ನ. ೭ರಂದು ನಡೆಯಲಿರುವ ತಾಲೂಕು ಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಕೆ. ವೆಂಕಟೇಶ ಜನಾದ್ರಿ ಅವರನ್ನು ಕಸಾಪ ಸೇರಿ ವಿವಿಧ ಪಕ್ಷಗಳ ಗಣ್ಯರು ಬರಮಾಡಿಕೊಂಡು ಬುಧವಾರ ಗೌರವ ಸಮರ್ಪಣೆ ಮಾಡಿದರು.
ಕನಕಗಿರಿ: ನ. ೭ರಂದು ನಡೆಯಲಿರುವ ತಾಲೂಕು ಮಟ್ಟದ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ಕೆ. ವೆಂಕಟೇಶ ಜನಾದ್ರಿ ಅವರನ್ನು ಕಸಾಪ ಸೇರಿ ವಿವಿಧ ಪಕ್ಷಗಳ ಗಣ್ಯರು ಬರಮಾಡಿಕೊಂಡು ಬುಧವಾರ ಗೌರವ ಸಮರ್ಪಣೆ ಮಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಹೇರೂರು ಮಾತನಾಡಿ, ಕನ್ನಡ ನಾಡು, ನುಡಿ, ಪರಂಪರೆ, ಸಂಸ್ಕೃತಿಗೆ ಬೆಳವಣಿಗೆಗೆ ಸಾಹಿತ್ಯ ಪರಿಷತ್ತು ಶತಮಾನಕ್ಕೂ ಹೆಚ್ಚ ಕಾಲದಿಂದಲೂ ಶ್ರಮಿಸುತ್ತಾ ಬಂದಿದೆ. ನುಡಿ, ಅಕ್ಷರ ಜಾತ್ರೆ ನಡೆಸುವುದರಿಂದ ಕನ್ನಡ ಹೆಮ್ಮರವಾಗಿ ಬೆಳೆಯಲಿದೆ ಎಂಬ ಧ್ಯೇಯದಡಿ ತಾಲೂಕು ಮಟ್ಟದಲ್ಲಿಯೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ. ವೆಂಕಟೇಶ ಜನಾದ್ರಿ ಅವರು ವಚನಕ್ಕೆ ಸಂಬಂಧಿಸಿದ ೨೧ ಕೃತಿಗಳನ್ನು ಹೊರತಂದು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಾಪು ಮೂಡಿಸಿದ್ದಾರೆ. ಅಲ್ಲದೇ ತಮ್ಮ ನೌಕರಿ ಜತೆಗೆ ಸಾಹಿತ್ಯವನ್ನು ಬೆಳೆಸುತ್ತಿರುವ ಕಾರ್ಯವನ್ನು ಮೆಚ್ಚಿ ಕನಕಗಿರಿ ತಾಲೂಕು ಮಟ್ಟದ ದ್ವಿತೀಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು, ಶಿಷ್ಟಾಚಾರದಂತೆ ಅಧ್ಯಕ್ಷರ ನಿವಾಸಕ್ಕೆ ತೆರಳಿ ಕಸಾಪ, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕನ್ನಡಮ್ಮನ ಜಾತ್ರೆಗೆ ಸ್ವಾಗತಿಸಿಕೊಂಡು, ಗೌರವಿಸಲಾಗಿದೆ ಎಂದು ತಿಳಿಸಿದರು.ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ. ರಾಮಚಂದ್ರ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕನ್ನಡ ಸಮ್ಮೇಳನ ಪೂರಕವಾಗಿದೆ. ನೆಲ, ಜಲ, ಇತಿಹಾಸದ ಗತವೈಭವ ಸಾರುವ ಈ ಸಾಹಿತ್ಯ ಸಮ್ಮೇಳನ ಆಯೋಜನೆಯಿಂದ ಕನ್ನಡದ ದೀಪ ಬೆಳೆಗಲಿದೆ. ಈ ಕಾರ್ಯಕ್ರಮಕ್ಕೆ ಸರ್ವರೂ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದರು.
ಪ್ರಮುಖರಾದ ಶೇಖರಗೌಡ ಪಾಟೀಲ್, ಸಣ್ಣ ಕನಕಪ್ಪ, ಅನಿಲಕುಮಾರ ಬಿಜ್ಜಳ, ವಾಗೀಶ ಹಿರೇಮಠ ಮಾತನಾಡಿ, ಸಮ್ಮೇಳನವು ಜಾತ್ರೆಯಂತೆ ನಡೆಯಲಿ ಎಂದು ಅಭಿಪ್ರಾಯಪಟ್ಟರು.ಕಸಾಪ ತಾಲೂಕು ಅಧ್ಯಕ್ಷ ಮೆಹಬೂಬಹುಸೇನ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ಮಹಾಂತೇಶ ಸಜ್ಜನ್, ಕೆ.ಎಚ್. ಕುಲಕರ್ಣಿ, ಬಿ.ವಿ. ಜೋಶಿ, ಕನಕಪ್ಪ ದಂಡಿನ್, ಮಹಾಂತೇಶ ತಾಡಪತ್ರಿ, ಭೀಮನಗೌಡ ನವಲಿ, ಆನಂದ ಭತ್ತದ, ಲಿಂಗಪ್ಪ ಪೂಜಾರ, ರವಿ ಬಲಿಜ, ಚಂದ್ರಶೇಖರ ಚೋಳಿನ್, ಗಂಗಾಧರ ಚೌಡ್ಕಿ, ರುದ್ರಮುನಿ, ಶರಣಬಸಪ್ಪ ಭತ್ತದ, ಸುರೇಶ ಗುಗ್ಗಳಶೆಟ್ರ ಸೇರಿದಂತೆ ಇತರರಿದ್ದರು.
ಎಲ್ಲರಿಗೂ ಧನ್ಯವಾದ: ಕನ್ನಡಮ್ಮನ ಸೇವೆ ಮಾಡಲು ಸುತ್ತೋಲೆ ಬೇಕಾಗಿಲ್ಲ. ಕನ್ನಡಕ್ಕಾಗಿ ಎತ್ತಿದ ಕೈ ಕಲ್ಪವೃಕ್ಷವಾಗುತ್ತದೆ ಎನ್ನುವ ಧ್ಯೇಯ ನಮ್ಮೆಲ್ಲರದಾಗಬೇಕು. ನಾಡಿನ ಸಾಹಿತ್ಯದ ಪರಂಪರೆ ಜನ ಸಾಮಾನ್ಯರಿಗೆ ತಲುಪಿಸುವ ಕಾರ್ಯ ಕನ್ನಡ ಸಮ್ಮೇಳನದಿಂದ ಆಗುತ್ತಿರುವುದು ಶ್ಲಾಘನೀಯ. ಸಮ್ಮೇಳನಕ್ಕೆ ನನ್ನನ್ನು ಸ್ವಾಗತಿಸಿ, ಗೌರವ ಸಮರ್ಪಣೆ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಕೆ. ವೆಂಕಟೇಶ ಜನಾದ್ರಿ ಹೇಳಿದರು.