ಸಾರಾಂಶ
ಹಾಲುಮತ ಸಮಾಜದವರು ಹಾಲಿನಂತೆ ಶುಭ್ರತೆವುಳ್ಳ, ಮೃದು ಸ್ವಭಾವ ಹಾಗೂ ಕನಕ ದಾಸರರಂತೆ ಪವಿತ್ರ ಮನಸ್ಸು ಹೊಂದಿದ ಸಮುದಾಯವಾಗಿದೆ.
ಬಳ್ಳಾರಿ: ಭಕ್ತ ಶ್ರೇಷ್ಠ ಶ್ರೀಕನಕದಾಸರ ಕೀರ್ತನೆಗಳು ಜನಸಾಮಾನ್ಯರಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿವೆ. ಕನಕದಾಸರು ಸಾಮಾಜಿಕ ನ್ಯಾಯ, ಸಾಹಿತ್ಯ ಹಾಗೂ ಸಂಗೀತದ ಪ್ರತೀಕವಾಗಿದ್ದಾರೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಆಯೋಸಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಾಲುಮತ ಸಮಾಜದವರು ಹಾಲಿನಂತೆ ಶುಭ್ರತೆವುಳ್ಳ, ಮೃದು ಸ್ವಭಾವ ಹಾಗೂ ಕನಕ ದಾಸರರಂತೆ ಪವಿತ್ರ ಮನಸ್ಸು ಹೊಂದಿದ ಸಮುದಾಯವಾಗಿದೆ. ಕನಕದಾಸರು ಜಾತ್ಯತೀತ ತತ್ವವನ್ನು ಪ್ರತಿಪಾದಿಸಿದ ಮಹನೀಯರಾಗಿದ್ದಾರೆ ಎಂದರು.
ಶ್ರೀಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಸುಂಕಪ್ಪ ಅವರು, ದಾಸ ಶ್ರೇಷ್ಠ ಕನಕದಾಸರು ಭಾವನಾ ಜೀವಿಯಾಗಿದ್ದರು. ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮನುಷ್ಯತ್ವದ ಪರವಾಗಿ ಕಾಳಜಿ ಹೊಂದಿದ್ದರು ಎಂಬುದಕ್ಕೆ ಅವರ ಕೀರ್ತನೆಗಳಿಂದ ಕಂಡು ಬರುತ್ತದೆ ಎಂದರು.ಭಕ್ತ ಕನಕದಾಸರ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಶುರು ಮುನ್ನ ಕೆ.ವಸಂತಕುಮಾರ್ ತಂಡದವರು ಕನದಾಸರ ಕೀರ್ತನೆಗಳನ್ನು ಹಾಡಿದರು.
ಅದ್ಧೂರಿ ಮೆರವಣಿಗೆ:ಕನಕದಾಸರ ಜಯಂತಿ ಅಂಗವಾಗಿ ನಗರದಲ್ಲಿ ಮೆರವಣಿಗೆ ನಡೆಯಿತು. ಕನಕದಾಸ ವೃತ್ತದ ಕನಕದಾಸರ ಪುತ್ಥಳಿಗೆ ಸಂಸದ ಈ.ತುಕಾರಾಂ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ ತಲುಪಿತು.
ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಮೇಯರ್ ಮುಲ್ಲಂಗಿ ನಂದೀಶ್ , ಕಲ್ಲುಕಂಬ ಪಂಪಾಪತಿ, ಬೆಣಕಲ್ ಬಸವರಾಜಗೌಡ, ವಕೀಲ ಎರ್ರಿಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಪಿ.ಎಲ್.ಗಾದಿಲಿಂಗನಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡ ಮಹ್ಮದ್ ರಫೀಕ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ನೀಡಿದವು.