ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕನಕದಾಸರ ಸಾಹಿತ್ಯವು ಕೇವಲ ಭಕ್ತಿಪಾರವಶ್ಯದ ಕೀರ್ತನೆಗಳಲ್ಲ. ಬದಲಾಗಿ ಅದು ಚಾರಿತ್ರಿಕ, ಪೌರಾಣಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಇಂದಿಗೂ ಪ್ರಸ್ತುತವಾಗಿರುವ ಮಹಾನ್ ವಿಚಾರಧಾರೆಯಾಗಿದೆ ಎಂದು ಮಲಘಾಣ ಪಪೂ ಕಾಲೇಜಿನ ಪ್ರಾಚಾರ್ಯ ಬಸವರಾಜ ಜಾಲವಾದಿ ಹೇಳಿದರು.

ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಸಾಹಿತ್ಯ ಬಹುಶಿಸ್ತಿಯ ನೋಟ ರಾಷ್ಟ್ರೀಯ ವಿಚಾರ ಸಂಕಿರಣದ 2ನೇ ದಿನವಾದ ಮಂಗಳವಾರ ಕನಕ ಸಾಹಿತ್ಯ ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ನೆಲೆಗಳ ಪ್ರಸ್ತುತತೆ ಕುರಿತು ಮಾತನಾಡಿದರು. 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ, ವರ್ಗ ವೈಷಮ್ಯ ಮತ್ತು ಮೌಢ್ಯದ ವಿರುದ್ಧ ಸಮರ ಸಾರಿದ ಕ್ರಾಂತಿಕಾರಿ ಕವಿ ಕನಕದಾಸರ ಸಾಹಿತ್ಯದ ಪ್ರಸ್ತುತತೆ ಅಪಾರವಾಗಿದೆ. ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯ ಮೂಲಕ ಜನ್ಮ ಆಧಾರಿತ ಜಾತಿ ಪದ್ಧತಿಯನ್ನು ಬಲವಾಗಿ ವಿರೋಧಿಸಿದರು. ಮಾನವನ ಶ್ರೇಷ್ಠತೆ ಇರುವದು ಹುಟ್ಟಿನಲ್ಲಿ ಅಲ್ಲ, ಗುಣದಲ್ಲಿದೆ ಎಂಬುವದನ್ನು ಪ್ರತಿಪಾದಿಸಿದರು. ಮೇಲ್ವರ್ಗ ಮತ್ತು ತಳಸಮುದಾಯದ ನಡುವೆ ಸೇತುವೆಯಾಗಿ ಭಕ್ತಿ ಪಂಥದ ಮೂಲಕ ಸಾಮಾಜಿಕ ಸಮಾನತೆ ಸಾಧಿಸಲು ಹೋರಾಡಿದರು. ಕನಕದಾಸರು ತಮ್ಮ ಕಾವ್ಯಗಳಲ್ಲಿ ಪೌರಾಣಿಕ ಕಥೆಗಳನ್ನು ಬಳಸಿಕೊಂಡರೂ ಅವುಗಳಿಗೆ ಸಾಮಾಜಿಕ ಮತ್ತು ಮಾನವೀಯ ಆಯಾಮವನ್ನು ನೀಡಿದ್ದಾರೆ. ಇಂದಿನ ಸಮಾಜದಲ್ಲಿಯೂ ಇರುವ ಜಾತಿ, ವರ್ಗ ಭೇದಗಳನ್ನು ಹೋಗಲಾಡಿಸಲು ಕನಕದಾಸ ವಿಚಾರಧಾರೆಗಳು ಅಗತ್ಯವಿದೆ. ಪ್ರಜಾಪ್ರಭುತ್ವದ ಬೇರುಗಳು ಇವರ ಸಾಹಿತ್ಯದಲ್ಲಿದೆ. ಕನಕದಾಸರು ಬದುಕಿನ ಸತ್ಯವಾಗಿದ್ದಾರೆ. ಇಂದು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ನಿರಂತರ ಓದುವ ಹವ್ಯಾಸ ಇದ್ದವರು ಜ್ಞಾನವಂತರಾಗಿ ಉತ್ತಮ ವ್ಯಕ್ತಿತ್ವ ತಮ್ಮದಾಗಿಸಿಕೊಳ್ಳುತ್ತಾರೆ ಎಂದರು.

ಸಂಚಾಲಕ ಡಾ.ಕುಶಾಲ ಬರಗೂರ ಮಾತನಾಡಿ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ತತ್ವಪದ ವಿಮರ್ಶೆ ಲೇಖನ ಸ್ಪರ್ಧೆ, ಕನಕದಾಸರ ಕವನ ಸ್ಪರ್ಧೆ ಹಮ್ಮಿಕೊಂಡಿದೆ. ಈ ಸ್ಪರ್ಧೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.

ಹುಬ್ಬಳ್ಳಿಯ ಶಾಲಿನಿ ರುದ್ರಮುನಿ, ಹಾಸನದ ಪ್ರೊ.ಎಂ.ಶಂಕರ್, ಡಾ.ಉಷಾ ಹಿರೇಮಠ, ಸಾಬನಿಯಾ ಡಂಗಿ, ಡಾ.ಎಚ್.ಬಿ.ನಡುವನಿಕೇರಿ, ಡಾ.ಎಂ.ಎಸ್.ಮಾಗಣಗೇರಿ, ಅಧ್ಯಯನ ಕೇಂದ್ರದ ಸಿಬ್ಬಂದಿ ಸತ್ಯನಾರಾಯಣ ಹಾಗೂ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು.


ಸುನೀತ ಕುಳಗೇರಿ ಅನಿಸಿಕೆ ಹಂಚಿಕೊಂಡರು. ಕೆ.ಎಸ್.ಬಾಗೇವಾಡಿ, ದ್ರಾಕ್ಷಾಯಿಣಿ ಬಾಗೇವಾಡಿ, ಶಿವಾಜಿ ಮೋರೆ ಕವನ ವಾಚಿಸಿದರು.

ಡಾ.ಬಸವರಾಜ ಸಾಲವಾಡಗಿ, ಸಿ.ಪಿ.ದಡೆಕರ, ಡಾ.ಬಿ.ಸಿ.ದೊಡ್ಡೇಗೌಡ, ಡಾ.ಎಸ್.ಬಿ.ಜನಗೊಂಡ, ಮಂಜುನಾಥ ಯಾಧವ ಇತರರು ಇದ್ದರು.