ಸಾರಾಂಶ
ವಿಚಾರ ಸಂಕಿರಣಗಳು ಯಕ್ಷರಂಗದಲ್ಲಿ ಆಚರಣೆಗೆ ಬರಬೇಕು. ಯಕ್ಷಗಾನಕ್ಕೆ ಯಾವ ಕೊಡುಗೆ ಬೇಕಿಲ್ಲ.
ಹೊನ್ನಾವರ: ವಿಚಾರ ಸಂಕಿರಣಗಳು ಯಕ್ಷರಂಗದಲ್ಲಿ ಆಚರಣೆಗೆ ಬರಬೇಕು. ಯಕ್ಷಗಾನಕ್ಕೆ ಯಾವ ಕೊಡುಗೆ ಬೇಕಿಲ್ಲ. ಅದು ಕೆಡದಿದ್ದ ಹಾಗೆ ಇದ್ದರೆ ಸಾಕು ಎಂದು ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಹೇಳಿದರು.
ತಾಲೂಕಿನ ಕವಲಕ್ಕಿಯ ಮಾಹಾಸತಿ ಸಭಾಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಭಾನುವಾರ ಆಯೋಜಿಸಿದ ವಿಚಾರ ಸಂಕಿರಣ, ತಾಳಮದ್ದಳೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಯಕ್ಷಗಾನ ಮನರಂಜನೆಯ ಕಲೆಯಷ್ಟೇ ಅಲ್ಲ. ಮನೋವಿಕಾಸಗೊಳಿಸುವ ಆರಾಧನಾ ಕಲೆಯಾಗಿದೆ. ಅಕಾಡೆಮಿಯು ಅನುದಾನದಿಂದ ಎಷ್ಟೋ ಕಾರ್ಯಕ್ರಮ ನಡೆಯುತ್ತಿದೆ. ಅದರಿಂದ ಏನೇನು ಬದಲಾವಣೆ ಆಗುತ್ತಿದೆ ಎಂಬುದನ್ನು ಅವಲೋಕಿಸಬೇಕಾಗಿದೆ ಎಂದರು.
ಯಕ್ಷಗಾನ ಅಕಾಡಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಮೊದಲು ಶ್ರದ್ಧಾ ಭಕ್ತಿಯುಳ್ಳವರಿದ್ದರು. ಇಂದು ಬೇರೆ ಬೇರೆ ಉದ್ಯೋಗದಲ್ಲಿ ಇರುವರು, ಬುದ್ಧಿವಂತರು ಬರುತ್ತಿದ್ದಾರೆ. ಯಕ್ಷಗಾನ ಅಕಾಡಮಿಯು ಮಕ್ಕಳಿಗೆ ಪ್ರೋತ್ಸಾಹ ನೀಡುತ್ತದೆ. ಯಕ್ಷಗಾನದಿಂದ ಮಕ್ಕಳ ಮನೋ ವಿಕಾಸವಾಗುವುದರ ಜೊತೆಗೆ ಗುರು- ಹಿರಿಯರಲ್ಲಿ ಭಕ್ತಿಭಾವ ಮೂಡಿಸುತ್ತದೆ. ಉತ್ತಮ ಸಂಸ್ಕಾರವನ್ನು ನೀಡುತ್ತದೆ ಎಂದರು.ಹಿರಿಯ ಯಕ್ಷಗಾನ ಭಾಗವತ ಕಪ್ಪೆಕೆರೆ ಸುಬ್ರಾಯ ಭಾಗವತ ಮಾತನಾಡಿ, ಯಕ್ಷಗಾನ ಬದಲಾವಣೆ ಆಗುತ್ತಾ ಇದೆ. ಅದು ಮೂಲ ಸತ್ವವನ್ನು ಉಳಿಸಿಕೊಳ್ಳಬೇಕು ಎಂದರು.
ಕಡತೋಕ ಗೋಪಾಲಕೃಷ್ಣ ಭಾಗವತ ಮಾತನಾಡಿ, ಯಕ್ಷಗಾನದ ವಿಚಾರ ಸಂಕಿರಣ ಮತ್ತು ಚರ್ಚೆಯ ಫಲಶ್ರತಿ ರಂಗಸ್ಥಳದಲ್ಲಿ ಕಾಣುವಂತಾಗಬೇಕು. ಜಿಲ್ಲೆಯ ಅರ್ಹ ಕಲಾವಿದರಿಗೆ ಪ್ರಶಸ್ತಿ ದೊರಕುವಂತಾಗಬೇಕು ಎಂದರು.ಎಸ್ ಆರ್ ಎಲ್ ಸಂಸ್ಥೆ ಮಾಲೀಕ ವೆಂಕಟರಮಣ ಹೆಗಡೆ, ನಾರಾಯಣ ಯಾಜಿ ಸಾಲೆಬೈಲು ಇದ್ದರು. ಅಕಾಡೆಮಿ ರಜಿಸ್ಟ್ರಾರ್ ಎನ್. ನಮ್ರತಾ ಪ್ರಾಸ್ತಾವಿಕ ಮಾತನಾಡಿದರು. ಅಕಾಡೆಮಿ ಸದಸ್ಯ ವಿದ್ಯಾಧರ ಜಲವಳ್ಳಿ ಸ್ವಾಗತಿಸಿದರು.