ಸಾರಾಂಶ
ಜಿಲ್ಲಾಡಳಿತದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ಬಸವಂತಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ದಾವಣಗೆರೆದಾಸಶ್ರೇಷ್ಠ ಕನಕದಾಸರು ಯಾವುದೇ ಹೋರಾಟ ಮಾಡದೇ ಕೇವಲ ತಮ್ಮ ಕೀರ್ತನೆಗಳ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಿದರು ಎಂದು ಮಾಯಕೊಂಡ ಶಾಸಕ ಕೆ.ಬಸವಂತಪ್ಪ ತಿಳಿಸಿದರು.
ನಗರದ ಪಿ.ಬಿ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಡೆದ ದಾಸಶ್ರೇಷ್ಠ ಸಂತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ 12ನೇ ಶತಮಾನದ ಬಸವಣ್ಣ, 16ನೇ ಶತಮಾನದ ಕನಕದಾಸರು ಇನ್ನೂ ಅನೇಕ ದಾರ್ಶನಿಕರು ಕನ್ನಡ ನಾಡಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರೆಲ್ಲ ಸಮಾನತೆಗಾಗಿ ಯಾವುದೇ ರೀತಿಯ ಹೋರಾಟ ಮಾಡಲಿಲ್ಲ ಕೇವಲ ವಚನ, ಸಾಹಿತ್ಯ, ಕೀರ್ತನೆಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿ, ಸಮ ಸಮಾಜದ ನಿರ್ಮಾಣಕ್ಕೆ ಹಾಗೂ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಮಾರ್ಗ ತಿಳಿಸಿಕೊಟ್ಟಿದ್ದಾರೆ.ಹಗರಿಬೊಮ್ಮನಹಳ್ಳಿ ಸರ್ಕಾರಿ ಕಾಲೇಜು ಪ್ರಾಚಾರ್ಯ ಡಾ.ಕೆ.ವೆಂಕಟೇಶ್ ಮಾತನಾಡಿ, ಕನಕದಾಸರು ಸಮಾಜದ ಎಲ್ಲಾ ವರ್ಗದವರಿಗೆ ಒಂದು ನಿಧಿಯಂತೆ ದೊರಕಿದ್ದಾರೆ. 16ನೇ ಶತಮಾನದಲ್ಲಿ ನಡೆದ ದಾಸ ಚಳವಳಿಗೆ ಒಂದು ವಿಶೇಷ ಮಹತ್ವ ದೊರಕಿದ್ದು ಕನಕದಾಸರ ಪ್ರವೇಶದಿಂದ. ಕನಕದಾಸರು ದುಡಿಯುವ ಹಾಗೂ ಶೋಷಿತ ವರ್ಗವನ್ನು ಪ್ರತಿನಿಧಿಸಿದ ಏಕೈಕ ವ್ಯಕ್ತಿ. ವ್ಯಾಸರಾಯರು ಜಾತಿಯ ಕಾರಣಕ್ಕಾಗಿ ಕನಕದಾಸರ ಶಿಷ್ಯನಾಗಿ ಸ್ವೀಕರಿಸಲು ಹಿಂದೇಟು ಹಾಕಿದ್ದರು. ನಂತರ ಕನಕದಾಸರ ಶಕ್ತಿ, ಜ್ಞಾನ ಹಾಗೂ ಪ್ರತಿಭೆ ಗಮನಿಸಿ ಕೇಳಿದಿರಾ ಕನಕನಾಡುವ ಮಾತುಗಳ ಮಾಡಲ್ಲ, ಹುಡುಕಿದರೂ ನಿನಗೆ ಈಡಾರು ಎಂಬ ಮಾತುಗಳನ್ನು ಸ್ವತಃ ವ್ಯಾಸರಾಯರೇ ಹೇಳುತ್ತಾರೆ. ಕನಕದಾಸರನ್ನು ಸಂತ, ಭಕ್ತ, ದಾಸರನ್ನಾಗಿ ನೋಡುತ್ತೇವೆ ಆದರೆ ಅವರು ಒಬ್ಬ ಸಮಾಜ ಸೇವಕ, ಸಮಾನತೆ ಪ್ರತಿಪಾದಿಸಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಸಂತೋಷ್, ದಾಸಶ್ರೇಷ್ಠ ಶ್ರೀ ಕನಕದಾಸರು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಬಿ.ರಮೇಶ್, ಸಮಾಜದ ಗುರು ಶಿವಕುಮಾರ್ ಒಡೆಯರ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಇನ್ಸೈಟ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಕಕ್ಕರಗೊಳ್ಳ, ದುರ್ಗಾಂಬಿಕಾ ದೇವಸ್ಥಾನ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಇದ್ದರು.ಸಾಧಕರಿಗೆ ಸನ್ಮಾನ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್.ಕೆ, ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಜೆ.ಎನ್.ಶ್ರೀನಿವಾಸ್, ಕೆ.ಎಚ್.ಅಣ್ಣಪ್ಪ, ರಾಷ್ಟ್ರೀಯ ಕರಾಟೆ ವಿಭೂಷಣ ಪ್ರಶಸ್ತಿ ವಿಜೇತ, ಕ್ರೀಡಾಪಟು ಕಾರ್ತಿಕ್ ಸಿ.ಅಗಡಿ, ಅಂತಾರಾಷ್ಟ್ರೀಯ ವೇಯ್ಟ್‌ಲಿಫ್ಟರ್ ಕ್ರೀಡಾಪಟು ಕೆ.ಎಸ್.ಸಾಯಿನಾಥ್, ಸಮಾಜ ಸೇವಕರಾದ ಎಸ್. ಬಾಬುರಾವ್, ಚಂದ್ರಶೇಖರ್ ಯಶವಂತ್, ರೂಪಶ್ರೀ ಕೆ.ಆರ್.ಉಮೇಶ್ ರನ್ನು ಸನ್ಮಾನಿಸಲಾಯಿತು.
.....