುಶಂಕರ್, ಸೈಯದ್‌ ಸಿದ್ದಿಕ್, ಮಾಜಿ ಸದಸ್ಯ ಕೆ. ವಿನಯ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ. ನಟರಾಜು, ಯುವ ರೈತ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್, ರೈತ ಮುಖಂಡ ಎಂ.ಜೆ. ಕುಮಾರ್, ಸಾಹಿತಿ ಹೆಗ್ಗಂದೂರು ಪ್ರಭಾಕರ್, ವಕೀಲರಾದ ಜಿ.ಎಲ್. ಧರ್ಮ, ಶಿವರಾಜು, ಮುಖಂಡರಾದ ಕೃಷ್ಣಯ್ಯ, ಕೆ.ಎಸ್. ಮಂಜುನಾಥ್, ಮಹದೇವ್ ಇದ್ದರು.-------------------