ಸಾರಾಂಶ
ಕನಕಪುರ: ಆಸ್ತಿ ತೆರಿಗೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಧನಮೂಲಗಳಿಂದ ಸುಮಾರು 3568.30 ಲಕ್ಷ ರು. ಆದಾಯ ನಿರೀಕ್ಷಿಸಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನಗರಸಭೆಯ 2025-26ನೇ ಸಾಲಿನ 129.29 ಲಕ್ಷ ರು. ಉಳಿತಾಯ ಬಜೆಟ್ ಮಂಡಿಸಿದ್ದಾರೆ.
ಶನಿವಾರ ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 5136.84 ಲಕ್ಷ ರು. ಆದಾಯ ಹಾಗೂ 5007.55 ಲಕ್ಷ ರು. ವೆಚ್ಚದ ಉಳಿತಾಯದ ಬಜೆಟ್ ಮಂಡಿಸಿ ಮಾತನಾಡಿದ ಅವರು, ಇದಲ್ಲದೆ ಅಮೃತ-2 ಯೋಜನೆಯಡಿ 13832.೦೦ ಲಕ್ಷ ರು. ಅಂದಾಜು ವೆಚ್ಚದ ಸಮಗ್ರ ಕುಡಿವ ನೀರಿನ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಶೀಘ್ರದಲ್ಲಿ ನಗರಕ್ಕೆ 24 ಗಂಟೆ ಕುಡಿಯಲು ಕಾವೇರಿ ನೀರು ಪೂರೈಸಲಾಗುವುದು. ನಗರದಲ್ಲಿ ಬಾಕಿ ಇರುವ ಒಳಚರಂಡಿ ಕಾಮಗಾರಿ, ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ ಸಿವಿಲ್ ಕಾಮಗಾರಿಗಳನ್ನು ಅತಿ ಶೀಘ್ರವಾಗಿ ಪ್ರಾರಂಭಿಸಲಾಗುವುದು, ಯುಐಡಿಎಫ್ ಯೋಜನೆಯಡಿ ಅಡ್ಡಹಳ್ಳದ ಅಭಿವೃದ್ಧಿಗಾಗಿ 2 ಕೋಟಿ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭವಾಗಲಿದೆ. 65 ಲಕ್ಷ ವೆಚ್ಚದಲ್ಲಿ ವಿಕಲಚೇತನರ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುವುದು, ಕಾನಕಾನಹಳ್ಳಿ ಉದ್ಯಾನವನದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕನಕ ಕಾವೇರಿ ಉದ್ಯಾನವನದಲ್ಲಿ ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳ ಪೂರ್ಣಗೊಳಿಸಲಾಗುವುದು ಎಂದು ಸಭೆಗೆ ವಿವರಿಸಿದರು.ಸದಸ್ಯರ ಒತ್ತಾಯ:
ನಗರಾದ್ಯಂತ ನಾಯಿಗಳ ಹಾವಳಿಯಿಂದ ಮಕ್ಕಳು, ವಯಸ್ಕರು ಓಡಾಡಲು ಹೆದರುತ್ತಿದ್ದು, ಈ ಸಮಸ್ಯೆ ಬಗೆಹರಿಸುವಂತೆ ನಗರಸಭಾ ಜೆಡಿಎಸ್ ಸದಸ್ಯ ಸ್ಟುಡಿಯೋ ಚಂದ್ರು ಆಗ್ರಹಿಸಿದರು.ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರಿಲ್ಲದೆ ಗರ್ಭಿಣಿಯರಿಗೆ ತೊಂದರೆ ಆಗುತ್ತಿದ್ದು ಡಿಸಿಎಂ ಗಮನಕ್ಕೆ ತಂದು ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಇಲ್ಲದಿದ್ದರೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಸರ್ಕಾರಿ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಜೆಡಿಎಸ್ ಸದಸ್ಯ ಜಯರಾಮ್ ಎಚ್ಚರಿಕೆ ನೀಡಿದರು.
ಬೆಂಗಳೂರಿಗೆ ಪ್ರಯಾಣಿಸಲು ಸೂಕ್ತ ಸಾರಿಗೆ ವ್ಯವಸ್ಥೆ, ನಗರಾದ್ಯಂತ ಸಮರ್ಪಕ ವಿದ್ಯುತ್, ಕುಡಿಯುವ ನೀರು ಪೂರೈಸಬೇಕೆಂದು ಕಾಂಗ್ರೆಸ್ ಸದಸ್ಯರಾದ ವಿಜಯ್ ಕುಮಾರ್, ಕಾಂತರಾಜು, ಕಿರಣ್, ಜೆಡಿಎಸ್ ಸದಸ್ಯ ಲೋಕೇಶ್ ಮನವಿ ಮಾಡಿದರು.ತಾಲೂಕು ವೈದ್ಯಾಧಿಕಾರಿ ಶಶಿಧರ್ ಮಾತನಾಡಿ, ನಮ್ಮಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ. 160 ಸಿಬ್ಬಂದಿಗಳಲ್ಲಿ ಕೇವಲ 34 ಜನ ಮಾತ್ರ ಕೆಲಸ ನಿರ್ವಹಿಸುತ್ತಿದ್ದು ಈ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇವೆ. ಆದಷ್ಟೂ ಬೇಗ ಸಮಸ್ಯೆ ಪರಿಹರಿಸಲಾಗುವುದು ಎಂದು ಮಾಹಿತಿ ನೀಡಿದರು.ಸಾರಿಗೆ ಡಿಪೋ ವ್ಯವಸ್ಥಾಪಕ ಹಾಗೂ ಬೆಸ್ಕಾಂ ಇಲಾಖೆ ಅಧಿಕಾರಿಗಳು, ನಗರಸಭೆ ಉಪಾಧ್ಯಕ್ಷ ಸೈಯ್ಯದ್ ಸಾದಿಕ್, ನಗರಸಭೆ ಆಯುಕ್ತ ಎಂ.ಎಸ್.ಮಹದೇವ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸಾಗರ್, ಸಹಾಯಕ ಎಂಜಿನಿಯರ್ ಶ್ರೀದೇವಿ, ಪರಿಸರ ಎಂಜಿನಿಯರ್ ಧನಂಜಯ್ಯ, ನಗರಸಭೆ ಲೆಕ್ಕ ಅಧೀಕ್ಷಕ ಚಂದ್ರು, ನಗರಸಭಾ ಸದಸ್ಯರು, ನಗರಸಭಾ ಆಡಳಿತ ಶಾಖಾ ಸಿಬ್ಬಂದಿ ಅಧಿವೇಶನದಲ್ಲಿ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 05:ಕನಕಪುರ ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ ನಗರಸಭೆಯ 2025-26ನೇ ಸಾಲಿನ ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ಸೈಯ್ಯದ್ ಸಾದಿಕ್, ಆಯುಕ್ತ ಎಂ.ಎಸ್.ಮಹದೇವ ಮತ್ತಿತರರಿದ್ದರು.