ಮಂಗಳೂರು: ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ, ಐಕಳ ಮತ್ತು ಮುಂಬೈ ವತಿಯಿಂದ ಶನಿವಾರ ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳದ ಸುವರ್ಣ ಸಂಭ್ರಮದ ಕಂಬಳೋತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ, ಸಹಕಾರ ರತ್ನ, ಕಂಬಳದ ಮಹಾಪೋಷಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ‘ಕಂಬಳ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಂಬಳ ಪ್ರೇಮಿಯಾಗಿ ನಿರಂತರವಾಗಿ ಕರಾವಳಿ ಭಾಗದ ಸಾಂಪ್ರದಾಯಿಕ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳವನ್ನು ಪ್ರೋತ್ಸಾಹಿಸಿಸುತ್ತಾ, ಮಾರ್ಗದರ್ಶನ ಮಾಡುತ್ತಾ ಬಂದಿರುವ ಡಾ.ಎಂ.ಎನ್‌. ರಾಜೇಂದ್ರ ಕುಮಾರ್ ಅವರನ್ನು ತುಳುನಾಡಿನ ಸಮಸ್ತ ಕಂಬಳ ಅಭಿಮಾನಿಗಳ ಪರವಾಗಿ ಕಂಬಳೋತ್ಸವದ ಈ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಳೆದ 32 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸಾರ್ಥಕ ಸೇವೆಯನ್ನು ಗೈದಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ಎಸ್‌ಸಿಡಿಸಿಸಿ ಬ್ಯಾಂಕಿನ ಅಪೂರ್ವ ಪ್ರಗತಿಯ ಸ್ಫೂರ್ತಿ ಶಕ್ತಿಯಾಗಿದ್ದಾರೆ. ಸಹಕಾರಿ ಕ್ಷೇತ್ರವನ್ನೇ ತನ್ನ ಉಸಿರಾಗಿಸಿಕೊಂಡು, ಸಹಕಾರ ರಂಗದ ಸಮಕಾಲೀನ ಸಾರ್ವಭೌಮರಾಗಿ, ಆರ್ಥಿಕ ಸಬಲೀಕರಣದ ರೂವಾರಿಯಾಗಿ ತನ್ನ ಅನನ್ಯ ಸೇವೆಯಿಂದ ಸಹಕಾರಿ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟವರು ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌. ಈ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೀರ್ತಿ ಪತಾಕೆಯನ್ನು ದಿಗಂತದೆತ್ತರಕ್ಕೇರಿಸಿ ಸಹಕಾರಿಗಳೆಲ್ಲರ ಪಾಲಿಗೆ ‘ಸಹಕಾರ ರತ್ನ’ರಾಗಿದ್ದಾರೆ.

ಸಮಾಜಸೇವಾ ಕ್ಷೇತ್ರದಲ್ಲಿ ‘ಸರ್ವರಿಗೂ ಸಮಬಾಳು, ಸಮಪಾಲು’ ಎಂಬ ತತ್ವದಲ್ಲಿ ನಂಬಿಕೆಯಿಟ್ಟುಕೊಂಡು ದೃಢಸಂಕಲ್ಪದೊಂದಿಗೆ ಮಹತ್ತರವಾದ ಕಾರ್ಯ ನಿರ್ವಹಣೆ ಮೂಲಕ ರಾಷ್ಟ್ರ ಮಟ್ಟದಲ್ಲಿ ಪ್ರಭಾವಶಾಲಿ ನಾಯಕತ್ವದಿಂದ ಗುರುತಿಸಿಕೊಂಡವರು.

ನಾಲ್ಕೂವರೆ ದಶಕಗಳಿಂದ ಸಹಕಾರ ರಂಗದಲ್ಲಿ ನಿರ್ವಂಚನೆಯಿಂದ ಕಾರ್ಯ ನಿರ್ವಹಿಸುತ್ತಾ ಬಂದಿರುವ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ ಸಹಕಾರಿ ರಂಗಕ್ಕೆ ಹೊಸ ಆಯಾಮವನ್ನು ತಂದುಕೊಟ್ಟವರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು ಅಧ್ಯಕ್ಷರಾಗಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾಗಿ ವಿಶಿಷ್ಟ ಹಾಗೂ ಅನುಕರಣೀಯವಾಗಿ ಸಮಾಜಸೇವೆಗೈದಿದ್ದಾರೆ.ನೊಂದವರ ಕಷ್ಟಗಳಿಗೆ ಸ್ಪಂದಿಸುವ ಅವರ ಮಾನವೀಯ ಮೌಲ್ಯಗಳು ಭವಿಷ್ಯದ ಪೀಳಿಗೆಗೆ ದಾರಿದೀಪವಾಗಿದೆ. ಇವರ ಕಾರ್ಯ ಕೌಶಲ್ಯತೆಯಿಂದ ಎಸ್‌ಸಿಡಿಸಿಸಿ ಬ್ಯಾಂಕ್ 23 ಬಾರಿ ಅಪೆಕ್ಸ್ ಬ್ಯಾಂಕ್ ರಾಜ್ಯ ಪ್ರಶಸ್ತಿ ಹಾಗೂ 19 ಬಾರಿ ನಬಾರ್ಡ್ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.ಪ್ರಶಸ್ತಿಗಳ ಮಹಾಪೂರ: ಸಹಕಾರ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ಕಾರ್ಯ ಸಾಧನೆಯನ್ನು ಗುರುತಿಸಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದಿವೆ. ಸಹಕಾರ ರತ್ನ, ಗೌರವ ಡಾಕ್ಟರೇಟ್, ಮದರ್ ತೆರೆಸಾ ಸದ್ಭಾವನಾ ಪ್ರಶಸ್ತಿ, ಸಹಕಾರ ವಿಶ್ವಬಂಧುಶ್ರೀ ಅಂತಾರಾಷ್ಟ್ರೀಯ ಪ್ರಶಸ್ತಿ, ಬೆಸ್ಟ್ ಚೇರ್‌ಮೆನ್ ನ್ಯಾಶನಲ್ ಎವಾರ್ಡ್, ನ್ಯಾಶನಲ್ ಎಕ್ಸಲೆನ್ಸ್ ಎವಾರ್ಡ್, ಮಹಾತ್ಮ ಗಾಂಧಿ ಸಮ್ಮಾನ್ ಅಂತಾರಾಷ್ಟ್ರೀಯ ಪ್ರಶಸ್ತಿ, ಬಹು ಪ್ರಭಾವಶಾಲಿ ಸಹಕಾರಿ ನಾಯಕ ಪ್ರಶಸ್ತಿ, ಗ್ಲೋಬಲ್ ಲೀಡರ್‌ಶಿಪ್ ಅವಾರ್ಡ್, ಅಂತಾರಾಷ್ಟ್ರೀಯ ಶ್ರೇಷ್ಠ ನಾಯಕತ್ವ ಪ್ರಶಸ್ತಿ, ಇಂಟ‌ರ್ ನ್ಯಾಷನಲ್ ಐಕಾನ್ ಎವಾರ್ಡ್ ಅಂತಾರಾಷ್ಟ್ರೀಯ ಸಾಧಕ ಪ್ರಶಸ್ತಿ, ಏಷ್ಯಾನೆಟ್ ಸುವರ್ಣ ನ್ಯೂಸ್‌ ಉಜ್ವಲ ಉದ್ಯಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಜಾಗತಿಕ ಪ್ರಭಾವಿ ನಾಯಕತ್ವ ಶ್ರೇಷ್ಠತಾ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಹಾಗೂ ಇತ್ತೀಚೆಗೆ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಮಹಿಳಾ ಸಬಲೀಕರಣಕ್ಕಾಗಿ ‘ವಿಷನರಿ ಲೀಡರ್‌ಶಿಪ್ ಅವಾರ್ಡ್’ ಸೇರಿದಂತೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಂಬಳ ಪ್ರೇಮಿ: ಸಹಕಾರ, ಸಾಮಾಜಿಕ, ಬ್ಯಾಂಕಿಂಗ್, ಧಾರ್ಮಿಕ.. ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧಕರಾಗಿ, ನವೋದಯ ಸ್ವಸಹಾಯ ಸಂಘಗಳ ಹರಿಕಾರರಾಗಿ ಅಪೂರ್ವ ಪರಂಪರೆಯನ್ನು ರೂಪಿಸಿದ ರಾಜೇಂದ್ರ ಕುಮಾರ್ ಅವರೊಬ್ಬ ಕಂಬಳ ಪ್ರೇಮಿ. ಕಂಬಳದ ಮಹಾಪೋಷಕರೂ, ಮಾರ್ಗದರ್ಶಕರೂ ಹೌದು. ಅವರ ಅತ್ಯಪೂರ್ವ ಕೊಡುಗೆಗಾಗಿ ಈ ಪ್ರಶಸ್ತಿಯ ಪ್ರಶಸ್ತಿಯ ಮೂಲಕ ಗೌರವ ಸಮರ್ಪಣೆ ಮಾಡಲಾಯಿತು.