ಸಾರಾಂಶ
ಕನಕಾಚಲಪತಿ ದೇವಸ್ಥಾನಕ್ಕೆ ಸಂಬಂಧಿಸಿದ ಖಾಲಿ ಜಾಗ ಹಾಗೂ ವಾಣಿಜ್ಯ ಮಳಿಗೆಗಳ ಬಾಕಿ ಇರುವ ಬಾಡಿಗೆ ಹಣ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಕನಕಗಿರಿ: ಕನಕಾಚಲಪತಿ ದೇವಸ್ಥಾನಕ್ಕೆ ಸಂಬಂಧಿಸಿದ ಖಾಲಿ ಜಾಗ ಹಾಗೂ ವಾಣಿಜ್ಯ ಮಳಿಗೆಗಳ ಬಾಕಿ ಇರುವ ಬಾಡಿಗೆ ಹಣ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಕನಕಾಚಲಪತಿ ದೇಗುಲದಲ್ಲಿ ದೇವಸ್ಥಾನ ಸಮಿತಿಯ ಸಭೆಯಲ್ಲಿ ಗುರುವಾರ ಅವರು ಮಾತನಾಡಿದರು. ಕಳೆದೆರಡು ವರ್ಷಗಳಿಂದ ದೇಗುಲದ ಖಾಲಿ ಜಾಗ ಹಾಗೂ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ಹಣ ₹೮ ಲಕ್ಷಕ್ಕೂ ಹೆಚ್ಚು ಬಾಕಿ ಉಳಿದಿದ್ದು, ಈ ಬಗ್ಗೆ ಮುತುವರ್ಜಿ ವಹಿಸಿ ಹಣದ ಪಾವತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ ಎಂದರು.ತೆಂಗಿನಕಾಯಿ ಹಾಗೂ ಮಂಗಳಾರತಿ ರಸೀದಿ ಹಾಗೂ ವಿವಿಧ ಸೇವೆಗಳ ಕುರಿತು ಭಕ್ತರಿಗೆ ಸಮರ್ಪಕವಾಗಿ ಮಾಹಿತಿ ನೀಡಿ, ದೇಗುಲದ ಆದಾಯ ಹೆಚ್ಚಿಸಲು ಶ್ರಮಿಸಬೇಕು. ಯಾರೇ ಆಗಲಿ ದೇಗುಲದಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ಕೆಲಸದಿಂದ ವಿಮುಕ್ತಿಗೊಳಿಸುವುದಾಗಿ ಎಚ್ಚರಿಸಿದರು.
ಅಲ್ಲದೇ ದೇವಸ್ಥಾನ ನಿಧಿಯಿಂದ ₹೨೫ ಲಕ್ಷ ವೆಚ್ಚದಲ್ಲಿ ರಥದ ಶೆಡ್ ನಿರ್ಮಾಣಕ್ಕೆ ಕೆಲವೇ ದಿನಗಳಲ್ಲಿ ಭೂಮಿಪೂಜೆ ನೆರವೇರಲಿದೆ. ಇನ್ನೂ ದೇಗುಲದ ಕೈಪಿಡಿ ಗೊಂಬೆ ಮತ್ತು ಗೋಪುರಗಳ ಸಂರಕ್ಷಣೆಯ ಉದ್ದೇಶದಿಂದ ಮಂತ್ರಾಲಯ ಮಾದರಿ ಯುಶೆಡ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಳೇ ಪೊಲೀಸ್ ಠಾಣೆಯ ಜಾಗ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದ್ದು, ರಸ್ತೆಗೆ ಹೊಂದಿಕೊಂಡು ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡುವ ಗುರಿ ಇದೆ. ದೇವಸ್ಥಾನ ಸಮಿತಿಯ ಒಪ್ಪಿಗೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಕನಕಾಚಲಪತಿ ದೇವಸ್ಥಾನದಲ್ಲಿನ ವೈರಿಂಗ್ ದುರಸ್ತಿ, ಮಹಿಳೆಯರ ಅನುಕೂಲಕ್ಕಾಗಿ ಹಾಲುಣಿಸುವ ಕೇಂದ್ರ, ಸಿಸಿ ಕ್ಯಾಮೆರಾಗಳ ದುರಸ್ತಿ ಹಾಗೂ ಹೊಸ ಕಂಪ್ಯೂಟರ್‌ಗಳ ಖರೀದಿ ಹಾಗೂ ವಾಹನ ಪೂಜೆಗೆ ಅರ್ಚಕರನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದೇನೆ. ದೇಗುಲದ ಅವ್ಯವಸ್ಥೆ ಸರಿಪಡಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದ್ದಾರೆ.
ಈ ವೇಳೆ ಗ್ರೇಡ್-2 ತಹಸೀಲ್ದಾರ್ ವಿ.ಎಚ್. ಹೊರಪೇಟೆ, ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ಕೀರ್ತಿ ಸೋನಿ, ವೆಂಕಟೇಶ ಸೌದ್ರಿ, ನಾಗಪ್ಪ ಕೊರೆಡ್ಡಿ, ವೀರೇಶ ಕಡಿ, ಕಂಠೆಪ್ಪ ತರ್ಲಕಟ್ಟಿ, ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ ಹಾಗೂ ಸಿಬ್ಬಂದಿ ಇದ್ದರು.ಕನ್ನಡಪ್ರಭ ವರದಿ: ಕನಕಗಿರಿಯ ಕನಕಾಚಲಪತಿ ದೇಗುಲದ ಆದಾಯಕ್ಕೆ ಕೊಕ್ಕೆ ತಲೆಬರಹದಡಿ ಜು. ೧೧ರಂದು ಕನ್ನಡಪ್ರಭ ವಿಸ್ತೃತ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ದೇವಸ್ಥಾನಕ್ಕೆ ದಿಢೀರ್ ಭೇಟಿ ನೀಡಿ, ಆಡಳಿತ ಮಂಡಳಿಯವರೊಂದಿಗೆ ತುರ್ತು ಸಭೆ ನಡೆಸಿದರು. ಸಿಬ್ಬಂದಿ ಬೇಜವಾಬ್ದಾರಿ, ದೇಗುಲದ ಅಭಿವೃದ್ಧಿ ಕುರಿತಂತೆ ಎರಡು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಸರಿಯಾಗಿ ಕೆಲಸ ಮಾಡಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ತಹಸೀಲ್ದಾರ್ ಕಟ್ಟುನಿಟ್ಟಿನ ಆದೇಶ ನೀಡಿದರು.