ಸಾಮಾಜಿಕ ಪ್ರಗತಿಗೆ ಕನಕ ಚಿಂತನೆಗಳು ಮಾರ್ಗದರ್ಶಿ

| Published : Nov 09 2025, 01:15 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸಲಾಯಿತು

ದೊಡ್ಡಬಳ್ಳಾಪುರ: ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಆಚರಿಸಲಾಯಿತು.

ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ಸಮಸಮಾಜ ನಿರ್ಮಾಣದ ಪ್ರತಿಪಾದಕರಾಗಿ ಎಲ್ಲ ವರ್ಗಗಳ ಹಿತವನ್ನು ಬಯಸಿದ ಅಪ್ರತಿಮ ದಾರ್ಶನಿಕ ಕನಕದಾಸರ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುವ ಅಗತ್ಯವಿದೆ. 5 ಶತಮಾನಗಳಷ್ಟು ಹಿಂದೆಯೇ ಸಾಮಾಜಿಕವಾಗಿ ಅನೇಕ ಪಿಡುಗುಗಳ ವಿರುದ್ದ ದನಿಯೆತ್ತಿದ ಕನಕದಾಸರ ಕೀರ್ತನೆಗಳ ಸಾರವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆ ಮೂಲಕ ಬದಲಾವಣೆ ಸಾಧ್ಯ ಎಂದರು.

ಆರ್‌ಎಲ್‌ಜೆಐಟಿ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕನಕದಾಸರು ಈ ನಾಡಿನ ಮೊದಲ ಸಾತ್ವಿಕ ಬಂಡಾಯದ ದನಿಯಾಗಿದ್ದಾರೆ. ವರ್ಗ, ಜಾತಿ ಅಸಮಾನತೆಯ ವಿರುದ್ದ ಪ್ರತಿಪಾದಿಸಿದ ಅವರು ಸಮರ್ಪಣಾ ಮನೋಭಾವದ ಭಕ್ತಿಯ ಮೂಲಕ ಮಹತ್ತನ್ನ ಸಾಧಿಸಿದ ವ್ಯಕ್ತಿತ್ವ. ಮೇಲು-ಕೀಳುಗಳ ಪರಿಕಲ್ಪನೆಯನ್ನು ಧಿಕ್ಕರಿಸಿ ಶೋಷಿತ ಮತ್ತು ಧಮನಿತ ವರ್ಗದ ಪರ ನಿಂತ ದಾರ್ಶನಿಕರಾಗಿದ್ದಾರೆ. ನವಿರು ಭಾವದ ಮನೋವಿಲಾಸದ ಕವಿಯಾಗಿ, ನಾಡರಕ್ಷಣೆಯ ಹೊಣೆಯೊತ್ತ ಕಲಿಯಾಗಿ, ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ಸಮಾಜ ಸುಧಾರಕನಾಗಿ ಕನಕದಾಸರು ಮುಖ್ಯವಾಗುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಗೌರ್ನಿಂಗ್‌ ಕೌನ್ಸಿಲ್‌ ಸದಸ್ಯ ಜೆ.ಆರ್.ರಾಕೇಶ್, ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ಡೀನ್‌ ಡಾ.ಶ್ರೀನಿವಾಸರೆಡ್ಡಿ, ಎಸ್‌ಡಿಯುಐಎಂ ಪ್ರಾಂಶುಪಾಲ ಡಾ.ಗೌರಪ್ಪ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ಎಇಇ ಐ.ಎಂ.ರಮೇಶ್‌ಕುಮಾರ್, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ದೈಹಿಕ ಶಿಕ್ಷಣ ನಿರ್ದೇಶಕ ಪಿ.ಡಿ.ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್ ಮತ್ತಿತರರು ಉಪಸ್ಥಿತರಿದ್ದರು.8ಕೆಡಿಬಿಪಿ1- ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನಕದಾಸರ ಜಯಂತ್ಯುತ್ಸವ ಆಚರಿಸಲಾಯಿತು.