ನಾಡು ನುಡಿಗೆ ಕನಕದಾಸರ ಕೊಡುಗೆ ಅನನ್ಯ

| Published : Nov 24 2024, 01:48 AM IST

ಸಾರಾಂಶ

ನಿತ್ಯ ಜೀವನದಲ್ಲಿ ಹಾಸ್ಯ ಹೇಗೆ ಹಾಸುಹೊಕ್ಕಾಗಿದೆ ಎಂದು ತಮ್ಮ ಮನೆಯಿಂದ ಹಿಡಿದು ಸುತ್ತಮುತ್ತಲಿನ ವಾತಾವರಣದಲ್ಲಿ ಹಾಸ್ಯ ಹೇಗೆ ಕಂಡುಬರುತ್ತದೆ ಎಂಬುದನ್ನು ಸುಂದರವಾಗಿ ತಿಳಿಸುತ್ತಾ ನಗೆಯ ಹೊನಲನ್ನು ಹರಿಸಿದರು

ಗದಗ: ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ್ದಾರೆ. ಕೀರ್ತನಕಾರರಾಗಿ, ಸಂತರಾಗಿ, ಸಮಾಜ ಸುಧಾರಕರಾಗಿ ಅವರು ಕನ್ನಡ ನಾಡು-ನುಡಿ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ 2720ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿಯಲ್ಲಿ ಬೆರೆತು ಹೋದ ಒಬ್ಬ ಶ್ರೇಷ್ಠ ದಾಸವರೆಣ್ಯ ಕನಕದಾಸರು. ಕನಕದಾಸರ ಬದುಕು ಮತ್ತು ಆದರ್ಶಗಳು ಸಾರ್ವಕಾಲಿಕ. ಶರಣರ ವಚನ ಮತ್ತು ದಾಸರ ಪದಗಳು ಸಮಾಜದಲ್ಲಿ ಜಾತಿಮತ ಪಂಥ ಬೇಧಗಳನ್ನು ಅಳಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುತ್ತವೆ ಎಂದರು.

ಧಾರವಾಡ ಆಕಾಶವಾಣಿ ಕಲಾವಿದ ಚಂದ್ರಶೇಖರ ವಡಿಗೇರಿ ಸಂತ ಶ್ರೇಷ್ಠ ಕನಕದಾಸರು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಕನ್ನಡ ಸಾಹಿತ್ಯದಲ್ಲಿ ಹಾಸ್ಯ ವಿಷಯವಾಗಿ ಕೆ.ವಿ.ಎಸ್.ಆರ್. ಕಾಲೇಜಿನ ನಿವೃತ್ತ ಪ್ರಾ. ಅನಿಲ ವೈದ್ಯ ಮಾತನಾಡಿ, ನಿತ್ಯ ಜೀವನದಲ್ಲಿ ಹಾಸ್ಯ ಹೇಗೆ ಹಾಸುಹೊಕ್ಕಾಗಿದೆ ಎಂದು ತಮ್ಮ ಮನೆಯಿಂದ ಹಿಡಿದು ಸುತ್ತಮುತ್ತಲಿನ ವಾತಾವರಣದಲ್ಲಿ ಹಾಸ್ಯ ಹೇಗೆ ಕಂಡುಬರುತ್ತದೆ ಎಂಬುದನ್ನು ಸುಂದರವಾಗಿ ತಿಳಿಸುತ್ತಾ ನಗೆಯ ಹೊನಲನ್ನು ಹರಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ 2023ನೇ ಸಾಲಿನ ಅನುವಾದಿತ ಸಾಹಿತ್ಯ ಕೃತಿ ತೌಲನಿಕ ಧರ್ಮ ದರ್ಶನವು ಪುಸ್ತಕ ಬಹುಮಾನ ಪಡೆದ ಪ್ರಯುಕ್ತ ಜ ಡಾ. ತೋಂಟದಾರ್ಯ ಸಿದ್ದರಾಮ ಸ್ವಾಮಿಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದ ಸರ್ವ ಪದಾಧಿಕಾರಿಗಳು ಭಕ್ತಿಪೂರ್ವಕ ಸನ್ಮಾನಿಸಿ ಅಭಿನಂದನಾ ಪತ್ರ ಪ್ರಧಾನ ಮಾಡಿದರು.

ದೆಹಲಿಯಯ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಬಾಲ ಕವಿಯತ್ರಿ ಪ್ರಣತಿ ರಾಜೇಂದ್ರ ಗಡಾದ ಅವರನ್ನು ಸನ್ಮಾನಿಸಲಾಯಿತು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಸಂಗೀತ ನೀಡಿದರು. ಧರ್ಮ ಗ್ರಂಥ ಪಠಣವನ್ನು ಸಂಕೇತ. ಎಸ್. ತಕ್ಕಡಿ ಹಾಗೂ ವಚನ ಚಿಂತನವನ್ನು ಭುವನ್.ಎಸ್. ಅಕ್ಕಮ್ಮನವರ ನೆರವೇರಿಸಿದರು. ದಾಸೋಹ ಸೇವೆಯನ್ನು ಶರಣ ಹುಚ್ಚಣ್ಣ ಶಹಾಪುರ, ಹಾಲೇಶ್ವರ ಟ್ರೇಡಿಂಗ್ ಕಂಪನಿ ಗದಗ ಸಲ್ಲಿಸಿದರು.

ಶರಣ ಫಕ್ಕೀರಪ್ಪ ಹೆಬಸೂರ, ಬಾಲಚಂದ್ರ ಭರಮಗೌಡ್ರ, ವೀರಣ್ಣ ಗೋಟಡಕಿ ಹಾಗೂ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಐ.ಬಿ.ಬೆನಕೊಪ್ಪ ಪರಿಚಯಿಸಿದರು. ವಿದ್ಯಾ ಗಂಜಿಹಾಳ ಸ್ವಾಗತಿಸಿದರು. ಗೌರಕ್ಕ ಬಡಿಗಣ್ಣವರ ನಿರೂಪಿಸಿದರು.