ಪ್ರತಿ ವರ್ಷ ಕನಕಗಿರಿ ಉತ್ಸವ: ಸಚಿವ ಶಿವರಾಜ ತಂಗಡಗಿ

| Published : Mar 03 2024, 01:30 AM IST

ಸಾರಾಂಶ

ರಾಜಾ ಉಡಚಪ್ಪ ನಾಯಕ ಅವರ ಗತವೈಭವ ತೋರಿಸಬೇಕು ಎನ್ನುವ ಕಾರಣಕ್ಕಾಗಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಕನಕಗಿರಿ: ಇನ್ಮುಂದೆ ಕನಕಗಿರಿ ಉತ್ಸವವನ್ನು ಪ್ರತಿ ವರ್ಷ ನಡೆಸಲು ಸರ್ಕಾರದಲ್ಲಿಯೇ ತೀರ್ಮಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನಕಗಿರಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದಿನ ಎಲ್ಲ ಉತ್ಸವಗಳನ್ನು ಮೀರುವಂತೆ ಈ ಬಾರಿ ಉತ್ಸವ ಆಯೋಜಿಸಲಾಗಿದೆ. ರಾಜಾ ಉಡಚಪ್ಪ ನಾಯಕ ಅವರ ಗತವೈಭವ ತೋರಿಸಬೇಕು ಎನ್ನುವ ಕಾರಣಕ್ಕಾಗಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಹಿಂದಿನ ಸರ್ಕಾರ ಹಂಪಿ ಉತ್ಸವ ಆಚರಿಸಿದರು. ಆದರೆ ಕನಕಗಿರಿ ಉತ್ಸವ ಮರೆತರು. ಮತ್ತೆ ಸಿಎಂ ಸಿದ್ದರಾಮಯ್ಯ ಬಂದ ಮೇಲೆಯೇ ಕನಕಗಿರಿ ಉತ್ಸವ ಆಗುತ್ತಿದೆ ಎಂದರು.

ಕೆರೆ ತುಂಬಿಸುವ ಕಾರ್ಯವೂ ಹಿಂದಿನ ಸರ್ಕಾರದಲ್ಲಿ ಆಗಲಿಲ್ಲ‌. ನಮ್ಮ ಸರ್ಕಾರ ಬಂದ ಮೇಲೆ ಅದನ್ನು ಮಾಡುತ್ತಿದ್ದೇನೆ. ಅದಾದರೆ ಕನಕಗಿರಿಗೆ ಬರವೇ ಇರುವುದಿಲ್ಲ. ಕನಕಾಚಲಪತಿ ಪ್ರಾಧಿಕಾರ ಮಾಡಬೇಕು. ಸಿಎಂ ಮನಸ್ಸು ಮಾಡಿದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ನವಲಿ ಜಲಾಶಯ ಅಷ್ಟೇ ಅಲ್ಲ, ನವಲಿ ಸಮಾನಾಂತರ ಜಲಾಶಯಗಳನ್ನು ನಿರ್ಮಾಣ ಮಾಡುವ ಮೂಲಕ ಇಡೀ ಕೊಪ್ಪಳ ಜಿಲ್ಲೆಯನ್ನು ನೀರಾವರಿ ಮಾಡಬೇಕಾಗಿದೆ. ನದಿ ಜೋಡಿಸುವ ಪ್ರಯತ್ನ ಆಗಬೇಕು. ಅಂಜನಾದ್ರಿಗೆ ನೂರು ಕೋಟಿ ರುಪಾಯಿ ನೀಡಲಾಗಿದ್ದು, ಅದನ್ನು ಶೀಘ್ರವಾಗಿ ಅಭಿವೃದ್ಧಿ ಮಾಡಲಾಗುವುದು. ತೋಟಗಾರಿಕಾ ಪಾರ್ಕ್ ಪ್ರಾರಂಭಿಸುತ್ತೇವೆ ಎಂದರು. ಹಿಂದಿನ ಸರ್ಕಾರ ಹಣ ನೀಡಿಲ್ಲ. ಆದರೆ ನಾವು ಹತ್ತು ಕೋಟಿ ರುಪಾಯಿ ನೀಡುತ್ತೇವೆ ಎಂದರು.