ಸಾರಾಂಶ
ಅಧ್ಯಕ್ಷೆಯಾಗಿ ಹುಸೇನಬೀ, ಉಪಾಧ್ಯಕ್ಷರಾಗಿ ಕಂಠಿರಂಗಪ್ಪ ಅವಿರೋಧ ಆಯ್ಕೆ । ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ
ಕನ್ನಡಪ್ರಭ ವಾರ್ತೆ ಕನಕಗಿರಿ
ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಹುಸೇನಬೀ ಚಳಮರದ ಅಧ್ಯಕ್ಷೆಯಾಗಿ ಹಾಗೂ ಕಂಠಿರಂಗಪ್ಪ ನಾಯಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ೧ನೇ ವಾರ್ಡಿನ ಹುಸೇನಬೀ ಚಳಮರದ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ೫ನೇ ವಾರ್ಡಿನ ಕಂಠಿರಂಗಪ್ಪ ನಾಯಕ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಅಧಿಕಾರಿಯಾಗಿದ್ದ ತಹಸೀಲ್ದಾರ ವಿಶ್ವನಾಥ ಮುರುಡಿ ನಾಮಪತ್ರಗಳ ಪರಿಶೀಲಿಸಿ ಸ್ವೀಕೃತ ಮಾಡಿಕೊಂಡರು. ಬೆಳಗ್ಗೆ ೧೧ ಗಂಟೆಗೆ ಆರಂಭವಾದ ಚುನಾವಣಾ ಪ್ರಕ್ರಿಯೆ ಮಧ್ಯಾಹ್ನದ ೧ ಗಂಟೆವರೆಗೆ ಶಾಂತಿಯುತವಾಗಿ ನಡೆಯಿತು.
ಅಧ್ಯಕ್ಷೆ ಹುಸೇನಬೀ ಚಳಮರದಗೆ ಶರಣೇಗೌಡ ಪಾಟೀಲ್ ಸೂಚಕರಾಗಿದ್ದರೇ ರಾಜಸಾಬ ನಂದಾಪೂರ ಅನುಮೋದಕರಾಗಿದ್ದರು. ಅಲ್ಲದೇ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕಗೆ ಸಂಗಪ್ಪ ಸಜ್ಜನ ಸೂಚಕರಾಗಿ, ಅನಿಲ ಬಿಜ್ಜಳ ಅನುಮೋದಕ ಸಹಿ ಹಾಕಿದ್ದರು. ನಾಮಪತ್ರಗಳ ಪರಿಶೀಲಿಸಿ, ಅಂಗೀಕರಿಸಿದ ಚುನಾವಣಾಧಿಕಾರಿ ವಿಶ್ವನಾಥ ಮುರುಡಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರೂ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸುತ್ತಿದ್ದಂತೆ ಕೈ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಅನಿಲ ಬಿಜ್ಜಳ, ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ, ಹುಸೇನಬೀ ಸಂತ್ರಾಸ್, ತನುಶ್ರೀ ಟಿ.ಜೆ. ರಾಮಚಂದ್ರ, ನಂದಿನಿ ರಾಮಾಂಜನೇಯರೆಡ್ಡಿ, ಅಭಿಷೇಕ ಕಲುಬಾಗಿಲಮಠ, ಸಂಗಪ್ಪ ಸಜ್ಜನ, ರಾಕೇಶ ಕಂಪ್ಲಿ, ರಾಜಸಾಬ ನಂದಾಪೂರ ಉಪಸ್ಥಿತರಿದ್ದರು.ಆಕಾಂಕ್ಷಿ ಸಮಾಧಾನಪಡಿಸಿದ ಸಚಿವ:
ಬಾಕ್ಸ್: ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ತನುಶ್ರೀ ಟಿ.ಜೆ. ರಾಮಚಂದ್ರ ಅವರಿಗೆ ಸಚಿವ ತಂಗಡಗಿ ಸಮಾಧಾನಪಡಿಸಿದರು. ನೋಡಿ ಮುಂದೆ ಅವಕಾಶಗಳಿವೆ. ಯಾವುದೇ ಕಾರಣಕ್ಕೂ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುವಂತೆ ತಿಳಿಸಿದರು. ಸಚಿವರ ಮಾತುಗಳನ್ನು ಆಲಿಸುತ್ತಿದ್ದ ಸದಸ್ಯೆ ತನುಶ್ರೀ ಅವರು ಸೈಲೆಂಟಾಗಿಯೇ ಹೊರ ನಡೆದರು.ಪಕ್ಷಭೇದ ಮರೆತು ಅಭಿವೃದ್ಧಿ: ಎರಡುವರೆ ವರ್ಷದ ನಂತರ ಪಪಂಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಪಕ್ಷಬೇಧ ಮರೆತು ಅಭಿವೃದ್ಧಿ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಕನಕಗಿರಿ ಪಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗದ್ದುಗೆ ಹಿಡಿದ ಹಿನ್ನೆಲೆ ಕಾರ್ಯಕರ್ತರ ವಿಜಯೋತ್ಸವದಲ್ಲಿ ಮಾತನಾಡಿ, ನೂತನ ಅಧ್ಯಕ್ಷೆ, ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕ ಕೆಲಸ ಮಾಡಲಿದ್ದು, ಪಟ್ಟಣದ ಅಭಿವೃದ್ಧಿಗೆ ಸದಸ್ಯರು ಪಕ್ಷಬೇಧ ಮರೆತು ಕೈಜೋಡಿಸಬೇಕು ಎಂದರು.ನಗರೋತ್ಥಾನ ಯೋಜನೆಯಡಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಿನಿ ವಿಧಾನಸೌದ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ ₹೧೫ ಕೋಟಿ ಬಿಡುಗಡೆಯಾಗಿದೆ. ಕನಕಗಿರಿ ಪಟ್ಟಣದಿಂದ ಮುಸಲಾಪೂರ-ಹಾಸಗಲ್ ಸಿಮಾದವರೆಗೆ ರಸ್ತೆ ಸುಧಾರಣೆ ಹಾಗೂ ಅಗಲೀಕರಣ ಮಾಡಲಾಗುವುದು. ಪಪಂ ಬ್ಯಾಂಕ್ ಖಾತೆಯಲ್ಲಿನ ಮೊತ್ತವನ್ನು ನೋಡಿಕೊಂಡು ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇನ್ನೂ ಅ.೮ರಂದು ಭಾರತೀಯ ಸೇನಾ ತರಬೇತಿ ಕೇಂದ್ರ(ಸೈನಿಕ ಶಾಲೆ) ಹಾಗೂ ಉಪ ನೊಂದಣಿ ಕಚೇರಿ ಕಾರ್ಯಾರಂಭ ಮಾಡುವುದಾಗಿ ತಿಳಿಸಿದರು.