ಒಂಭತ್ತನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಹೊನಲು ಬೆಳಕಿನ ಮಂಗಳೂರು ಕಂಬಳ ಮಂಗಳೂರು ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿ. 27 ರಂದು ನಡೆಯಲಿದೆ.
ಮಂಗಳೂರು: ಒಂಭತ್ತನೇ ವರ್ಷದ ರಾಮಲಕ್ಷ್ಮಣ ಜೋಡುಕರೆ ಹೊನಲು ಬೆಳಕಿನ ಮಂಗಳೂರು ಕಂಬಳ ಮಂಗಳೂರು ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿ. 27 ರಂದು ನಡೆಯಲಿದೆ.ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ, ಸಂಸದ ಕ್ಯಾ.ಬ್ರಿಜೇಶ್ ಚೌಟ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಅಂದು ಬೆಳಗ್ಗೆ ೮ ಗಂಟೆಗೆ ಕಂಬಳದ ಉದ್ಘಾಟನೆಯನ್ನು ಕಂಕನಾಡಿ ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊಕ್ತೇಸರ ಚಿತ್ತರಂಜನ್ ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹಿತ ಶಾಸಕರು, ರಾಜಕೀಯ ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ. ಮರುದಿನ ಬೆಳಗ್ಗೆ 11 ಗಂಟೆಗೆ ಕಂಬಳ ಮುಕ್ತಾಯಗೊಳ್ಳಲಿದೆ. ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶ ವಿದೇಶದ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಪರಿಚಯವಾಗಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭಗೊಂಡ ಕಂಬಳ ೯ನೇ ವರ್ಷಕ್ಕೆ ಕಾಲಿಟ್ಟಿದ್ದು ಸಂತಸದ ವಿಚಾರ ಎಂದರು.ಕಂಬಳ ಸಮಿತಿಯ ಪ್ರಸಾದ್ ಕುಮಾರ್ ಶೆಟ್ಟಿ, ವಿಜಯ ಕುಮಾರ್ ಕಂಗಿನಮನೆ, ಕಿರಣ್ ಕೋಡಿಕಲ್, ಸಂಜಯ್ ಪ್ರಭು, ವಸಂತ ಪೂಜಾರಿ, ಸುಜಿತ್ ಪ್ರತಾಪ್ ಮಂಗಲ್ಪಾಡಿ, ಈಶ್ವರ್ ಪ್ರಸಾದ್ ಶೆಟ್ಟಿ, ಜೋಯ್ಸನ್ ಡಿ. ಸೋಜಾ, ಅಜಿತ್ ಬೋಪಯ್ಯ, ನಂದನ್ ಮಲ್ಯ, ಸಚಿನ್ ಶೆಟ್ಟಿ ಮತ್ತಿತರರಿದ್ದರು.
ಸಮಯ ಪಾಲನೆಗೆ ಆದ್ಯತೆಕಂಬಳ ಸಮಿತಿಯ ತೀರ್ಮಾನದಂತೆ 24 ಗಂಟೆಯೊಳಗೆ ಕಂಬಳ ಮುಕ್ತಾಯಗೊಳಿಸಲು ಎಲ್ಲರೂ ಶ್ರಮಿಸುವಂತೆ ಕೋರಲಾಗಿದೆ. ಬೆಳಗ್ಗೆ ಉದ್ಘಾಟನೆ ಬಳಿಕ 45 ನಿಮಿಷದಲ್ಲಿ ಕೋಣಗಳನ್ನು ಕಂಬಳ ಕರೆಗೆ ಇಳಿಸಬೇಕು. ಬೆಳಗ್ಗೆ 10.30 ಗಂಟೆಗೆ ನೇಗಿಲು ಹಿರಿಯ, ಮಧ್ಯಾಹ್ನ 2.30ರಿಂದ 3 ಗಂಟೆ ಹಗ್ಗ ಕಿರಿಯ, ಹಗ್ಗ ಹಿರಿಯ, ಸಂಜೆ 5. 30 ಗಂಟೆ ಕನ ಹಲಗೆ, ಅಡ್ಡ ಹಲಗೆ ವಿಭಾಗಗಳ ಸ್ಪರ್ಧೆ ನಡೆಯಲಿದೆ. ಈ ಬಾರಿ ಜೂನಿಯರ್ ವಿಭಾಗದಲ್ಲಿ 70ರಿಂದ 80 ಕೋಣಗಳು ಬರಲಿದ್ದು, ಕಿರಿಯ ಕೋಣ ಒಂಭತ್ತು ಬಾರಿ ಓಡಬೇಕು. ಗೆದ್ದ ಕೋಣಗಳಿಗೆ ಕ್ರಮವಾಗಿ ಎರಡು ಪವನ್ ಹಾಗೂ ಒಂದು ಪವನ್ ಚಿನ್ನ ಬಹುಮಾನ ನೀಡಲಾಗುತ್ತದೆ. ಒಟ್ಟು 160 ರಿಂದ 170 ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. 23 ಗಂಟೆಯಲ್ಲಿ ಕಂಬಳ ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ ಎಂದು ಕಂಬಳ ತೀರ್ಪುಗಾರ ವಿಜಯ ಕುಮಾರ್ ಕಂಗಿನಮನೆ ತಿಳಿಸಿದರು. 9ನೇ ವರ್ಷಕ್ಕೆ 9 ಕಾರ್ಯಕ್ರಮ
ನಗರ ಪ್ರದೇಶದಲ್ಲಿ ನೆಲೆಸಿರುವ ಜನರಿಗೆ ನಮ್ಮ ತುಳುನಾಡಿನ ಕಂಬಳದ ಪರಿಚಯವಾಗಬೇಕು ಎಂದು ವಿಶೇಷವಾಗಿ ಈ ಬಾರಿ 9ನೇ ವರ್ಷಕ್ಕೆ ೯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.೧. ರಾಣಿ ಅಬ್ಬಕ್ಕ - ಚಾರಿತ್ರಿಕ ಚಿತ್ರಕಲಾ ಪ್ರದರ್ಶನ - ಪೋರ್ಚುಗೀಸರ ವಿರುದ್ಧ ದಿಟ್ಟತನದಿಂದ ಹೋರಾಟ ಮಾಡಿದ ತೌಳವ ಮಣ್ಣಿನ ಹೆಮ್ಮೆಯ ರಾಣಿ ‘ರಾಣಿ ಅಬ್ಬಕ್ಕ’ ರವರ ಚಾರಿತ್ರಿಕ ಚಿತ್ರಕಲಾ ಪ್ರದರ್ಶನ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕರಾಮ ಪೂಜಾರಿಯವರ ಸಹಯೋಗದಿಂದ ನಡೆಯಲಿದೆ.
೨. ವಂದೇ ಮಾತರಂ ೧೫೦ - ಸಾಮೂಹಿಕ ಗೀತ ಗಾಯನ - ಭಾರತ ಸ್ವಾತಂತ್ರದ ಧ್ಯೇಯ ಮಂತ್ರ ವಂದೇ ಮಾತರಂ ಗೀತೆಗೆ ೧೫೦ ವರ್ಷ ಪೂರೈಸಿದ ಹಿನ್ನಲೆಯಲ್ಲಿ ೧೫೦ ವಿದ್ಯಾರ್ಥಿನಿಯರಿಂದ ವಂದೇ ಮಾತರಂ ಸಾಮೂಹಿಕ ಗೀತ ಗಾಯನ - ಬೆಳಗ್ಗೆ ೮.೩೦ಕ್ಕೆ ನಡೆಯಲಿದೆ.೩. ಮಂಗಳೂರು ಕಂಬಳ ಪ್ರಶಸ್ತಿ ೨೦೨೫ - ಉದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ‘ಬ್ಯಾಕ್ ಟು ಊರು’ ಪರಿಕಲ್ಪನೆಗೆ ಶಕ್ತಿ ತುಂಬುತ್ತಿರುವ ೯ ಮಂದಿಗೆ ಮಂಗಳೂರು ಕಂಬಳ ಪ್ರಶಸ್ತಿ ೨೦೨೫ ನೀಡಿ ಗೌರವಿಸಲಾಗುವುದು.೪. ಏಕ್ ಪೇಡ್ ಮಾ ಕೆ ನಾಮ್ - ತಾಯಿಯ ಹೆಸರಿನಲ್ಲಿ ಒಂದು ಗಿಡ - ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನವ ಸಂಕಲ್ಪಗಳಲ್ಲಿ ಒಂದಾಗಿರುವ ‘ಏಕ್ ಪೇಡ್ ಮಾ ಕೆ ನಾಮ್ - ತಾಯಿಯ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.೫. ವಿಶೇಷ ಸಾಮರ್ಥ್ಯ ಹಾಗೂ ಓಲ್ಡ್ ಏಜ್ಡ್ ಹೋಮ್‌ನಲ್ಲಿ ನೆಲೆಸಿರುವ ಮಂಗಳೂರು ನಗರ ಪರಿಸರದ ನಿವಾಸಿಗಳನ್ನು ಕರೆತಂದು ಕಂಬಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು.೬. ರಂಗ್‌ದ ಕೂಟ - ಹೆಸರಿನಲ್ಲಿ ಚಿತ್ರಕಲಾ ಸ್ಪರ್ಧೆಯು ರಂಗ್‌ದ ಕಿನ್ಯ, ರಂಗ್‌ದ ಎಲ್ಯ, ರಂಗ್‌ದ ಮಲ್ಲ ಹಾಗೂ ರಂಗ್‌ದ ಕೂಟ ವಿಭಾಗಗಳಲ್ಲಿ ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧೨.೩೦ರ ತನಕ ನಡೆಯಲಿದೆ.೭. ಮಂಗಳೂರು ಕಂಬಳ ೨೦೨೫ ರೀಲ್ಸ್ - ಮಂಗಳೂರು ಕಂಬಳದ ಕ್ಷಣಗಳನ್ನು ರೀಲ್ಸ್ ಮಾಡುವ ಮೂಲಕ ಅತೀ ಹೆಚ್ಚು ವೀಕ್ಷಣೆ ಪಡೆಯುವ ರೀಲ್ಸ್‌ಗೆ ಬಹುಮಾನ ನೀಡಲಾಗುವುದು.೮. ಮಂಗಳೂರು ಕಂಬಳ ಫೋಟೊಗ್ರಾಫಿ - ಫೋಟೋಗ್ರಾಫಿ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ನುರಿತ ತೀರ್ಪುಗಾರರ ಮೂಲಕ ಆಯ್ಕೆಯಾದ ಚಿತ್ರಕ್ಕೆ ನಗದು ಬಹುಮಾನ ನೀಡಲಾಗುವುದು.೯. ಎಐ ಕ್ರಿಯೇಟಿವ್ ಎಡಿಷನ್ - ಕೃತಕ ಬುದ್ಧಿಮತ್ತೆ (ಎಐ) ಉಪಯೋಗಿಸಿ ಮಂಗಳೂರು ಕಂಬಳ ಕಲಾಕೃತಿಯ ರಚಿಸುವ ಸ್ಪರ್ಧೆ ನಡೆಯಲಿದ್ದು ಉತ್ತಮ ಕಲಾಕೃತಿಗೆ ಬಹುಮಾನ ನೀಡಲಾಗುವುದು.