ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಸದ್ಯ ಮತಕ್ಷೇತ್ರದಲ್ಲಿ ಈ ಬಾರಿ ಸಂಪೂರ್ಣ ಮಳೆ ಕಳೆದುಕೊಂಡು ಬರಗಾಲ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು. ಗ್ರಾಪಂ ಪಿಡಿಒಗಳು ಶುದ್ಧ ಕುಡಿಯುವ ನೀರು ಸಮಸ್ಯೆಯಾಗದಂತೆ ಮುತುವರ್ಜಿ ವಹಿಸಬೇಕು. ಇದಕ್ಕೆ ತಾಲೂಕು, ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿ ಎಂದು ಶಾಸಕ ಹಾಗೂ ಕರ್ನಾಟಕ ಸರ್ಕಾರ ವಿಧಾನಸಭೆಯ ಅಂದಾಜು ಯೋಜನಾ ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಕೆಡಿಪಿ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಅವರು, ಈ ಬಾರಿ ಬರಗಾಲ ಇರುವುದರಿಂದ ಬರಗಾಲಕ್ಕೆ ಸಂಬಂಧಪಟ್ಟ ಇಲಾಖೆಗಳು ಪೂರ್ವ ತಯಾರಿಯಲ್ಲಿರಬೇಕು. ವಿಶೇಷವಾಗಿ 4 ಯೋಜನೆಗಳ ಬಗ್ಗೆ ಕಾಳಜಿವಹಿಸಿ ಈ ಯೋಜನೆಯಲ್ಲಿ ಇರುವ ಲೋಪದೋಷ ಸರಿಪಡಿಸಲು ಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಶಾಸಕರು ಚರ್ಚಿಸಿದರು. 1972ರಕ್ಕಿಂತ ಭೀಕರ ಬರಗಾಲ ಸಂಭವಿಸಿದೆ. ರೈತಾಪಿ ವರ್ಗ ತೊಂದರೆಯಲ್ಲಿದ್ದಾರೆ. ಬರಗಾಲ ಸಂಬಂಧಿಸಿದಂತೆ ಕೇಂದ್ರ ತಂಡ ಪರಿಶೀಲನೆ ಮಾಡಿದೆ. ಮತಕ್ಷೇತ್ರದ ಬಗ್ಗೆ ಅಧಿಕಾರಿಗಳು ಹಾನಿಯಾದ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಯಾವುದೇ ರೀತಿಯಿಂದ ರೈತರಿಗೆ ತೊಂದರೆಯಾಗದಂತೆ ಸರ್ವೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿ. ನೀರನ್ನು ಉಪಯೋಗಿಸುವ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
40 ದಿನ ನೀರಿನ ಸಮಸ್ಯೆ ಇಲ್ಲ:ಹಳ್ಳಿಗಳಿಗೆ ಈ 40 ದಿನಗಳವರೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಆಗುವುದಿಲ್ಲ. ಫೆಬ್ರುವರಿ ಪ್ರಥಮ ಹಂತದಲ್ಲಿ ಕೆರೆಗಳಿಗೆ ನೀರು ಹರಿಸಬೇಕು, ಲಚ್ಯಾಣ ಶೆ.60ರಷ್ಟು ನೀರು ಇರುವುದರಿಂದ ಸಮಸ್ಯೆ ಬರುವುದಿಲ್ಲ. ಸಂಗೋಗಿ ಕೆರೆಗೆ ನೀರು ಬರುವುದು ಬಂದ್ ಆಗಿದೆ. ಭೀಮಾನದಿಗೆ ನೀರು ಬಂದರೆ ಸಮಸ್ಯೆ ಇರುವುದಿಲ್ಲ. ವಸ್ತಿ ಪ್ರದೇಶಗಳಿಗೆ ಮುಂದಿನ ತಿಂಗಳು ಸಮಸ್ಯೆ ಆಗುತ್ತದೆ ಎಂದು ಪಿಆರ್‌ಡಿ ಅಧಿಕಾರಿ ಎಸ್. ಆರ್ ರುದ್ರವಾಡಿ ಸಭೆಯಲ್ಲಿ ತಿಳಿಸಿದರು.
ನೋಡಿ ಮುಂಬರುವ ದಿನಗಳಲ್ಲಿ ಎಸಿ ನೇತೃತ್ವದಲ್ಲಿ ತುರ್ತು ಅಧಿಕಾರಿಗಳ ಸಭೆ ಕರೆಯಿರಿ. ಸೋಲಾಪೂರ ಡಿಸಿ ಅವರಿಗೆ ಸಭೆಯ ಪ್ರೋಸಿಡಿಂಗ್ ರವಾನೆ ಮಾಡಿ ಹಾಗೂ ಪ್ರತಿ 15 ದಿನಕ್ಕೋಮ್ಮೆ ಟಾಸ್ಕಪೋರ್ಸ್ ಸಭೆ ಕರೆಯಲು ತಾ.ಪಂ ಅಧಿಕಾರಿ ಬಾಬುರಾವ್ ರಾಠೋಡ ಇವರಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಗುಣಮಟ್ಟದ ಆಹಾರ ನೀಡಿ:
ಅಂಗನವಾಡಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ವಿತರಣೆ ಮಾಡಬೇಕು. ಖಾಲಿ ಹುದ್ದೆಗಳನ್ನು ಸರಕಾರ ನಿಯಮಾನುಸಾರವಾಗಿ ತುಂಬಿಕೊಳ್ಳಿ. ಸರ್ಮಪಕ ನಿರ್ವಹಣೆ ಮಾಡದಿದ್ದರೆ ಅಂತಹವರ ಮೇಲೆ ಶಿಸ್ತುಕ್ರಮಕೈಗೊಳ್ಳಿ ಎಂದು ಶಾಸಕರು ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಎಸಿ ಅಬೀದ ಗದ್ಯಾಳ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ತಾಪಂ ಅಧಿಕಾರಿ ಬಾಬುರಾವ್ ರಾಠೋಡ, ಡಿ.ವಾಯ್.ಎಸ್ಪಿ ಜಗದೀಶ, ತಹಸೀಲ್ದಾರ್ ಬಿ.ಎಸ್ ಕಡಕಭಾವಿ, ಕೆಬಿಜೆಎನ್ಎಲ್ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಎಸ್.ಆರ್ ರುದ್ರವಾಡಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ,ಕ್ಷೇತ್ರ ಶಿಕ್ಷಣಾಧಿಕಾರಿ.ಟಿ.ಎಸ್ ಆಲಗೂರ, ಅಂಬೇಡ್ಕರ್ ನಿಗಮ ವ್ಯವಸ್ಥಾಪಕ ನಿರ್ದೇಶಕಿ ರೇಣುಕಾ , ತೋಟಗಾರಿಕೆ ಅಧಿಕಾರಿ ಎಸ್.ಎಸ್ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಬಿ.ಜೆ ಇಂಡಿ, ಲ್ಯಾಂಡ್ ಆರ್ಮಿ ಅಧಿಕಾರಿ ರಾಜಶೇಖರ ಹೂಗಾರ, ಹೆಸ್ಕಾಂ ಅಧಿಕಾರಿ ಎಸ್.ಬಿ ಮೇಡೇಗಾರ, ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಗೀತಾ ಗುತ್ತರಗಿಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.
ಲಿಂಬೆ, ದಾಳಿಂಬೆ, ದ್ರಾಕ್ಷಿ ಹಾನಿಯಾಗುವ ಸಾಧ್ಯತೆ:ಮತಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ ಇವರಿಂದ ಮಾಹಿತಿ ಕೇಳಿದರು. ಈ ಸಂದರ್ಭದಲ್ಲಿ ಅಧಿಕಾರಿ ಸಭೆಯಲ್ಲಿ ತಾಲೂಕಿನಾದ್ಯಂತ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಜೋಳ, ಕಡ್ಲಿ ಬಿತ್ತನೆಯಾದರೂ ಇಳುವರಿ ಬರುವ ಸಾಧ್ಯ ಇಲ್ಲ. ತೋಟಗಾರಿಕೆ ಬೆಳೆಗಳಿಗೂ ನೀರಿನ ಕೊರತೆಯಾಗಿದ್ದು, ಲಿಂಬೆ, ದಾಳಿಂಬೆ, ದ್ರಾಕ್ಷಿಯಂತಹ ಬೆಳೆಗಳು ಹಾನಿಯಾಗುವ ಸಾಧ್ಯ ಇದೆ. ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಸುಮಾರು 560 ಹೆಕ್ಟೇರ್ ಲಿಂಬೆ ಮತ್ತು 410 ಹೆಕ್ಟೇರ್ ದ್ರಾಕ್ಷಿ ಬೆಳೆ ಹಾನಿಯಾಗುವ ಹಂತದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು.