ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಸಮಾಜದಲ್ಲಿದ್ದ ಮೌಢ್ಯ ಮತ್ತು ಜಾತೀಯತೆಯನ್ನು ತೊಲಗಿಸಿ ಸಮ ಸಮಾಜ ನಿರ್ಮಾಣದ ಹೋರಾಟಕ್ಕೆ ಅಡಿಗಲ್ಲು ಹಾಕಿದವರು ಕನಕದಾಸರು ಎಂದು ಕಡೂರು ಬಿಜೆಪಿ ಮಂಡಲ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.ತಾಲೂಕಿನ ಕರೇಕಲ್ಲಳ್ಳಿ ಗ್ರಾಮದಲ್ಲಿ ಕನಕ ಯುವಕ ಸಂಘ ಏರ್ಪಡಿಸಿದ್ದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲೂ ಕನಕದಾಸರರ ಚಿಂತನೆಗಳು ಪ್ರಸ್ತುತವಾಗಿವೆ. ಅಂದಿನ ಕಾಲಘಟ್ಟದಲ್ಲಿ ಹಾಸುಹೊಕ್ಕಿದ್ದ ಮೂಢ ನಂಬಿಕೆಗಳು ಮತ್ತು ಜಾತೀಯತೆಯನ್ನು ತೊಡೆದು ಹಾಕಿ ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಒಂದೇ ಎಂದು ತಮ್ಮ ಕೀರ್ತನೆಗಳ ಮೂಲಕ ಅರಿವು ಮೂಡಿಸಿದವರು ಕನಕದಾಸರು.
ಕರ್ನಾಟಕದ ಸಂಗೀತ ಮತ್ತು ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ. ಅದರ ಜೊತೆ ಸಾಹಿತ್ಯ ಲೋಕಕ್ಕೆ ಮನೋಜ್ಞ ಕೃತಿಗಳನ್ನು ನೀಡಿದರು. ಅವರ ರಾಮಧಾನ್ಯ ಚರಿತೆ ಗ್ರಾಮೀಣರಿಗೆ ಅತ್ಯಂತ ಆಪ್ತವಾದ ಕೃತಿ. ಕನಕದಾಸರ ಮುಂಡಿಗೆ ಗಳು ಜೀವನಾನುಭವ ಮತ್ತು ಪಾರಮಾರ್ಥಿಕ ಸತ್ಯದ ಪ್ರತೀಕಗಳು ಎಂದು ಬಣ್ಣಿಸಿದರು.ಅಹಂಭಾವ ರಹಿತವಾಗಿ ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣದ ಕಲ್ಪನೆ ಕನಕದಾಸರದ್ದಾಗಿತ್ತು. ಕನಕದಾಸರ ಕರೆಗೆ ಓಗೊಟ್ಟು ಬಂಡೆಯಲ್ಲಿ ಒಡಮೂಡಿದ ಕನಕರಾಯಸ್ವಾಮಿ ಕಡೂರಿನಲ್ಲಿರುವುದು ನಮ್ಮೆಲ್ಲರ ಹೆಮ್ಮೆ. ಅಂತರಂಗದ ಕರೆಗೆ ದೇವರು ಒಲಿಯುತ್ತಾನೆಂದು ಪ್ರತ್ಯಕ್ಷ ತೋರಿದ ಸ್ಥಳ ಕನಕರಾಯನ ಗುಡ್ಡ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಕನಕರ ಅನುಯಾಯಿಗಳಿಗೆ ಅದು ಪುಣ್ಯ ಸ್ಥಳ ಎಂದರು.
ಮುಖಂಡ ನಿಡಘಟ್ಟ ಲೋಕೇಶ್ ಮಾತನಾಡಿ, ಕನಕದಾಸರ ಚಿಂತನೆಗಳು ಯಥಾವತ್ತಾಗಿ ಅನುಷ್ಠಾನಗೊಂಡರೆ ಸಮಾನತೆ ಸ್ವಾಸ್ಥ್ಯಸಮಾಜ ನಿರ್ಮಾಣವಾಗುತ್ತದೆ ಎಂದರು.ಕನಕ ಯುವಕ ಸಂಘದ ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಕನಕದಾಸರ ಆದರ್ಶ ಇಟ್ಟುಕೊಂಡು ಸಂಘ ಸಾಮಾಜಿಕ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ತಿಮ್ಮಯ್ಯ, ಬಿ.ಟಿ.ಅಜ್ಜಯ್ಯ, ಮೋಹನ್,ಮಲ್ಲೇಶಪ್ಪ, ಅಜೇಯ, ಸಚಿನ್ ಮತ್ತಿತರರು ಇದ್ದರು.23ಕೆಕೆಡಿಯು1.
ಕಡೂರು ತಾಲೂಕಿನ ಕರೇಕಲ್ಲಳ್ಳಿ ಗ್ರಾಮದಲ್ಲಿ ಕನಕ ಯುವಕ ಸಂಘದಿಂದ ಕನಕ ಜಯಂತಿ ಆಚರಣೆ ನಡೆಯಿತು.