ಕಾರಟಗಿ ಪಟ್ಟಣದ ಕನಕದಾಸ ವೃತ್ತದಲ್ಲಿ ಶುಕ್ರವಾರ ಕನಕದಾಸ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ ಪೂಜೆ ಸಲ್ಲಿಸಿದರು.
ಕಾರಟಗಿ: 15ನೇ ಶತಮಾನದಲ್ಲಿ ಕನಕದಾಸರು ತಮ್ಮ ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಘನತೆಯ ಬದುಕು ದೊರೆಯಬೇಕು ಎಂಬ ಸಂದೇಶ ಸಾರಿದ್ದರು. ದೇವರ ಮುಂದೆ ಎಲ್ಲರೂ ಸಮಾನರು ಎಂಬ ಭಾವನೆ ಬಿತ್ತುವ ಮೂಲಕ ಸಾಮಾಜಿಕ ಸಾಮರಸ್ಯದ ಮಹತ್ವವನ್ನು ಪ್ರತಿಪಾದಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ವೆಂಕಟೇಶ ತಂಗಡಗಿ ಹೇಳಿದರು.
ಪಟ್ಟಣದ ಕನಕದಾಸ ವೃತ್ತದಲ್ಲಿ ಶುಕ್ರವಾರ ಕನಕದಾಸ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ನವಲಿ ವೃತ್ತದ ಅಗಲೀಕರಣದ ಜತೆಗೆ ಮೂರ್ತಿ ಸ್ಥಾಪನೆ ಕಾರ್ಯವೂ ಕೈಗೊಳ್ಳಲಾಗುವುದು ಎಂದರು.ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ಪಾಟೀಲ, ವಕೀಲ ಶಿವರೆಡ್ಡಿ ನಾಯಕ ಮಾತನಾಡಿದರು. ತುರುವಿಹಾಳ ಪೀಠದ ಶ್ರೀ ಮಾದಯ್ಯಗುರು ಹಾಗೂ ವಾಲ್ಮೀಕಿ ಸಮಾಜದ ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಕನಕದಾಸರ ಕೀರ್ತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಪುರಸಭೆಯಲ್ಲಿ ಜಯಂತಿ ಆಚರಣೆ: ಪುರಸಭೆ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಮಾತನಾಡಿ, ಕನಕದಾಸರ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕನಕದಾಸ ವೃತ್ತದಲ್ಲಿ ಪುತ್ಥಳಿ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಶೀಘ್ರ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.ಅಧ್ಯಕ್ಷ ಮಂಜುನಾಥ ಮೇಗೂರು, ಸದಸ್ಯರಾದ ದೊಡ್ಡಬಸವ ಬೂದಿ, ಸೋಮಶೇಖರ ಬೇರ್ಗಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ತಾಲೂಕು ಆಡಳಿತದಿಂದ ಆಚರಣೆ: ಕನಕದಾಸ ವೃತ್ತದ ನಾಮಫಲಕಕ್ಕೆ ಪೂಜೆ ಸಲ್ಲಿಸಿ ತಾಲೂಕು ಆಡಳಿತದಿಂದ ಜಯಂತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಷಣ್ಮುಖಪ್ಪ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಶಿರಸ್ತೇದಾರರಾದ ಸಾವಿತ್ರಿಬಾಯಿ, ಉಮಾಮಹೇಶ್ವರ ಪಾಲ್ಗೊಂಡಿದ್ದರು.ಇದಲ್ಲದೆ ವಿಶೇಷ ಎಪಿಎಂಸಿ ಕಚೇರಿ, ತಹಸೀಲ್ದಾರ್ ಕಚೇರಿ ಹಾಗೂ ಶರಣಬಸವೇಶ್ವರ ವಿದ್ಯಾಸಂಸ್ಥೆಯಲ್ಲಿಯೂ ಕನಕದಾಸ ಜಯಂತಿ ಆಚರಿಸಲಾಯಿತು.