ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದ ನೂರಾರು ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದ ಕಂಬಳದ ಪ್ರಸಿದ್ಧ ಕೋಣ ‘ನಂದಳಿಕೆ ಪಾಂಡು’ (26) ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದೆ.
ಉಡುಪಿ : ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದ ನೂರಾರು ಚಿನ್ನದ ಪದಕಗಳನ್ನು ಗೆದ್ದುಕೊಟ್ಟಿದ್ದ ಕಂಬಳದ ಪ್ರಸಿದ್ಧ ಕೋಣ ‘ನಂದಳಿಕೆ ಪಾಂಡು’ (26) ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದೆ. ಉಡುಪಿಯ ಹಿರಿಯ ಕಂಬಳದ ಕೋಣಗಳ ಮಾಲಕ ಶ್ರೀಕಾಂತ್ ಭಟ್ ನಂದಳಿಕೆ ಅವರ ಮನೆಯಲ್ಲಿದ್ದ ಈ ಕೋಣ ನಂದಳಿಕೆ ಪಾಂಡು ಎಂದೇ ಖ್ಯಾತವಾಗಿತ್ತು, ಕುಟ್ಟಿ ಎಂಬ ಇನ್ನೊಂದು ಕೋಣಕ್ಕೆ ಜೋಡಿಯಾಗಿ ಪಾಂಡು ಸುಮಾರು 10 ವರ್ಷಗಳ ಕರಾವಳಿಯ ಕಂಬಳಗಳಲ್ಲಿ ತಮ್ಮ ಸಾರ್ವಭೌಮತೆ ಸ್ಥಾಪಿಸಿತ್ತು, ಕೊಂಡೆಟ್ಟು ಚೆನ್ನ, ಕೆಪಿ ಬೊಳ್ಳ ಮುಂತಾದ ಕೋಣಗಳ ಜೊತೆಯಾಗಿ ಸುಮಾರು 200ಕ್ಕೂ ಹೆಚ್ಚು ಕಂಬಳಗಳಲ್ಲಿ ಮಾಲಕರಿಗೆ ಪದಕಗಳನ್ನು ಗೆದ್ದುಕೊಟ್ಟಿದ್ದು ಐತಿಹಾಸಿಕ ದಾಖಲೆಯಾಗಿದೆ.ಉದ್ದ ಮೈ ಹೊಂದಿದ್ದ, ಕಂಬಳದ ಕಣದಲ್ಲಿಯೂ ಹೊರಗೂ ಸ್ವಲ್ಪ ಹೆಚ್ಚೆ ಎನ್ನುವಂತಹ ರೋಷಾವೇಶ ಹೊಂದಿದ್ದ ಪಾಂಡು, ಕಂಬಳದ ಕರೆಗೆ ಇಳಿದರೆ ಮಿಂಚು ಓಡಿದಂತಾಗುತಿತ್ತು, ಅನೇಕ ಬಾರಿ ತನ್ನ ಜೋಡಿ ಕೋಣವನ್ನು ಮುಂದೆಳೆದುಕೊಂಡು ಓಡುತಿತ್ತು, ತನ್ನನ್ನು ಓಡಿಸುವ ಓಟಗಾರರಿಗೂ ಪಾಂಡು ಸವಾಲಾಗಿತ್ತು. ಎಡ ಅಥವಾ ಬಲ ಯಾವ ಭಾಗದಲ್ಲಿ ಕಟ್ಟಿದರೂ ಸಲಿಸಾಗಿ ಓಡುತಿದ್ದ ಪಾಂಡು, ಹತ್ತಕ್ಕೂ ಹೆಚ್ಚು ಸೀಸನ್‌ನಲ್ಲಿ ಸರಣಿ ಶ್ರೇಷ್ಠ ಗೌರವವನ್ನು ಪಡೆದಿತ್ತು.
ಇತ್ತೀಚೆಗೆ ಕಂಬಳಗಳು ಆನ್‌ಲೈನ್‌ನಲ್ಲಿ ಲೈವ್ ಪ್ರಸಾರವಾಗುವುದರಿಂದ ಪಾಂಡು ವಿದೇಶದಲ್ಲಿರುವ ಕರಾವಳಿಯ ಕಂಬಳಪ್ರಿಯರ ಮೆಚ್ಚುಗೆ ಗಳಿಸಿತ್ತು. ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಪಾಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಗೌರವಿಸಲ್ಪಟ್ಟಿತ್ತು.ಕಾರ್ಕಳದ ಜೀವನದಾಸ ಅಡ್ಯಂತಾಯ ಅವರಿಂದ ಕಂಬಳಕ್ಕೆ ಪರಿಚಯಿಸಲ್ಪಟ್ಟ ಪಾಂಡುವನ್ನು ಬಹುಕಾಲ ಶ್ರೀಕಾಂತ್ ಭಟ್ ಅತ್ಯಂತ ಪ್ರೀತಿಯಿಂದ ಸಾಕಿದ್ದರು. ಸೋಮವಾರ ಪಾಂಡುವನ್ನು ಸ್ನಾನ ಮಾಡಿಸಿ, ಮೈತುಂಬಾ ಎಣ್ಣೆ, ಗಂಧ, ಅರಸಿನ ಹಚ್ಚಿ, ಹೂಮಾಲೆಗಳಿಂದ ಅಲಂಕರಿಸಿ ಗೌರವದಿಂದ ಧಪನ ಮಾಡಿದ್ದಾರೆ. ಈ ಸಂದರ್ಭದಲ್ಲಿ ನೂರಾರು ಮಂದಿ ಅದರ ಅಭಿಮಾನಿಗಳು ಉಪಸ್ಥಿತರಿದ್ದ ಭಾರವಾದ ಮನಸ್ಸಿನಿಂದ ಬೀಳ್ಕೊಟ್ಟರು.