ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಜಾತಿ, ಮತ, ತಾರತಮ್ಯಗಳೆಂಬ ಮೌಢ್ಯಗಳ ನಿರ್ಮೂಲನೆಗಾಗಿ ಕೀರ್ತನೆ ಮತ್ತು ಕೃತಿಗಳನ್ನು ರಚಿಸಿ ಜನರಲ್ಲಿ ಸಾಮಾಜಿಕ ಸಾಮರಸ್ಯದ ಅರಿವು ಮೂಡಿಸಿದ ದಾಸ ಶ್ರೇಷ್ಠರೇ ಭಕ್ತ ಕನಕದಾಸರು ಎಂದು ನಗರದ ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.ನಗರದ ಎಸ್‌ವಿಪಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತಿಯಲ್ಲಿ ಮಾತನಾಡಿದ ಅವರು, ಕನಕದಾಸರು ಚಿಕ್ಕವಯಸ್ಸಿನಲ್ಲಿಯೇ ಯುದ್ಧ ಕಲೆಯ ಜೊತೆಗೆ ಸಾಹಿತ್ಯ, ಸಂಗೀತ, ವ್ಯಾಕರಣ, ಮೀಮಾಂಸೆಗಳ ಪಾಂಡಿತ್ಯ ಪಡೆದಿದ್ದರು. ತಮ್ಮ ಬಳಿ ಇದ್ದ ಸಂಪತ್ತನ್ನೆಲ್ಲ ಸಮಾಜೋದ್ಧಾರ ಕಾರ್ಯಗಳಿಗೆ ಬಳಸಿ ಜನಪ್ರೀತಿ ಗಳಿಸಿದರು. ಸಮಾಜದಲ್ಲಿ ನೆಲೆಯೂರಿದ್ದ ಜಾತಿ, ವರ್ಣ, ಮತ, ಭೇದಗಳನ್ನು ಹೋಗಲಾಡಿಸಲು ಕೀರ್ತಿಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿಸಿದರು. ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಸಾರಗಳೆಂಬ ಕೃತಿಗಳನ್ನು ರಚಿಸಿ ಕೀರ್ತನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರು. ಕುಲದ ಕೀಳರಿಮೆಗಳನ್ನು ತ್ಯಜಿಸಿ, ಮಾಯೆಯೆಂಬ ಭ್ರಮೆಯನ್ನು ತೊಡೆದು ಹಾಕಿ ದುಡಿದು ತಿನ್ನಬೇಕು ಎಂದರು. ಹಿರಿಯ ಸಹ ಶಿಕ್ಷಕ ವಿ.ಎಂ. ಅರ್ಕಚಾರಿ ಮಾತನಾಡಿ, ನಿತ್ಯ ಪರಿವರ್ತನಾಶೀಲ ಸಮಾಜದಲ್ಲಿ ಕನಕರ ಕೀರ್ತನೆಗಳು ನಿಜಕ್ಕೂ ಅನಿವಾರ್ಯ. ಭವಬಂಧನಗಳಿಲ್ಲದೆ ಸ್ವತಂತ್ರವಾಗಿ ಬದುಕುವ ಕಲ್ಪನೆಯನ್ನು ಕಟ್ಟಿಕೊಳ್ಳಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಎಸ್.ಬಿ. ರೇಣು ಸೇರಿದಂತೆ ಎಲ್ಲಾ ಬೋಧಕ, ಬೋಧಕೇತರರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಕೀರ್ತನೆ ಹಾಡಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))