ಕಂಪ್ಲಿ: ಐತಿಹಾಸಿಕ ವೈಭವ, ಸಂಸ್ಕೃತಿ ಹಾಗೂ ಸಂಭ್ರಮದ ಸೊಗಡಿನಿಂದ ಕಂಗೊಳಿಸುತ್ತಿರುವ ಕಂಪ್ಲಿ ಉತ್ಸವದಲ್ಲಿ ಈ ಬಾರಿ ಯುವಜನತೆಯ ಉತ್ಸಾಹಕ್ಕೆ ಹೊಸ ಚೈತನ್ಯ ತುಂಬಿತು.ಪಟ್ಟಣದ ಸಕ್ಕರೆ ಕಾರ್ಖಾನೆ ಆವರಣದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ವೀರ ಕಂಪಿಲರಾಯ ಭವ್ಯ ವೇದಿಕೆ ಶನಿವಾರ ರಾತ್ರಿ ಸಂಗೀತದ ನಾದಕ್ಕೆ ತೇಲಿದರೆ, ಸಾವಿರಾರು ಜನರ ಹರ್ಷೋದ್ಗಾರದಿಂದ ಉತ್ಸವ ಮೈದಾನವೇ ಕಿಕ್ಕಿರಿದು ತುಂಬಿತ್ತು. ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ರ‍್ಯಾಪರ್ ಚಂದನ್ ಶೆಟ್ಟಿ ಅವರ ಆಗಮನವೇ ಪ್ರೇಕ್ಷಕರಲ್ಲಿ ಅಪಾರ ಉತ್ಸಾಹ ಮೂಡಿಸಿತು.

ವೇದಿಕೆಗೆ ಕಾಲಿಟ್ಟ ಕ್ಷಣದಿಂದಲೇ ಯುವಜನತೆ ಕೂಗಾಟ, ಚಪ್ಪಾಳೆ ಹಾಗೂ ಸಂಭ್ರಮದ ಘೋಷಗಳಿಂದ ಅವರನ್ನು ಸ್ವಾಗತಿಸಿತು. ಸಂಗೀತ ಆರಂಭವಾಗುತ್ತಿದ್ದಂತೆಯೇ ವೇದಿಕೆ ಮುಂಭಾಗ ಜನಸಾಗರವಾಗಿ ಸೇರಿದ್ದು, ಉತ್ಸವದ ವಾತಾವರಣ ಕ್ಷಣಾರ್ಧದಲ್ಲೇ ಸಂಗೀತ ಮೇಳವಾಗಿ ಬದಲಾಯಿತು.

ತಮ್ಮ ಜನಪ್ರಿಯ ಆಲ್ಬಮ್ ಹಾಡುಗಳಾದ ಹಾಳಾಗೋದೇ, 3 ಪೆಗ್, ಟಕೀಲಾ, ಕೋಲೂಮಂಡೆ ಜಂಗಮ ದೇವರು, ಪಕ್ಕಾ ಚಾಕಲೇಟ್ ಗರ್ಲ್, ಕಾಟನ್ ಕ್ಯಾಂಡಿ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ನಿರಂತರವಾಗಿ ಹಾಡಿ ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದರು. ಪ್ರತಿಯೊಂದು ಹಾಡಿಗೂ ಯುವಕರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ, ಕುಟುಂಬ ಸಮೇತರಾಗಿ ಬಂದ ಜನರು ಸಂಭ್ರಮದಲ್ಲಿ ಪಾಲ್ಗೊಂಡ ದೃಶ್ಯಗಳು ಗಮನ ಸೆಳೆದವು.

ಕನ್ನಡ ಸಿನಿಮಾಗಳ ಜನಪ್ರಿಯ ಹಾಡುಗಳಿಗೂ ತಮ್ಮ ಧ್ವನಿಯಲ್ಲಿ ಹೊಸ ಉತ್ಸಾಹ ತುಂಬಿದ ಚಂದನ್ ಶೆಟ್ಟಿ, ಪೊಗರು ಚಿತ್ರದ “ಕರಾಬು ಬಾಸು ಕರಾಬು”, ಮುಂಗಾರು ಮಳೆ–2 ಚಿತ್ರದ “ಮೈ ಡ್ಯಾಡಿ ಇಸ್ ಮೈ ಹೀರೊ”, ಪವರ್ ಸ್ಟಾರ್ ಚಿತ್ರದ “ಧಮ್ ಪವರೇ ಧಮ್ ಪವರೇ” ಹಾಗೂ “ಗೆಳೆಯ ಗೆಳೆಯ” ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದರು. ವೇದಿಕೆ ಸುತ್ತಮುತ್ತ ಬೆಳಕು, ಸಂಗೀತ ಮತ್ತು ಜನರ ಕೂಗಾಟಗಳು ಒಂದಾಗಿ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ವಿಶೇಷವಾಗಿ “ಅಣ್ಣನಿಗೆ ಪೊಗರು ಪೊಗರು” ಹಾಡು ಆರಂಭವಾಗುತ್ತಿದ್ದಂತೆಯೇ ಸಂಭ್ರಮ ತಾರಕಕ್ಕೇರಿತು. ಶಾಸಕ ಜೆ.ಎನ್. ಗಣೇಶ್ ವೇದಿಕೆ ಮೇಲೆ ಕರೆದು ಚಂದನ್ ಶೆಟ್ಟಿ ಹೆಜ್ಜೆ ಹಾಕಿದ್ದು ಆಕರ್ಷಣೆಯಾಯಿತು.


ಸಂಗೀತದ ರಿದಮ್‌ಗೆ ತೇಲಿದ ಪ್ರೇಕ್ಷಕರು ಮೊಬೈಲ್‌ ಟಾರ್ಚ್‌ ಹಚ್ಚಿ ಹಾಡುಗಳಿಗೆ ಜೊತೆಯಾಗಿದ್ದು, ಸಂಪೂರ್ಣ ಮೈದಾನವೇ ಸಂಗೀತ ಮಹೋತ್ಸವದಂತೆ ಕಂಗೊಳಿಸಿತು.