ಭಕ್ತಿ, ಶ್ರದ್ಧೆ ಮೂಲಕ ಗುರುಗಳ ಒಲಿಸಿಕೊಂಡ ಕನಕದಾಸರು

| Published : Nov 10 2025, 12:30 AM IST

ಸಾರಾಂಶ

ಚಳ್ಳಕೆರೆ ತಾಲ್ಲೂಕಿನ ನರಹರಿನಗರದ ಸರ್ಕಾರಿ ಕಿರಿಯಪ್ರಾಥಮಿಕ ಶಾಲೆಯ ಕನಕದಾಸ ಜಯಂತಿ ಕಾರ್ಯಕ್ರಮ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಭಕ್ತ ಕನಕದಾಸರಿಗೆ ಜ್ಞಾನದ ಧೀಕ್ಷೆಯನ್ನು ನೀಡಿದ ಗುರುಗಳೆಂದರೆ ವ್ಯಾಸರಾಯರು. ಪ್ರಾರಂಭದ ಹಂತದಲ್ಲಿ ವ್ಯಾಸರಾಯರೇ ಕನಕದಾಸರಿಗೆ ಧಾರ್ಮಿಕ ವಿಚಾರಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದರು. ನಿನಗೆ ಹೇಳುವ ಬದಲಾಗಿ ಕೋಣಕ್ಕೆ ಹೇಳಿದರೆ ಒಳ್ಳೆಯಾಗುತ್ತದೆ ಎಂದಿದ್ದರು. ಕನಕದಾಸರು ಕೋಣದ ಜಪಮಾಡಿ ಕೋಣವನ್ನೇ ಪ್ರತ್ಯಕ್ಷವಾಗುವಂತೆ ಮಾಡಿದರು. ಇದರಿಂದ ವ್ಯಾಸರಾಯರು ಕನಕದಾಸರಲ್ಲಿರುವ ಅಪಾರವಾದ ಭಕ್ತಿಯನ್ನು ಗುರುತಿಸಿ ಅವರಿಗೆ ಜ್ಞಾನದ ದೀಕ್ಷೆ ನೀಡಿದರು ಎಂದು ನರಹರಿ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಎಸ್.ತಿಪ್ಪೇಸ್ವಾಮಿ ತಿಳಿಸಿದರು.

ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 538ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು, ಕನಕದಾಸರ ಮಹಿಮೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ನಾವೆಲ್ಲರೂ ಕನಕದಾಸರ ಆದರ್ಶಗಳನ್ನು ಪಾಲಿಸುವತ್ತ ಹೆಜ್ಜೆ ಇಡಬೇಕೆಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಪಂ ಸದಸ್ಯ ಎನ್.ಮಂಜುನಾಥ, 538ನೇ ಕನಕ ಜಯಂತಿ ಕಾರ್ಯಕ್ರಮ ಆಚರಣಾ ಸಂದರ್ಭದಲ್ಲಿ ನಾವೆಲ್ಲೂ ಕನಕದಾಸರ ಜೀವನ ಮೌಲ್ಯಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುವ ಚಿಂತನೆ ನಡೆಸಬೇಕೆಂದರು. ವಿಶ್ವಕಂಡ ಅಪ್ರತಿಮ ಮಹಾನ್‌ ದಿವ್ಯಜ್ಞಾನಿಯಾದ ಕನಕದಾಸರ ಎಲ್ಲಾ ಕೀರ್ತನೆಗಳು ಪ್ರತಿಯೊಬ್ಬರ ಬದುಕಿನ ನೈಜ್ಯಪಾಠವಾಗಲಿವೆ. ಸಮಾಜವನ್ನು ಸರಿದಿಕ್ಕಿನಲ್ಲಿ ಸಾಗಿಸುವ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಪರಿವರ್ತನೆ ಹೊಂದುವ, ಸಮಾಜದಲ್ಲಿ ಎಲ್ಲರೊಂದಿಗೆ ವಿಶ್ವಾಸದಿಂದ ಬೆರೆಯುವ, ಸತ್ಯ ಮತ್ತು ಪ್ರಾಮಾಣಿಕತೆಯಿಂದ ಬದುಕನ್ನು ನಡೆಸುವ ಎಲ್ಲಾ ರೀತಿಯ ಸುಗಮ ದಾರಿಗಳನ್ನು ಕನಕದಾಸರು ತಮ್ಮ ಕೀರ್ತನೆ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಮುಖ್ಯಶಿಕ್ಷಕಿ ಶಾಂತಕುಮಾರಿ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಸಾಕಷ್ಟು ಸಾಧನೆಗಳ ಬಗ್ಗೆ ಉಪನ್ಯಾಸದ ಮೂಲಕ ನಮಗೆ ತಿಳಿಯಪಡಿಸಲಾಗಿದೆ. ವಿದ್ಯಾರ್ಥಿಗಳು ಇಂತಹ ಮಹಾನೀಯರ ಜೀವನ ಚರಿತ್ರೆಯ ಬಗ್ಗೆ ತಿಳಿದುಕೊಂಡು ಜಾಗೃತರಾಗಬೇಕಿದೆ. ಭಕ್ತಿ, ಶ್ರದ್ದೆ, ವಿನಯ ನಮ್ಮ ಜೊತೆಗಿದ್ದರೆ ನಮಗೆ ಶ್ರೇಯಸ್ಸು ಎಂದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಗೀತಮ್ಮ, ನೂರ್‌ಜಾನ್, ವಿಜಯಮ್ಮ, ಯಶೋಧಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.