ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಸಂತಶ್ರೇಷ್ಠ ಕನಕದಾಸರು ಅಂದಿನ ಕಾಲದಲ್ಲಿ ಬೇರೂರಿದ್ದ ಸಾಮಾಜಿಕ ಮೌಢ್ಯ ತೊಡೆದು ಹಾಕಲು ತಮ್ಮ ಕೀರ್ತನೆಗಳ ಮೂಲಕ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಒಬ್ಬ ಮಹಾನ್ ಸಮಾಜ ಸುಧಾರಕರು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶನಿವಾರ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಸಭಾಂಗಣದಲ್ಲಿ ಸಂತಶ್ರೇಷ್ಠ ಕನಕದಾಸರ ೫೩೮ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನಕದಾಸರು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ದಾಸ ಸಾಹಿತ್ಯ ರಚಿಸಿದ್ದರು. ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳು ಇಂದಿಗೂ ಜನರಿಗೆ ಮಾರ್ಗದರ್ಶಕವಾಗಿವೆ. ಕನ್ನಡ ಸಾಹಿತ್ಯ ಲೋಕದ ಮಹೋನ್ನತ ವ್ಯಕ್ತಿಗಳಲ್ಲಿ ಒಬ್ಬರಾದ ಕನಕದಾಸರು, ತಮ್ಮ ಕೃತಿಗಳ ಮೂಲಕ ಕಟ್ಟಿಕೊಟ್ಟ ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಹೇಳಿದರು.ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ಭಾರತದ ಭಕ್ತಿ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರದು ಪ್ರಮುಖ ಸ್ಥಾನ. ಪುರಂದರ ದಾಸರಂತೆ ಕನಕದಾಸರೂ ಮಹಾಜ್ಞಾನಿಗಳು. ಅವರು ಕವಿಯಷ್ಟೇ ಆಗಿರಲಿಲ್ಲ. ಸಮಾಜ ಸುಧಾರಕರು, ದಾರ್ಶನಿಕರು ಹಾಗೂ ಮಾನವತೆ ಸಾಕಾರವಾಗಿದ್ದರು. ಅವರ ಕೃತಿಗಳು ಭಕ್ತಿಯ ಪರಮೋನ್ನತ ಸ್ಥಿತಿಯನ್ನು ತೋರಿಸುವುದರ ಜೊತೆಗೆ ಅದರ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ದೈವಭಕ್ತಿಯ ಸಾರ್ಥಕತೆ ಸಂದೇಶವನ್ನೂ ಸಾರಿ ನಿಂತಿವೆ ಎಂದು ತಿಳಿಸಿದರು.
ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಮೇಲು-ಕೀಳು ಎಂಬ ತಾರತಮ್ಯ ಭಾವನೆಗೆ ಸ್ಪಷ್ಟ ಉತ್ತರವಿದೆ. ಭಕ್ತಿಯ ಮೂಲಕವೇ ಸಮಾನತೆ, ಸಹೋದರತ್ವ, ದೈವಾನ್ವೇಷಣೆ ಮತ್ತು ದೈವದ ಜೊತೆ ಸಂವಾದದ ಮಾರ್ಗವನ್ನೂ ಅವರು ಬೋಧಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ರಂಗನಾಥ್ ಕಂಟನ ಕುಂಟೆ ಅವರು ಕನಕದಾಸರ ಜೀವನ, ಕೃತಿಗಳು ಮತ್ತು ಅವರ ಸಾಮಾಜಿಕ ಸಂದೇಶಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಶ್ರೀ ಗುರುಸಿದ್ದೇಶ್ವರ ಮಠದ ಪೀಠಾಧಿಪತಿಗಳು ಶ್ರೀ ಬಿಂದುಶೇಖರ ಒಡೆಯರ್ ಮಹಾಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಸೇರಿ ಕುರುಬ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತಿ ಪ್ರಯುಕ್ತ ತುಮಕೂರು ನಗರದ ಶಿರಾಗೇಟ್‌ನ ಕನಕ ವೃತ್ತದಲ್ಲಿ ಸಾಂಸ್ಕೃತಿಕ ಕಲಾ ಹಾಗೂ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಚಾಲನೆ ನೀಡಿದರು. ಶ್ರೀ ಕನಕದಾಸರ ಪುತ್ಥಳಿಗೆ ಪುಷ್ಪ ನಮನದ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))