ರಾಮಧಾನ್ಯ ಚರಿತೆಯ ಮೂಲಕ ಜನಮಾನಸದಲ್ಲಿ ಬೇರೂರಿದ್ದ ಶ್ರೇಷ್ಠ-ಕನಿಷ್ಠ ಎಂಬ ಭೇದಭಾವದ ವಿರುದ್ಧ ನಿರಂತರ ಹೋರಾಟ ನಡೆಸಿದರು.
ಕನ್ನಡಪ್ರಭ ವಾರ್ತೆ ಮುಂಡರಗಿ
ಸಂತ ಕನಕದಾಸರು ತಮ್ಮ ಜೀವನದುದ್ದಕ್ಕೂ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತ, ಸಮಾನತೆಯನ್ನು ಸಾಕಾರಗೊಳಿಸಲು ಹಾಡು ಕಟ್ಟಿ ಹಾಡಿದರು. ರಾಮಧಾನ್ಯ ಚರಿತೆಯ ಮೂಲಕ ಜನಮಾನಸದಲ್ಲಿ ಬೇರೂರಿದ್ದ ಶ್ರೇಷ್ಠ-ಕನಿಷ್ಠ ಎಂಬ ಭೇದಭಾವದ ವಿರುದ್ಧ ನಿರಂತರ ಹೋರಾಟ ನಡೆಸಿದರು. ಅವರ ಸಾಹಿತ್ಯ ಮತ್ತು ನಡೆ ಸಮಾಜದ ಸಮಾನತೆಯ ದ್ಯೋತಕ ಎಂದು ವಿಶ್ರಾಂತ ಪ್ರಾಚಾರ್ಯ ಪ್ರೊ. ಎ.ಬಿ. ಹಿರೇಮಠ ಹೇಳಿದರು.ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಪಟ್ಟಣದ ರಾಮೇನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತಶ್ರೇಷ್ಠ ಕನಕದಾಸರ ಜಯಂತಿಯ ಅಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಕನಕ ಗಾನ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನಕದಾಸರ ರಾಮಧಾನ್ಯ ಚರಿತೆ ಕೃತಿಯು ಮೇಲು-ಕೀಳುಗಳ ತಾರತಮ್ಯವನ್ನು ಹೋಗಲಾಡಿಸಿ, ಶ್ರಮಜೀವಿಗಳ ಸಂಕೇತವಾದ ರಾಗಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. ಕನಕದಾಸರ ಕೀರ್ತನೆಗಳು ಹಾಗೂ ಮುಂಡಿಗೆಗಳ ಸಾರವನ್ನು ಕೇವಲ ಹಾಡಿ ಕೇಳುವುದಷ್ಟೇ ಅಲ್ಲದೆ, ಅವುಗಳನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೋಲೀಸ್ ಪಾಟೀಲ ಮಾತನಾಡಿ, ಮಹಾನುಭಾವರ ಜಯಂತಿಗಳನ್ನು ಆಚರಿಸುವುದು ಅವರಿಗೆ ಉಪಕಾರ ಮಾಡುವುದಕ್ಕಲ್ಲ, ಬದಲಾಗಿ ನಮ್ಮ ಬದುಕಿನ ದಾರಿಯನ್ನು ಕಂಡುಕೊಳ್ಳಲು. ಕೇವಲ ಭಾಷಣಗಳ ಮೂಲಕ ಜನರಿಗೆ ಕನಕದಾಸರನ್ನು ಮುಟ್ಟಿಸುವುದು ಕಷ್ಟ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವರಾಜ ತಿಗರಿ ಮಾತನಾಡಿ, ಬರೀ ಪ್ರವಚನ ಮಾಡುವುದಕ್ಕಿಂತ ಸಂಗೀತ ಸಂಜೆಯ ಮೂಲಕ ಕನಕದಾಸರ ಜೀವನಾಮೃತವನ್ನು ಜನರಿಗೆ ಉಣಬಡಿಸಲು ನೆರವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಯೋಜಕ ಡಾ. ನಿಂಗು ಸೊಲಗಿ ಅವರ ಆಲೋಚನೆ ಅತ್ಯಂತ ಯಶಸ್ವಿಯಾಗಿದೆ ಎಂದ ಅವರು, ಕನಕ ಗಾನ ವೈಭವ ಕಾರ್ಯಕ್ರಮಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಆರ್ಥಿಕ ನೆರವು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಶಾಲೆಗೆ ಡೆಸ್ಕ್ ದಾನ ನೀಡಿದ ವಿಶ್ರಾಂತ ಗುರುಮಾತೆ ಪಿ.ಆರ್. ಗಾಡದ ಹಾಗೂ ಗೋಡ್ಖಿಂಡಿ ದಂಪತಿಗಳಿಗೆ ಸನ್ಮಾನಿಸಲಾಯಿತು. ಕಸಾಪ ತಾಲೂಕಾ ಆದ್ಯಕ್ಷ ಎಂ.ಜಿ. ಗಚ್ಚಣ್ಣವರ, ಕಲಕೇರಿಯ ಬಸವರಾಜ ದೇಸಾಯಿ, ಪಿ.ಎಂ.ಲಾಂಡೆ ಸೇರಿದಂತೆ ಅನೇಕರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಿ.ಎಚ್ ಹಲವಾಗಲಿ ಸ್ವಾಗತಿಸಿ, ಶಿಕ್ಷಕ ಎಂ.ಆರ್. ಗುಗ್ಗರಿ ನಿರೂಪಿಸಿ, ಶಿವಲೀಲಾ ಅಬ್ಬಿಗೇರಿ ವಂದಿಸಿದರುನಂತರ ನಡೆದ ಕನಕ ಗಾನ ವೈಭವದಲ್ಲಿ ಡೋಣಿಯ ಡೊಳ್ಳಿನ ಪದಕಾರ ನಿಂಗಪ್ಪ ಗುಡ್ಡದ, ಕರ್ನಾಟಕ ಜನಪದ ಕಲಾತಂಡದ ಶರಣಪ್ಪ ಕುಬಸದ, ಸುರೇಶ ಬಣಕಾರ, ಶ್ವೇತಾ ಸವಣೂರ, ಸಾನಿಯಾ, ಬಸವರಾಜ ಸಿದ್ದಣ್ಣವರ, ವೆಂಕಟೇಶ ಝಳಕಿ ಮೊದಲಾದ ಸ್ವರಾಮೃತ ಹಾಗೂ ಕರ್ನಾಟಕ ಜನಪದ ಕಲಾ ತಂಡದವರು ಕನಕದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ಪ್ರೇಕ್ಷಕರ ಮನಸೂರೆಗೊಂಡರು. ಈ ಸಂದರ್ಭ ಗ್ರಾಮದ ಹಿರಿಯರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.