ಇದ್ಯಾವುದನ್ನು ನಾನು ತೆಲೆಗೆ ಹಾಕಿಕೊಳ್ಳದೆ ನನ್ನ ಕೆಲಸ ಮಾಡಿ ತೋರಿಸಿದ್ದೇನೆ. ರಾಜ್ಯದಲ್ಲಿಯೇ ನನ್ನ ಕೆಲಸ ಮಾದರಿಯಾಗಿ ಹೊರ ಹೊಮ್ಮಿದೆ

ಕನಕಗಿರಿ: ಕೆರೆ ತುಂಬಿ ಹರಿಯುತ್ತಿದ್ದರಿಂದ ರೈತರ ಚಿತ್ತ ತೋಟಿಗಾರಿಕೆಯತ್ತ ನೆಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಹೊರ ವಲಯದಲ್ಲಿನ ಲಕ್ಷ್ಮೀದೇವಿ ಕೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಾಗಿನ ಅರ್ಪಿಸಿ ಮಂಗಳವಾರ ಮಾತನಾಡಿದರು.

ಕೆರೆ ತುಂಬಿಸಿ ಎಂದು ನನಗೆ ಯಾರೂ ಹೇಳಿರಲಿಲ್ಲ, ಕೇಳಿರಲೂ ಇಲ್ಲ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ತುಂಗಭದ್ರ ನದಿಯಿಂದ ಲಕ್ಷ್ಮೀದೇವಿ ಕೆರೆಗೆ ನೀರು ಸರಬರಾಜು ಮಾಡಿ ಕೆರೆ ತುಂಬಿಸಲು ಮುಂದಾಗಿದ್ದಾಗ ವಿರೋಧಿಗಳು ನನಗೆ ಮನೆ ತುಂಬಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಆದರೆ, ಇದ್ಯಾವುದನ್ನು ನಾನು ತೆಲೆಗೆ ಹಾಕಿಕೊಳ್ಳದೆ ನನ್ನ ಕೆಲಸ ಮಾಡಿ ತೋರಿಸಿದ್ದೇನೆ. ರಾಜ್ಯದಲ್ಲಿಯೇ ನನ್ನ ಕೆಲಸ ಮಾದರಿಯಾಗಿ ಹೊರ ಹೊಮ್ಮಿದೆ ಎಂದರು.

ದೇವಲಾಪೂರ, ನಾಗಲಾಪೂರ, ಬಸರಿಹಾಳ ಹಾಗೂ ಲಕ್ಷ್ಮೀದೇವಿ ಕೆರೆ ತುಂಬಿದ್ದು, ರೈತರಿಗೆ ಅನುಕೂಲವಾಗಿದೆ. ಕೃಷ್ಣ, ತುಂಗಭದ್ರ ನದಿ ನೀರಿನಿಂದ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇನ್ನೂ ಕನಕಗಿರಿ ಪಟ್ಟಣದ ಶಾದಿ ಮಹಲ್‌ಗೆ ಕೋಟಿ ಬಿಡುಗಡೆಯಾಗಿದೆ. ಉಪ ನೋಂದಣಿ ಕಚೇರಿ ಕಾರ್ಯಾರಂಭಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು.

ನನ್ನ ವಿರೋಧಿಗಳು ನಾನು ಗೂಂಡಾ ಎಂದು ಚುನಾವಣೆ ವೇಳೆ ಪತ್ರ ಮುದ್ರಿಸಿ ಹಂಚಿದಾಗ ನೋವಾಗಿತ್ತು. ಈ ವಿಷಯ ನನ್ನ ಪತ್ನಿಗೆ ಗೊತ್ತಾಗಿ ಕಣ್ಣಿರಿಟ್ಟಿದ್ದಳು. ಆದರೆ, ನಾನು ಎದೆಗುಂದಿರಲಿಲ್ಲ. ಜನರನ್ನು ನನ್ನ ಕೈ ಬಿಡಲಿಲ್ಲ. ಕೆರೆಗಳಿಗೆ ನೀರು ತುಂಬಿಸಿರುವ ಬಗ್ಗೆ ನನಗೆ ಮಾತ್ರವಲ್ಲ ನನ್ನ ಪತ್ನಿಯೂ ಖುಷಿಯಾಗಿದ್ದು, ನನ್ನ ರಾಜಕೀಯ ಜೀವನ ಸಾರ್ಥಕದ ಕಾರ್ಯ ಎಂದು ಭಾವುಕರಾದರು.

ಇದಕ್ಕೂ ಮೊದಲು ಸಂಸದ ರಾಜಶೇಖರ ಹಿಟ್ನಾಳ್ ಮಾತನಾಡಿ, ನಾನು ಕನಕರಾಯ ಜಾತ್ರೆಗೆ ಬರುತ್ತಿದ್ದಾಗ ಹೋಟೆಲ್‌ಗಳಿಗೆ ಹೋಗಿ ನೀರು ಕುಡಿದಿದ್ದೆ. ಕನಕರಾಯನ ಆಶೀರ್ವಾದದಿಂದ ಗೆದ್ದು ಬಂದ ಶಿವರಾಜ ತಂಗಡಗಿಯವರು ಕೆರೆಗಳಿಗೆ ನೀರು ತುಂಬಿಸಿ ಜನ, ಜಾನುವಾರುಗಳಿಗೆ ನೆರವಾಗಿದ್ದಾರೆ. ಸಹೋದರ ತಂಗಡಗಿಯವರಂತಹ ರಾಜಕಾರಣಿ ಪಡೆದಿರುವ ನೀವೇ ಧನ್ಯರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ತಹಸೀಲ್ದಾರ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಗಂಗಾಧರಸ್ವಾಮಿ, ವಿರೇಶ ಸಮಗಂಡಿ, ಸಿದ್ದಪ್ಪ ನಿರ್ಲೂಟಿ, ಬಸವಂತಗೌಡ, ಶರಣೇಗೌಡ, ಅನಿಲ ಬಿಜ್ಜಳ, ರಾಜಸಾಬ್‌ ನಂದಾಪೂರ, ಸಂಗಪ್ಪ ಸಜ್ಜನ, ಟಿ.ಜೆ. ರಾಮಚಂದ್ರ, ಹೊನ್ನೂರಸಾಬ್‌ ಉಪ್ಪು, ಖಾಜಸಾಬ್‌ ಗುರಿಕಾರ, ಹುಲುಗಪ್ಪ ವಾಲೇಕಾರ ಸೇರಿದಂತೆ ಇತರರಿದ್ದರು.

ಜಿದ್ದಾಜಿದ್ದಿಗೆ ಕೆರೆಗೆ ಬಾಗಿನ?

ಕಳೆದ ಒಂದುವರೆ ತಿಂಗಳ ಹಿಂದೆ ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಪಾಟೀಲ್ ನೇತೃತ್ವದಲ್ಲಿ ನಾಗಲಾಪೂರ ಕೆರೆಗೆ ಸಚಿವ ತಂಗಡಗಿ ಬಾಗಿನ ಅರ್ಪಿಸಿದ್ದರು. ಇದೇ ಮಾದರಿಯಲ್ಲಿ ಲಕ್ಷ್ಮೀದೇವಿ ಕೆರೆಗೆ ಬಾಗಿನ ಅರ್ಪಿಸಬೇಕೆನ್ನುವ ಕೆಲವರು ಪಟ್ಟು ಹಿಡಿದು ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಸ್ವ-ಪಕ್ಷದ ಮುಖಂಡರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದರಿಂದ ವಿಪಕ್ಷದವರಿಗೆ ಇದು ಆಹಾರವಾಗಿ ಪರಿಣಮಿಸಿದೆ.