ಪ್ರಹ್ಲಾದರೆಡ್ಡಿ ಮಾದಿನಾಳ ಕನಕಗಿರಿ
ಕಳೆದ ನಾಲ್ಕು ವರ್ಷದ ಹಿಂದೆ ಕಾರ್ಯಾರಂಭಗೊಂಡಿರುವ ಇಲ್ಲಿನ ಕಾರ್ಮಿಕ ನಿರೀಕ್ಷಕರ ಕಚೇರಿ ಇದ್ದೂ ಇಲ್ಲದಂತಾಗಿದೆ.ಹೌದು, ಕಾರ್ಮಿಕ ಇಲಾಖೆ ವ್ಯಾಪ್ತಿಯ ಈ ಕಚೇರಿಗೆ ಯಾವಾಗಲೂ ಬೀಗ ಹಾಕಿರುತ್ತಾರೆ. ಕಚೇರಿ ಸಮಯದಲ್ಲಿಯೂ ನಿರೀಕ್ಷಕ ಪರಶುರಾಮ ಕಚೇರಿಯಲ್ಲಿ ಕಾಣಿಸುತ್ತಿಲ್ಲ. ತಾಲೂಕು, ಜಿಲ್ಲಾ ಕಚೇರಿಗಳಲ್ಲಿ ಕೆಲಸಕ್ಕೆ ಬಂದಿದ್ದೇನೆ ಎಂದು ಕಾರ್ಮಿಕರ ಪ್ರಶ್ನೆಗೆ ಉತ್ತರಿಸುತ್ತಾರೆ.
ವಾರದಲ್ಲಿ ಮೂರು ದಿನ ಅರೆಬರೆಯಾಗಿ ಕಾರ್ಯನಿರ್ವಹಿಸುವ ಈ ಅಧಿಕಾರಿ, ಕರ್ತವ್ಯ ಆ್ಯಪ್‌ನಲ್ಲಿ ಬೆಳಗ್ಗೆ ಹಾಜರಾತಿ ಹಾಕಿ ಕಚೇರಿಗೆ ಬೀಗ ಹಾಕಿಕೊಂಡು ಹೋದವರು ಮರಳಿ ಸಾಯಂಕಾಲ ೪.೩೦ರ ಆನಂತರ ಮತ್ತೆ ಆನ್‌ಲೈನ್‌ನಲ್ಲಿ ಹಾಜರಾತಿ ಹಾಕಿದ ಬಳಿಕ ಮನೆ ಕಡೆಗೆ ತೆರಳುತ್ತಾರೆ ಎಂದು ಕಾರ್ಮಿಕರು ದೂರಿದ್ದಾರೆ.ವಾರದಲ್ಲಿ ಮೂರು ದಿನ ಮಾತ್ರ ಕಾರ್ಯನಿರ್ವಹಿಸುವ ನಿರೀಕ್ಷಕರು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಉಳಿದ ಮೂರು ದಿನವೂ ಕಚೇರಿ ತೆರೆಯದ ಪರಿಣಾಮ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ. ಇಂದು ಆಗುವ ಕೆಲಸಗಳು ನಾಳೆ, ನಾಡಿದ್ದು ಆಗುತ್ತಿರುವುದಕ್ಕೆ ನಿರೀಕ್ಷಕರು ಕಾರಣರಾಗುತ್ತಿದ್ದಾರೆ ಎಂದು ಕಾರ್ಮಿಕರು ಆರೋಪಿಸುತ್ತಾರೆ.
ಕಾರ್ಮಿಕರ ಅನುಕೂಲಕ್ಕಾಗಿ ಇರುವ ಕಚೇರಿಯನ್ನು ಸಮಯಕ್ಕೆ ಸರಿಯಾಗಿ ತೆರೆಯದ ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ. ನಿರೀಕ್ಷಕ ಪರಶುರಾಮ್ ಅವರನ್ನು ಬಿಟ್ಟರೆ ಬೇರಾವ ಸಿಬ್ಬಂದಿಯೂ ಇಲ್ಲಿ ನಿಯೋಜನೆ ಮಾಡಿಲ್ಲ. ಕಳೆದ ೪ ವರ್ಷದಿಂದ ಓರ್ವ ಅಧಿಕಾರಿಯಿಂದ ಈ ಕಚೇರಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನಡೆಯುತ್ತಿದ್ದರಿಂದ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕಚೇರಿ ಆರಂಭವಾದಾಗಿನಿಂದ ಒಬ್ಬ ಅಧಿಕಾರಿ ನಿಯೋಜಿಸಲಾಗಿದೆ. ಇದುವರೆಗೂ ಮತ್ತೊಬ್ಬ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಿಲ್ಲ. ತಾಲೂಕಿನಲ್ಲಿ ಮೂರು ಹೋಬಳಿ ಕೇಂದ್ರ ಹಾಗೂ ೬೩ ಗ್ರಾಮಗಳಿದ್ದು, ಈ ಇಲಾಖೆಯಲ್ಲಿ ಸಾವಿರಾರು ಜನ ಫಲಾನುಭವಿಯಾಗಿದ್ದಾರೆ. ಕಚೇರಿಯು ವಾರದಲ್ಲಿ ಮೂರು ದಿನ ಬಂದ್ ಆಗಿರುತ್ತದೆ. ಒಬ್ಬ ಅಧಿಕಾರಿಯಿಂದ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಮೇಲಧಿಕಾರಿಗಳು ಪರಿಶೀಲನೆ ನಡೆಸಿ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಆರ್‌ಟಿಐ ಕಾರ್ಯಕರ್ತ ಬಸವರಾಜ ಹಿರೇಖೇಡ ತಿಳಿಸಿದ್ದಾರೆ.
ತಾಲೂಕು ಹಾಗೂ ಜಿಲ್ಲಾ ಕಚೇರಿಯಲ್ಲಿ ಕೆಲಸಗಳಿದ್ದಾಗ ಕಚೇರಿಗೆ ಬೀಗ ಹಾಕುವುದು ಅನಿವಾರ್ಯವಾಗಿದೆ. ಉದ್ದೇಶಪೂರ್ವಕ ಕಚೇರಿ ಬಂದ್ ಮಾಡಿಲ್ಲ. ನನ್ನ ಬಿಟ್ಟರೆ ಬೇರಾವ ಸಿಬ್ಬಂದಿಯೂ ನಿಯೋಜನೆಯಾಗಿಲ್ಲ. ಒಬ್ಬರೇ ಕಚೇರಿ ನಡೆಸಿಕೊಂಡು ಹೋಗುವುದು ಕಷ್ಟವಾಗಿದೆ ಎಂದು ಕನಕಗಿರಿ ಕಾರ್ಮಿಕ ನಿರೀಕ್ಷಕ ಪರಶುರಾಮ ತಿಳಿಸಿದ್ದಾರೆ.