ಕನಕರ ಕೀರ್ತನೆಗಳು ಜನಮಾನಸದಲ್ಲಿ ಜನಜನಿತ

| Published : Nov 09 2025, 03:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ ಸೇರಿದಂತೆ 316 ಕೀರ್ತನೆಗಳನ್ನು ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಸಂತ ಕನಕದಾಸರ ಕೀರ್ತನೆಗಳು ಜನಮಾನಸದಲ್ಲಿ ಜನಜನಿತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ ಸೇರಿದಂತೆ 316 ಕೀರ್ತನೆಗಳನ್ನು ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಸಂತ ಕನಕದಾಸರ ಕೀರ್ತನೆಗಳು ಜನಮಾನಸದಲ್ಲಿ ಜನಜನಿತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ. ದಾಸಸಾಹಿತ್ಯ, ಪದಗಳ ಮೂಲಕ ಸಮಾಜದ ಓರೆ-ಕೊರೆಗಳನ್ನು ತಿದ್ದಿ, ಅನಿಷ್ಠ ಪದ್ಧತಿಗಳು, ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದ್ದು, ಇಂತಹ ಶ್ರೇಷ್ಠರ ತತ್ವಾದರ್ಶನಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.

ಕನಕದಾಸರು ರಚಿಸಿದ ಕೀರ್ತನೆಗಳಲ್ಲೊಂದಾದ ಅತ್ಯಂತ ಮುಖ್ಯವಾದ ಕುಲ ಕುಲವೆಂದು ಹೊಡೆದಾಡದಿರಿ... ಎಂಬ ಕೀರ್ತನೆಯ ಸಾಲುಗಳನ್ನು ಸಚಿವರು ಪ್ರಸ್ತಾವಪಿಸಿದರು.

ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕಾಗಿನೆಲೆಯಾದಿ ಕೇಶವ ಇವರ ಕೀರ್ತನೆಗಳ ಅಂಕಿತನಾಮವಾಗಿದೆ. ಕನಕದಾಸರು ವಿವಿಧ ಪ್ರಕಾರದ ಕೀರ್ತನೆಗಳು, ಸುಳಾದಿ, ಉಗಾಭೋಗಗಳ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಲ್ಲದೇ, ಸಂಗೀತ ಪ್ರಪಂಚಕ್ಕೆ ತನ್ನದೇಯಾದ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಬಿಎಲ್‍ಡಿಇ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ದಾಸ ಸಾಹಿತ್ಯದ 65 ಸಂಪುಟ ಹೊರತರಲಾಗುತ್ತಿದ್ದು, ಈಗಾಗಲೇ 45 ಸಂಪುಟಗಳ ಕಾರ್ಯ ಪೂರ್ಣಗೊಂಡಿದೆ. ಈ ಪೈಕಿ 4 ಸಂಪುಟಗಳು ಕನಕದಾಸರ ಕೀರ್ತನೆಗೊಳಗೊಂಡಿವೆ. ಪ್ರಚಲಿತವಲ್ಲದ, ಎಲ್ಲೂ ಪ್ರಕಟವಾಗದೇ ಇರುವ 150 ಕ್ಕೂ ಹೆಚ್ಚು ಕನಕದಾಸರ ಕೀರ್ತನೆಗಳನ್ನು ಸಂಶೋಧಿಸಿ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಿದ್ದಪ್ಪ ಧನಗೊಂಡ ಮಾತನಾಡಿದರು. ಇದಕ್ಕೂ ಮೊದಲು ಕನಕದಾಸ ವೃತ್ತದಲ್ಲಿ ಕನಕದಾಸ ಪ್ರತಿಮೆಗೆ ಸಚಿವರು ಪುಷ್ಪಾರ್ಚನೆ ಸಲ್ಲಿಸಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೋಹನ್ ಕಟ್ಟಿಮನಿ ನಿರೂಪಿಸಿ ವಂದಿಸಿದರು. ಮಾಳವಿಕಾ ಜೋಶಿ ಹಾಗೂ ತಂಡದವರಿಂದ ಗೀತಗಾಯನ ನಡೆಯಿತು.

ಪಾಲಿಕೆ ಮೇಯರ್‌ ಎಂ.ಎಸ್ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ ಮುಶ್ರೀಫ್, ಜಿಪಂ ಮಾಜಿ ಅಧ್ಯಕ್ಷೆ ಸುಜಾತ ಕಳ್ಳಿಮನಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಮಾಜದ ಮುಖಡರಾದ ಮಲ್ಲಣ್ಣ ಶಿರಸ್ಯಾಡ, ಕೆಕೆಆರ್‌ಟಿಸಿಯ ವಿಭಾಗೀಯ ನಿಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸೇರಿದಂತೆ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.