ಕಡೂರುದಾಸಶ್ರೇಷ್ಠ ಕನಕದಾಸರು ಮತ್ತು ಕಡೂರು ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿ ಕನಕರಾಯಸ್ವಾಮಿ ದೇವಸ್ಥಾನದಲ್ಲಿ ನೆಲೆನಿಂತಿದ್ದಾರೆ. ಕಡೂರಿನಿಂದ ಅನತಿ ದೂರದಲ್ಲಿರುವ ಕನಕರಾಯನ ಗುಡ್ಡದಲ್ಲಿನ ಈ ದೇವಾಲಯ ಸುತ್ತ ಮುತ್ತಲಿನ ಗ್ರಾಮಗಳ ಜನರಿಗೆ, ಅದರಲ್ಲೂ ವಿಶೇಷವಾಗಿ ಹಾಲುಮತಸ್ಥ (ಕುರುಬ) ಸಮುದಾಯದವರಿಗೆ ಆರಾಧ್ಯ ದೈವ.

- ಹಾಲುಮತಸ್ಥ (ಕುರುಬ) ಸಮುದಾಯದವರಿಗೆ ಆರಾಧ್ಯ ದೈವಬಾಲು ಮಚ್ಚೇರಿ

ಕನ್ನಡಪ್ರಭ ವಾರ್ತೆ, ಕಡೂರುದಾಸಶ್ರೇಷ್ಠ ಕನಕದಾಸರು ಮತ್ತು ಕಡೂರು ನಡುವಿನ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿ ಕನಕರಾಯಸ್ವಾಮಿ ದೇವಸ್ಥಾನದಲ್ಲಿ ನೆಲೆನಿಂತಿದ್ದಾರೆ. ಕಡೂರಿನಿಂದ ಅನತಿ ದೂರದಲ್ಲಿರುವ ಕನಕರಾಯನ ಗುಡ್ಡದಲ್ಲಿನ ಈ ದೇವಾಲಯ ಸುತ್ತ ಮುತ್ತಲಿನ ಗ್ರಾಮಗಳ ಜನರಿಗೆ, ಅದರಲ್ಲೂ ವಿಶೇಷವಾಗಿ ಹಾಲುಮತಸ್ಥ (ಕುರುಬ) ಸಮುದಾಯದವರಿಗೆ ಆರಾಧ್ಯ ದೈವ.ಕಡೂರು ಸಮೀಪದ ಹಸಿರು ತೋಟಗಳ ನಡುವೆ ಕಲ್ಲು ಗುಡ್ಡದ ಮೇಲಿನ ಸಮತಟ್ಟಾದ ಪ್ರದೇಶದಲ್ಲಿ ಕನಕರಾಯಸ್ವಾಮಿ ದೇವಸ್ಥಾನವಿದೆ. ಕನಕದಾಸರ ಭಕ್ತಿಗೆ ಒಲಿದು ಶ್ರೀನಿವಾಸ ಸ್ವಾಮಿ ಇಲ್ಲಿ ನೆಲೆಸಿದ ಎಂಬುದು ಈ ಕ್ಷೇತ್ರದ ಹಿಂದಿನ ಐತಿಹ್ಯ.ದಾಸಶ್ರೇಷ್ಠ ಕನಕದಾಸರು ಬಾಡ ಗ್ರಾಮದಿಂದ ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದ ಅವರು ಒಂದು ದಿನ ಕತ್ತಲಾಗುವ ವೇಳೆಗೆ ಕಡೂರಿಗೆ ಆಗಮಿಸಿದ್ದರು. ಎಂದಿನಂತೆ ಸ್ನಾನ ಮುಗಿಸಿ ತಮ್ಮ ಆರಾಧ್ಯ ದೈವ ಕಾಗಿನೆಲೆ ಆದಿಕೇಶವನಿಗೆ ನೈವೇದ್ಯ ಸಮರ್ಪಿಸಲು ಮುಂದಾದರು. ಆದರೆ ಕಾಗಿನೆಲೆಯಿಂದ ದೂರವಿದ್ದ ಕಾರಣ ಆದಿಕೇಶವನಿಗೆ ನೈವೇದ್ಯ ಅರ್ಪಿಸುವುದು ಹೇಗೆ ಎಂಬ ಚಿಂತೆಯಾಯಿತು. ಆಗ ಭಕ್ತಿಯಿಂದ ಆದಿಕೇಶವನ ಧ್ಯಾನಿಸಿ ಪ್ರಾರ್ಥಿಸಿದರು. ಕನಕ ದಾಸರ ಭಕ್ತಿಗೆ ಮೆಚ್ಚಿದ ಆದಿಕೇಶವ ಅಲ್ಲಿನ ಬಂಡೆ ಮೇಲೆ ಶ್ರೀನಿವಾಸನ ರೂಪದಲ್ಲಿ ಒಡಮೂಡಿದನೆಂಬ ಪ್ರತೀತಿ. ಕನಕ ದಾಸರ ಕರೆಗೆ ಓಗೊಟ್ಟು ಬಂದ ಕಾರಣ ಈ ಶ್ರೀನಿವಾಸನಿಗೆ ಕನಕರಾಯ ಎಂಬ ಹೆಸರು ಬಂದಿದೆ. ಕನಕರು ಒಂದು ದಿನ ತಂಗಿದ್ದ ಸ್ಥಳ ಕನಕರಾಯನ ಗುಡ್ಡ ಎಂದೇ ಪ್ರಸಿದ್ಧಿ.ಕನಕರಾಯಸ್ವಾಮಿ ಇಲ್ಲಿನ ಭಕ್ತರಿಗೆ ಸಾಕ್ಷಾತ್ ತಿರುಮಲ ವೆಂಕಟೇಶ್ವರನೇ ಆಗಿದ್ದಾನೆ. ದೊಡ್ಡ ಕಲ್ಲುಬಂಡೆ ಮೇಲೆ 9 ಅಡಿ ಎತ್ತರದ ಮಂದಸ್ಮಿತ ಮೂರ್ತಿ, ಇದು ಸ್ವಯಂಭೂ ವಿಗ್ರಹ ಎಂಬ ನಂಬಿಕೆ. ಶಂಖ, ಚಕ್ರಧಾರಿ ಯಾದ ಶ್ರೀನಿವಾಸನ ಎದೆ ಮೇಲೆ ಶ್ರೀದೇವಿ ಮತ್ತು ಭೂದೇವಿಯರು ವಿರಾಜಮಾನರಾಗಿದ್ದು ಈ ವಿಗ್ರಹ ತಿರುಮಲೆಯ ಶ್ರೀನಿವಾಸನ ಪಡಿಯಚ್ಚು ಎಂದು ಹೇಳಲಾಗಿದೆ.ಹಿಂದೆ ಇಲ್ಲಿ ಸಣ್ಣ ಗರ್ಭಗುಡಿ ಮತ್ತು ಪ್ರಾಕಾರ ಮಾತ್ರವಿತ್ತು. ಹಳೆ ದೇವಸ್ಥಾನದ ನಿರ್ಮಾಣ ಶೈಲಿ ವಿಜಯನಗರ ಕಾಲದ ವಾಸ್ತುಶೈಲಿ ಹೋಲುತ್ತಿತ್ತು. ಶಿಲ್ಪಕಲೆಯ ಅಲಂಕಾರಗಳಿಲ್ಲದಿದ್ದರೂ ನಿರ್ಮಾಣದಲ್ಲಿ ಕರಾರುವಕ್ಕಾದ ವಾಸ್ತು ವಿನ್ಯಾಸವಿತ್ತು. ಕಳೆದ 3-4 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಸುತ್ತಮುತ್ತಲಿನ ರೈತರ ಸಹಕಾರದಿಂದ ಸುಂದರ ಶಿಲಾ ದೇಗುಲ ನಿರ್ಮಿಸಲಾಗಿದೆ. ನೂತನ ದೇವಸ್ಥಾನ ನಿರ್ಮಾಣದ ಬಳಿಕ ಉತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀಪಾದರು ಹಲವು ಬಾರಿ ಭೇಟಿ ನೀಡಿ ಕನಕರಾಯಸ್ವಾಮಿಗೆ ಅಭಿಷೇಕ ನೆರವೇರಿಸಿದ್ದಾರೆ. ಇದು ಅತ್ಯಂತ ಜಾಗೃತ ಸ್ಥಳವೆಂದು ಶ್ರೀಗಳು ಹೇಳಿರು ವುದು ಭಕ್ತರ ನಂಬಿಕೆ ಮತ್ತಷ್ಟು ಹೆಚ್ಚಿಸಿದೆ.ದೇವಸ್ಥಾನ ಸಮಿತಿಯಿಂದ ನಿರ್ವಹಣೆ ನಡೆಯುತ್ತಿದೆ. ಪ್ರತಿ ಶನಿವಾರ ವಿಶೇಷ ಅಭಿಷೇಕ ಮತ್ತು ಪ್ರಸಾದ ವ್ಯವಸ್ಥೆಇದೆ. ದೇವಸ್ಥಾನದ ಪುನರ್ನಿರ್ಮಾಣಕ್ಕೆ ಕೋಟೆ ಮಧುಸೂಧನಾಚಾರ್ಯರು ಮಾರ್ಗದರ್ಶನ ನೀಡಿದ್ದಾರೆ. ಎಲ್ಲರ ಸಹಕಾರದಿಂದ ದೇವಸ್ಥಾನ ನಿರ್ಮಾಣ ಸಾಧ್ಯವಾಗಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿ ಮುಖ್ಯಸ್ಥ ಘಂಟೆ ನಾಗರಾಜ್.ಕಡೂರು ಸಮೀಪದ ರಾ. ಹೆ. ಬೈಪಾಸ್ ರಸ್ತೆಯಲ್ಲಿ ಮಲ್ಲೇಶ್ವರದಿಂದ ಸುಮಾರು ಒಂದು ಕಿ.ಮೀ. ದೂರದ ಈ ದೇವಸ್ಥಾನ ಭಕ್ತರ ಗಮನ ಸೆಳೆಯುತ್ತಿದೆ. ಕನಕರಾಯಸ್ವಾಮಿ ದರ್ಶನಕ್ಕೆ ನಿತ್ಯವೂ ಭಕ್ತರು ಆಗಮಿಸುತ್ತಾರೆ.- ಫೋಟೋ * ಕನಕದಾಸರ ಕರೆಗೆ ಓಗೊಟ್ಟು ಬಂದ ಕನಕರಾಯಸ್ವಾಮಿ.* ಕಡೂರು ಸಮೀಪದ ಕನಕರಾಯಸ್ವಾಮಿ ದೇವಸ್ಥಾನ.