16ನೇ ವರ್ಷದ ಜಪ್ಪಿನಮೊಗರು ಹೊನಲು ಬೆಳಕಿನ ‘ಜಯ-ವಿಜಯ ಜೋಡುಕರೆ ಕಂಬಳ‘ ಫೆ.14 ಮತ್ತು 15ರಂದು ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಮಂಗಳೂರು: ಜಯ-ವಿಜಯ ಜೋಡುಕರೆ ಕಂಬಳ ಸಮಿತಿ ವತಿಯಿಂದ ಕೀರ್ತಿಶೇಷ ಜೆ. ಜಯಗಂಗಾಧರ ಶೆಟ್ಟಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಅವರ ಸ್ಮರಣಾರ್ಥ 16ನೇ ವರ್ಷದ ಜಪ್ಪಿನಮೊಗರು ಹೊನಲು ಬೆಳಕಿನ ‘ಜಯ-ವಿಜಯ ಜೋಡುಕರೆ ಕಂಬಳ‘ ಫೆ.14 ಮತ್ತು 15ರಂದು ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ, ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ನಡೆಯಲಿರುವ ಈ ಕಂಬಳವನ್ನು ಫೆ.14 ರಂದು ಬೆಳಗ್ಗೆ 8.30ಕ್ಕೆ ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಆಸ್ರಣ್ಣ ಅವರ ಆಶೀರ್ವಚನದೊಂದಿಗೆ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಯವರು ಉದ್ಘಾಟಿಸಲಿದ್ದಾರೆ. ಮಂಗಳೂರಿನ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಸುಬ್ಬಯ್ಯ ಭಂಡಾರಿ ಪಟ್ಟದ ಯಜಮಾನರು ಜಪ್ಪುಗುಡ್ಡಗುತ್ತು ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮೊದಲಾದವರು ಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕನಹಲಗೆ, ಹಗ್ಗ ವಿಭಾಗ, ನೇಗಿಲು ವಿಭಾಗ ಹಾಗೂ ಅಡ್ಡ ಹಲಗೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ವಿಜೇತ ಕೋಣಗಳಿಗೆ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಈ ಬಾರಿಯ ಕಂಬಳದಲ್ಲಿ ಸುಮಾರು 150 ಕ್ಕೂ ಅಧಿಕ ಜತೆ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಕಂಬಳಕ್ಕೆ ಅನುದಾನಕ್ಕೆ ಮನವಿ:

ಸರಕಾರದಿಂದ ಕೆಲವು ಕಂಬಳಗಳಿಗೆ ಅನುದಾನ ಬಿಡುಗಡೆಯಾಗುತ್ತಿದೆ. ಜಪ್ಪಿನಮೊಗರು ಕಂಬಳಕ್ಕೆ 2023ನೇ ಸಾಲಿನಲ್ಲಿ ಘೋಷಣೆ ಮಾಡಿದ 5 ಲ. ರು. ಇತ್ತೀಚೆಗೆ ಬಂದಿದೆ. ಇನ್ನೂ ಕೆಲವು ಕಂಬಳಗಳಿಗೆ ಅನುದಾನ ಬಂದಿಲ್ಲ. ಶೀಘ್ರದಲ್ಲಿ ಬರುವ ನಿರೀಕ್ಷೆ ಇದೆ. ಮಂಗಳೂರು ಮಹಾನಗರ ಪಾಲಿಕೆಯಿಂದ ಜಪ್ಪಿನಮೊಗರು ಕಂಬಳಕ್ಕೆ 2.5 ಲ.ರು. ನೀಡಲಾಗಿತ್ತು. ಈ ಬಾರಿ ನಗರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಮೂರು ಕಂಬಳಗಳಿಗೆ ಪಾಲಿಕೆಯಿಂದ ತಲಾ 2.5 ಲ.ರು. ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಶಾಸಕರು ತಿಳಿಸಿದರು.

ಫ್ಲೆಕ್ಸ್ ಝೋನ್ ಶೀಘ್ರ ರಚಿಸಿ: ನಗರದಲ್ಲಿ ಫ್ಲೆಕ್ಸ್ ಹಾಕುವುದನ್ನು ನಿಷೇಧಿಸಿರುವುದರಿಂದ ಕಂಬಳ ಪ್ರಚಾರಕ್ಕೂ ಅಡ್ಡಿಯಾಗಿದೆ. ನಾವು ನಿಯಮ ಮೀರುವುದಿಲ್ಲ. ಕಂಬಳ ಸೇರಿದಂತೆ ಕರಾವಳಿಯ ಸಂಸ್ಕೃತಿ ಆಚರಣೆಗಳ ಪ್ರಚಾರಕ್ಕೆ ಅನುಕೂಲವಾಗುವಂತೆ ಸುರಕ್ಷಿತ ಜಾಗಗಳಲ್ಲಿ ಫ್ಲೆಕ್ಸ್ ಅಳವಡಿಸಲು ಫ್ಲೆಕ್ಸ್ ಝೋನ್ ಮಾಡಿಕೊಡಬೇಕು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ನೀಡಿರುವ ಭರವಸೆಯನ್ನು ಶೀಘ್ರ ಈಡೇರಿಸಬೇಕು ಎಂದು ಶಾಸಕ ವೇದವ್ಯಾಸ್‌ ಕಾಮತ್ ಒತ್ತಾಯಿಸಿದರು.ಸಮಿತಿಯ ಅಧ್ಯಕ್ಷ ಅನಿಲ್ ಶೆಟ್ಟಿ, ಕಾರ್ಯಾಧ್ಯಕ್ಷರಾದ ವೀಣಾ ಮಂಗಳ, ಪ್ರವೀಣ್ ಚಂದ್ರ ಆಳ್ವ, ಶಕೀನ್ ಶೆಟ್ಟಿ, ಸಂದೀಪ್ ಶೆಟ್ಟಿ, ನಿಶಾನ್ ಪೂಜಾರಿ, ಸಂತೋಷ್ ಆಳ್ವ, ರಾಜಾನಂದ ರೈ ಕೊಪ್ಪರಿಗೆ ಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಅತಿಕಾರಿ, ಬಾಲಕೃಷ್ಣ ಶೆಟ್ಟಿ, ಸಮಿತಿಯ ಇತರ ಪದಾಧಿಕಾರಿಗಳಾದ ಚಿತ್ತರಂಜನ್ ಬೋಳಾರ್, ರಾಕೇಶ್ ರೈ, ಗಣೇಶ್ ಶೆಟ್ಟಿ, ಭುಜಂಗ ಶೆಟ್ಟಿ ಜಪ್ಪುಗುಡ್ಡೆ, ರಾಜೇಶ್ ಶೆಟ್ಟಿ, ಜೆ.ನಾಗೇಂದ್ರ ಕುಮಾರ್, ಸಾಯುದ್ದೀನ್, ಸುರೇಶ್ ಶೆಟ್ಟಿ ಕೊಳಂಬೆ, ಶೈಲೇಶ್ ಭಂಡಾರಿ, ಸುರೇಂದ್ರ ಹಳೆಮನೆ, ಭಾಸ್ಕರಚಂದ್ರ ಶೆಟ್ಟಿ ಇದ್ದರು.