ಕನಕನ ಕಿಂಡಿಗೆ ಕನಕ ಕವಚ: ಮೋದಿಯಿಂದ ಕೃಷ್ಣಾರ್ಪಣೆ

| Published : Nov 23 2025, 03:15 AM IST

ಸಾರಾಂಶ

ಈ ಚಿನ್ನದ ಕವಚವನ್ನು ಮಂಗಳೂರು ಕೈಕಂಬದ ವಿವೇಕ ಪ್ರಭು ಅವರು ನಿರ್ಮಿಸಿದ್ದು, ಅದನ್ನು ಪ್ರಮೋದ್ ಮಧ್ವರಾಜ್ ಅವರು ತಮ್ಮ ಮನೆಗೆ ತಂದು, ತಮ್ಮ ಗೋಶಾಲೆಯಲ್ಲಿರುವ, ಕೃಷ್ಣನಿಗೆ ಪ್ರಿಯವಾಗ ಗೋವುಗಳ ಸಮ್ಮುಖದಲ್ಲಿ, ಕೃಷ್ಣನಿಗೆ ಪ್ರಿಯನಾದ ಕನಕನ ಕಿಂಡಿಯ ಕನಕ ಕವಚವನ್ನು ಅನಾವರಣಗೊಳಿಸಿ, ಆರತಿ ಬೆಳಗಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಕೃಷ್ಣಮಠಕ್ಕೆ ನ.28ರಂದು ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭ ಲೋಕಪ್ರಸಿದ್ಧ ಕನಕನ ಕಿಂಡಿಗೆ ಅಳವಡಿಸಲಾಗಿರುವ ಸುಂದರ ಚಿನ್ನದ ಕವಚವನ್ನು ಉದ್ಘಾಟಿಸಲಿದ್ದಾರೆ.ಈ ಚಿನ್ನದ ಕವಚವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯದಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೃಷ್ಣನಿಗೆ ಸಮರ್ಪಿಸುತ್ತಿದ್ದಾರೆ.ಈ ಚಿನ್ನದ ಕವಚವನ್ನು ಮಂಗಳೂರು ಕೈಕಂಬದ ವಿವೇಕ ಪ್ರಭು ಅವರು ನಿರ್ಮಿಸಿದ್ದು, ಅದನ್ನು ಪ್ರಮೋದ್ ಮಧ್ವರಾಜ್ ಅವರು ತಮ್ಮ ಮನೆಗೆ ತಂದು, ತಮ್ಮ ಗೋಶಾಲೆಯಲ್ಲಿರುವ, ಕೃಷ್ಣನಿಗೆ ಪ್ರಿಯವಾಗ ಗೋವುಗಳ ಸಮ್ಮುಖದಲ್ಲಿ, ಕೃಷ್ಣನಿಗೆ ಪ್ರಿಯನಾದ ಕನಕನ ಕಿಂಡಿಯ ಕನಕ ಕವಚವನ್ನು ಅನಾವರಣಗೊಳಿಸಿ, ಆರತಿ ಬೆಳಗಿದರು. ಈ ಸಂದರ್ಭ ಕನಕನ ಭಕ್ತರಾದ ಕುರುಬ ಸಮಾಜದ ನಾಯಕರಿದ್ದರು.ತಮ್ಮ ತಂದೆ ಮಲ್ಪೆ ಮಧ್ವರಾಜ್ ಅವರು 1965ರಲ್ಲಿ ಶಾಸಕರಾಗಿದ್ದಾಗ ಕೃಷ್ಣನಿಗೆ ಅಭಿಮುಖವಾಗಿ, ಕೃಷ್ಣನ ಪರಮಭಕ್ತ ಕನಕದಾಸನ ಶಿಲಾವಿಗ್ರಹವನ್ನು ಸ್ಥಾಪಿಸುವ ಭಾಗ್ಯ ಅವರಿಗೆ ಲಭಿಸಿತ್ತು. ಈಗ ಕನಕನಿಗೆ ಕೃಷ್ಣ ದರ್ಶನ ನೀಡಿದ ಕಿಂಡಿಗೆ ಚಿನ್ನದ ಕವಚ ಅರ್ಪಿಸುವ ಸೌಭಾಗ್ಯ ನನ್ನದಾಗಿದೆ ಎಂದು ಪ್ರಮೋದ್ ಮಧ್ವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.