ಪುರಪ್ರವೇಶ ಮಾಡಿದ ಕಂಬಿ ಮಲ್ಲಯ್ಯ

| Published : Apr 27 2024, 01:17 AM IST / Updated: Apr 27 2024, 01:18 AM IST

ಸಾರಾಂಶ

ಪುರಪ್ರವೇಶ ಮಾಡಿದ ಕಂಬಿ ಮಲ್ಲಯ್ಯನಿಗೆ ನಗರದ ಇಬ್ರಾಹಿಂಪುರದಲ್ಲಿ ಭಕ್ತರು ಭವ್ಯ ಸ್ವಾಗತ ಕೋರಿ ಭಕ್ತಿಭಾವದಿಂದ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪುರಪ್ರವೇಶ ಮಾಡಿದ ಕಂಬಿ ಮಲ್ಲಯ್ಯನಿಗೆ ನಗರದ ಇಬ್ರಾಹಿಂಪುರದಲ್ಲಿ ಭಕ್ತರು ‍‌ಭವ್ಯ ಸ್ವಾಗತ ಕೋರಿ ಭಕ್ತಿಭಾವದಿಂದ ಬರಮಾಡಿಕೊಂಡರು.

ಯುಗಾದಿ ಹಬ್ಬಕ್ಕೂ ಮುನ್ನ ಇಲ್ಲಿಂದ ಮಲ್ಲಯ್ಯನ ಕಂಬಿಗಳ ಸಮೇತ ಶ್ರೀಶೈಲಕ್ಕೆ ತೆರಳಲಾಗಿತ್ತು. ಪಾತಾಳಗಂಗೆಯಲ್ಲಿ ಕಂಬಿಗಳಿಗೆ ಪೂಜೆ ಮಾಡಿಕೊಂಡು ಮರಳಿ ಬಂದ ಹಿನ್ನೆಲೆಯಲ್ಲಿ ಇಬ್ರಾಹಿಂಪುರ ನಿವಾಸಿಗಳು ಹಾಗೂ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿಯವರು ಮಲ್ಲಯ್ಯನ ಕಂಬಿಗಳನ್ನು ಗ್ರಾಮದಲ್ಲಿ ಅದ್ಧೂರಿಯಿಂದ ಬರಮಾಡಿಕೊಂಡರು.

ಪುರಪ್ರವೇಶ ಮಾಡಿದ ಮಲ್ಲಯ್ಯನ ಕಂಬಿಗಳನ್ನು ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇರಿಸಲಾಯಿತು. ನಂತರ ದೇವಸ್ಥಾನದ ಅರ್ಚಕ ಓಂಕಾರ ಮಠಪತಿ ಅವರು ಕಂಬಿ ಮಲ್ಲಯ್ಯನಿಗೆ ಪೂಜೆ ನೆರವೇರಿಸಿದರು. ಸುಮಂಗಲೆಯರು ಭಕ್ತಿಭಾವದಿಂದ ಆರತಿ ಬೆಳಗಿದರು. ಕಂಬಿಮಲ್ಲಯ್ಯ ಪುರಪ್ರವೇಶ ಮಾಡಿದ ಹಿನ್ನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ಗ್ರಾಮದ ಹಿರಿಯರಾದ ಗಿರಮಲ್ಲಪ್ಪ ನುಚ್ಚಿ, ಸೂರ್ಯಕಾಂತ ಗಡಗಿ, ಶಿವಸಂಗಪ್ಪ ಹಳ್ಳಿ, ಅಪ್ಪುಗೌಡ ಪಾಟೀಲ ಸೇರಿದಂತೆ ಸಹಸ್ರಾರು ಜನ ಭಕ್ತರು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ಕಂಬಿ ಮಲ್ಲಯ್ಯನ ದರ್ಶನ ಪಡೆದರು.

ಕಂಬಿ ಮಲ್ಲಯ್ಯನ ದರ್ಶನಕ್ಕೆ ಬರುವ ಭಕ್ತರಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ಮಲ್ಲಯ್ಯನ ದರ್ಶನ ಪಡೆದು, ರುಚಿ-ರುಚಿಯಾದ ಶಿರಾ, ಮಸಾಲೆ ಅನ್ನ, ಅಂಬಲಿಯ ಸವಿ ಸವಿದರು. ಸಂಜೆ ಮಲ್ಲಯ್ಯನ ಕಂಬಿಗಳ ಭವ್ಯ ಮೆರವಣಿಗೆ ನಡೆಯಿತು. ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ವಾದ್ಯ ಮೇಳದೊಂದಿಗೆ ಹೊರಟ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿ ಶ್ರೀ ನಂದಬಸವೇಶ್ವರ ದೇವಸ್ಥಾನಕ್ಕೆ ತೆರಳಿತು. ಅಲ್ಲಿ ಪೂಜೆ , ಬಿರುದಾವಳಿ ಮುಗಿಸಿಕೊಂಡು ಮೆರವಣಿಗೆ ಮರಳಿ ಮಲ್ಲಿಕಾರ್ಜುನ ದೇವಸ್ಥಾನ ತಲುಪಿ ಸಂಪನ್ನಗೊಂಡಿತು. ಮೆರವಣಿಗೆ ಮರಳಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ದೇವಸ್ಥಾನದ ಮುಂದಿನ ಮುಖ್ಯ ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಸುನೀಲ(ಗುರುಪಾದಪ್ಪ) ನುಚ್ಚಿ, ಉಪಾಧ್ಯಕ್ಷ ಸಂಪತ್ ಕೋವಳ್ಳಿ, ಖಜಾಂಚಿ ರೇವಣಕುಮಾರ ಬಗಲಿ, ಕಾರ್ಯದರ್ಶಿ ಮಲ್ಲಿಕಾರ್ಜುನ ನುಚ್ಚಿ ಸದಸ್ಯರಾದ ಕಲ್ಲಪ್ಪ ಜುಮನಾಳ, ಸಂತೋಷ ಪಾಟೀಲ, ವಿನೋದ ನುಚ್ಚಿ, ಬಾಬು ಮಡಿವಾಳ, ಶಂಕರ ಡಂಬಳ, ಯಮನಪ್ಪ ಕಟ್ಟಿಮನಿ, ಯುವ ಮುಖಂಡರಾದ ಶಿವಾನಂದ ನುಚ್ಚಿ, ಗಿರೀಶ ಕವಟಗಿ, ಬಸವರಾಜ ಹಳ್ಳಿ, ಶಾಂತು ಗಲಗಲಿ, ಬಸವರಾಜ ಗುನ್ನಾಪುರ, ಜಗದೀಶ ಜುಮನಾಳ, ಪ್ರವೀಣ ಹಳ್ಳಿ, ಮಲ್ಲಿಕಾರ್ಜುನ ಗಡಗಿ, ರಮೇಶ ಬಗಲಿ, ಸಂತೋಷ ಗುನ್ನಾಪುರ, ಮಂಜುನಾಥ ಹಳ್ಳಿ, ಸುರೇಶ ಬಗಲಿ, ಸೋಮನಗೌಡ ಪಾಟೀಲ, ಗುರುರಾಜ ಪಾಟೀಲ, ಶ್ರೀಶೈಲ ಹಳ್ಳಿ, ರುದ್ರಪ್ಪ ಜುಮನಾಳ, ಯಮನಪ್ಪ ಮೋದಿ ಸೇರಿದಂತೆ ನೂರಾರು ಜನ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.