ಸಾರಾಂಶ
ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ ನಡೆಯಿತು. 129 ಪದವೀದರರಿಗೆ ಮತ್ತು 26 ಸ್ನಾತಕ್ಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಶೈಕ್ಷಣಿಕ ಪದವಿ ಪಡೆಯುವುದು ಸ್ಮರಣೀಯ ಸಂದರ್ಭ. ನಮ್ಮ ಯಶಸ್ಸನ್ನು ಸಂಭ್ರಮಿಸುವ ಜತೆಗೆ ವೃತ್ತಿ ಜೀವನ ಪ್ರಯಾಣ ಮುಂದುವರಿಸಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಬಿ.ಸಿ. ಹೇಳಿದ್ದಾರೆ.ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು 129 ಪದವೀದರರಿಗೆ ಮತ್ತು 26 ಸ್ನಾತಕ್ಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಘಟಕೋತ್ಸವ ಭಾಷಣ ಮಾಡಿದರು.
ನೂತನ ಪದವೀಧರರು ತೆಗೆದುಕೊಂಡ ಪ್ರತಿಜ್ಞೆಗೆ ಬದ್ಧರಾಗಿ, ಪ್ರಾಮಾಣಿಕತೆಯಿಂದ ಶ್ರದ್ಧೆ, ಶ್ರಮ, ಕರ್ತವ್ಯ ನಿಷ್ಠೆಯಿಂದ ವೃತ್ತಿ ಜೀವನ ನಿರ್ವಹಿಸಿದರೆ ಯಶಸ್ಸು ಸಾಧಿಸಬಹುದು ಎಂದು ಸಲಹೆ ನೀಡಿದರು.ಕಣಚೂರು ಇಸ್ಲಾಮಿಕ್ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಯು.ಕೆ. ಮೋನು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಆರೋಗ್ಯ ರಕ್ಷಣಾ ಮಂಡಳಿಯ ಅಧ್ಯಕ್ಷ ಡಾ. ಇಫ್ತಿಕಾರ್ ಫರೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಶಹನವಾಜ್ ಮಾಣಿಪಾಡಿ ಅವರು ನೂತನ ಪದವೀಧರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭ ಸ್ನಾತಕ್ಕೋತ್ತರ ಮೂಳೆ ಶಾಸ್ತ್ರ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಡಾ. ಚೇತನ್ ಕುಮಾರ್ ಅವರನ್ನು ಗೌರವಿಸಲಾಯಿತು. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆಯೋಜಿಸಿದ ಅಂತಿಮ ಎಂಬಿಬಿಎಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಮತ್ತು ರ‍್ಯಾಂಕ್ ಪಡೆದ ಡಾ. ಅಯಿಮಾನ್ ಫೈಜಾ ಫಾತಿಮಾ ಅವರಿಗೆ ಕಣಚೂರು ಮೋನು ಸ್ವರ್ಣ ಪದಕ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ನಿರ್ದೇಶಕಿ ಝೊಹಾರ ಮೋನು, ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್, ಸದಸ್ಯ ಡಾ. ವೆಂಕಟ್‌ರಾಂ ಪ್ರಭು, ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್, ಆಡಳಿತ ಅಧಿಕಾರಿ ಡಾ. ರೋಹನ್ ಮೋನಿಸ್ ಇದ್ದರು.