ಸುಂಟಿಕೊಪ್ಪ: ಕಂಬಿಬಾಣೆ ಚಿಕ್ಲಿಹೊಳೆಯಲ್ಲಿ ಜಲಾಶಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದರೂ ಜನರ ಸಮಸ್ಯೆ ಅರಣ್ಯರೋಧನವಾಗಿದೆ. ಕಂಬಿಬಾಣೆಯಿಂದ ೪ ಕೀ.ಮೀ ದೂರದ ಚಿಕ್ಲಿಹೊಳೆ ಜಲಾಶಯವಿದ್ದು, ಇಲ್ಲಿಂದ ರಂಗಸಮುದ್ರದ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ಸಂಪರ್ಕ ರಸ್ತೆಯ ೨ ಕೀ.ಮಿ ವ್ಯಾಪ್ತಿ ಹೊಂಡ ಗುಂಡಿಗಳಿಂದ ಕೂಡಿದೆ. ರಸ್ತೆಯ ಇಕ್ಕೆಲೆಗಳಲ್ಲಿ ಮೀಸಲು ಆನೆಕಾಡು ಪ್ರದೇಶವಾಗಿದ್ದು ಕಾಡು ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳು ಪಾದಚಾರಿ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವವರ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ.

ಕಂಬಿಬಾಣೆ ಚಿಕ್ಕಿಹೊಳೆ ಸಂಪರ್ಕ ರಸ್ತೆಯು ಸುಮಾರು ೨ ಕೀ.ಮಿ. ಹಲವಷ್ಟು ಕಡೆ ದುರಸ್ತಿಗೆ ಬಾಕಿ ಉಳಿದುಕೊಂಡಿದ್ದು ಇದರಿಂದ ಮಧ್ಯ ಮಧ್ಯ ಭಾಗದಲ್ಲಿ ನಿರ್ವಹಿಸಲಾಗಿರುವ ನೂತನ ಕಾಂಕ್ರಿಟ್ ರಸ್ತೆಯು ಹೊಂಡ ಗುಂಡಿಗಳಾಗಿ ಮಾರ್ಪಡಾಗಿದೆ. ರಸ್ತೆ ೨೦೦ ರಿಂದ ೫೦೦ ಮೀಟರ್‌ವರೆಗೆ ದುರಸ್ತಿ ನಡೆಯಬೇಕು. -ಆರ್.ಆರ್.ಮೋಹನ್ ಕಂಬಿಬಾಣೆ ಗ್ರಾ.ಪಂ.ಮಾಜಿ ಅಧ್ಯಕ್ಷ

ಈ ಭಾಗದಲ್ಲಿ ಬಡ ಮಧ್ಯಮ ವರ್ಗದ ಜನಾಂಗದವರೇ ನೆಲೆಸಿದ್ದು, ಇವರ ಮಕ್ಕಳು ನಿತ್ಯ ನೂರಾರು ಮಂದಿ ಶಾಲಾ ಕಾಲೇಜುಗಳಿಗೆ ನಡೆದುಕೊಂಡು ಹೋಗುವ ವೇಳೆ ವಾಹನಗಳಿಂದ ಕೆಸರು ಮಣ್ಣಿನ ನೀರು ರಾಚುತ್ತದೆ. ಈ ಭಾಗದ ನಿವಾಸಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. - ಇ.ಬಿ. ಜೋಸೆಫ್ ೭ನೇ ಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ

ಚಿಕ್ಲಿಹೊಳೆ ಜಲಾಶಯದ ೨ ಬದಿಯಲ್ಲಿ ಕಾಡು ಗಿಡಗಂಟಿಗಳು ಬೆಳೆದು ನಿಂತಿದ್ದು, ಕಾಡಾನೆಗಳು ವನ್ಯ ಪ್ರಾಣಿಗಳು ವಾಹನ ಸವಾರರು ಮತ್ತು ಪಾದಚಾರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕಾಡು ಗಿಡಗಳನ್ನು ಕಡಿದು ತೆರವುಗೊಸಬೇಕಿದೆ.- ಸಂತೋಷ್ ಚಿಕ್ಲಿಹೊಳೆ ಭಾಗದ ನಿವಾಸಿ, ಆಟೋಚಾಲಕ


೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ೩ನೇ ವಾರ್ಡ್ ವ್ಯಾಪ್ತಿಗೆ ಈ ಗ್ರಾಮವು ಸೇರಿದೆ. ರಸ್ತೆಯ ಅವ್ಯವಸ್ಥೆಯ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾವೇರಿ ನೀರಾವರಿ ನಿಗಮದ ಹಾರಂಗಿ ವ್ಯಾಪ್ತಿಯ ಅಭಿಯಂತರಿಗೆ ಪತ್ರವನ್ನು ಬರೆಯಲಾಗಿದೆ. -ನಂದೀಶ್‌ಕುಮಾರ್ ಹೊಸಕೋಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ