ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಕನಕದಾಸರು

| Published : Nov 10 2025, 12:45 AM IST

ಸಾರಾಂಶ

ಮಾಗಡಿ: ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಶ್ರೇಷ್ಠ ಸಂತ ಕನಕದಾಸರು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಮಾಗಡಿ: ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಶ್ರೇಷ್ಠ ಸಂತ ಕನಕದಾಸರು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಡಾ.ಶಿವಕುಮಾರಸ್ವಾಮಿ ಆಡಿಟೋರಿಯಂನಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮೇಲು-ಕೀಳು ಅಸಮಾನತೆಯನ್ನು ಅಳಿಸಲು ತಮ್ಮ ಕೀರ್ತನೆಯ ಮೂಲಕ ಸಮಾನತೆಯನ್ನು ಸಾರಿದ ಸಂತ ಕನಕದಾಸರು. ಆದರೆ ಇತ್ತೀಚೆಗೆ ಜಾತಿ ಪದ್ದತಿ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಅಹಂಕಾರ ಬಿಟ್ಟರೆ ನಾವೂ ಕೂಡ ದೇವರನ್ನು ಕಾಣಬಹುದು ಎಂದು ಕನಕದಾಸರು ತೋರಿಸಿಕೊಟ್ಟಿದ್ದಾರೆ. ಕನಕದಾಸರ ವಿಚಾರಧಾರೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ನಾವೆಲ್ಲರೂ ಸಹೋದರತ್ವದಿಂದ ಬಾಳಿದರೆ ಮಾತ್ರ ವಿಶ್ವ ಮಾನವರಾಗಲು ಸಾಧ್ಯ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, 538 ವರ್ಷಗಳಲ್ಲಿ ಕೀರ್ತನೆಗಳ ಮೂಲಕ ಸಮಾನತೆಯ ಸಂದೇಶ ಸಾರಿದ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ. ಅವರ ರಾಮಧಾನ್ಯ ಚರಿತ್ರೆಯ ಬಡವ-ಶ್ರೀಮಂತ ಎಂಬ ವಿಚಾರಧಾರೆಗಳ ಕೊಡುಗೆ ಅದರ ಶ್ರೇಷ್ಠತೆಯ ಭಕ್ತಿಸಾರ ಎಂದೆಂದಿಗೂ ಪ್ರಸ್ತುತ. ಕನಕದಾಸರು, ವಾಲ್ಮೀಕಿ, ಬುದ್ಧ, ಬಸವ, ಅಂಬೇಡ್ಕರ್ ಇವರೆಲ್ಲರೂ ಸಹ ಸಮಾಜದ ಸಮಾನತೆಯ ಏಳಿಗೆಗೆ ದುಡಿಯದ ಮಹನೀಯರು. ಇಡೀ ರಾಷ್ಟ್ರದಲ್ಲಿಯೇ ಅತ್ಯುತ್ತಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿಎಂ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಹ ಕೈಜೋಡಿಸಿದ್ದರಿಂದ ರಾಜ್ಯದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದರು.

ಅರವಂಟಿಕೆಗೆ 1 ಕೋಟಿ ಮಂಜೂರು:

ಮಾಗಡಿ ಪಟ್ಟಣದ ತಿರುಮಲೆಯಲ್ಲಿ ಶ್ರೀರಂಗನಾಥಸ್ವಾಮಿ ಕುರುಬರ ಅರವಂಟಿಕೆ ನಿರ್ಮಾಣಕ್ಕೆ ಸರ್ಕಾರದಿಂದ 1 ಕೋಟಿ ರುಪಾಯಿ ಅನುದಾನಕ್ಕೆ ಮಂಜೂರಾತಿ ದೊರೆತಿದೆ. ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಸಹಕಾರದಿಂದ ಒಂದು ಉತ್ತಮ ಭವನ ನಿರ್ಮಿಸಲಾಗುತ್ತದೆ ಎಂದರು.

ಬೆಂಗಳೂರು ಮಹಾರಾಣಿ ಕ್ಲಸ್ಟರ್ ನ ಉಪನ್ಯಾಸಕಿ ಡಾ.ಎಲ್.ಜಿ.ಮೀರಾ ಕನಕದಾಸರ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕುರುಬ ಸಮಾಜದ ಹಿರಿಯರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಮಕ್ಕಳಿಗೆ ಕನಕದಾಸರ ಕುರಿತು ನಾಟಕ ಪ್ರದರ್ಶನ ನೀಡಿದ ಮಕ್ಕಳನ್ನು ಗೌರವಿಸಲಾಯಿತು. ಪಟ್ಟಣದ ಕನಕದಾಸರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಕೂರಿಸಿ ಕುಂಭ ಕಳಸದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಶಿವರುದ್ರಮ್ಮ ವಿಜಯಕುಮಾರ್, ಉಪಾಧ್ಯಕ್ಷ ರಿಯಾಜ್ ಅಹಮದ್, ಸದಸ್ಯ ಶಿವಕುಮಾರ್, ಅನಿಲ್, ಅಶ್ವಥ್, ಕುರುಬ ಸಮಾಜದ ರಾಜ್ಯ ಉಪಾಧ್ಯಕ್ಷ ಎಂ.ಸಿ.ರಾಜಣ್ಣ, ಕಾರ್ಯದರ್ಶಿ ಎಚ್.ಶಿವಕುಮಾರ್, ಕಾನೂನು ಸಲಹೆಗಾರ ವಕೀಲ ರಾಜಯ್ಯ, ಯಾಗನಹಳ್ಳಿ ಚಂದ್ರಯ್ಯ, ಮಹಿಳಾ ಸಂಚಾಲಕಿ ಯಶೋಧಮ್ಮ, ವೆಂಕಟೇಶ್, ಶಿವರಾಜ್, ತಹಶೀಲ್ದಾರ್ ಡಿ.ಪಿ.ಶರತ್‌ಕುಮಾರ್, ತಾಪಂ ಇಓ ಜಯಪಾಲ್, ಬಿಇಒ ಎಸ್.ಸಿ. ಚಂದ್ರಶೇಖರ್, ಕವಿತಾ, ಚಿಕ್ಕರಾಜು, ಮೂರ್ತಿನಾಯಕ್, ಕುಮಾರ್, ತೇಜಸ್‌ಕುಮಾರ್, ಕೃಷ್ಣಪ್ಪ, ವಜನಾ ಇತರರಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ಪಟ್ಟಣದ ಡಾ.ಶಿವಕುಮಾರಸ್ವಾಮಿ ಆಡಿಟೋರಿಯಂನಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಸಂತ ಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವದ ಸಮಾರಂಭವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು.