ಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ ಮೂಡಿಸಿದ ಕನಕರು

| Published : Nov 09 2025, 01:15 AM IST

ಸಾರಾಂಶ

ನವೆಂಬರ್ 28 ಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1700 ಕೋಟಿ ರೂಗಳಿಗೂ ಹೆಚ್ಚುಅನುದಾನದಲ್ಲಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಗಳಿಂದ ಶಿಲಾನ್ಯಾಸ ಮತ್ತು ಉಧ್ಘಾಟನೆ ಮಾಡಿಸಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉದ್ಪಾದಕರ ಒಕ್ಕೂಟದ ಹಾಲು ಮತ್ತು ಮೊಸರು ಪ್ಯಾಕಿಂಗ್ ಘಟಕ ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರ ಹೊರವಲಯದ ಮೆಗಾ ಡೇರಿ ಪಕ್ಕದಲ್ಲಿರುವ 9.5ಎಕರೆ ಜಮೀನನ್ನು ಚಿಮುಲ್ ಗೆ ಹಸ್ತಾಂತರಿಸಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಮಾಜದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧವಾಗಿ 500 ವರ್ಷಗಳ ಹಿಂದೆಯೇ ಕೀರ್ತನೆಗಳ ರಚನೆಯ ಮೂಲಕ ಜಾಗೃತಿ ಮೂಡಿಸಿದವರು ದಾಸ ಶ್ರೇಷ್ಠ ಶ್ರೀ ಕನಕದಾಸರು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕುರುಬರ ಸಂಘದ ವತಿಯಿಂದ ಶನಿವಾರ ನಗರದ ಬಿ.ಬಿ.ರಸ್ತೆಯ ಕನ್ನಡ ಭವನದಲ್ಲಿ ನಡೆದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾದ್ದರಿಂದ ಅವರಿಗೂ ಉಡುಪಿಯ ಶ್ರೀಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.

ಕನಕ ಭವನ ನಿರ್ಮಾಣ: ಭರವಸೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗಳಲ್ಲಿ ಆಗಬೇಕಾದ ಅಭಿವೃದ್ದಿ ಮಾಡುವುದಕ್ಕೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸ್ವತಂತ್ರ ನೀಡಿದ್ದರಿಂದಲೇ ಚಿಕ್ಕಬಳ್ಳಾಪುರ ನಗರದಲ್ಲಿನ ಕನ್ನಡ ಭವನ ಕಟ್ಟಡದ ಭವ್ಯವಾದ ಸಭಾಂಗಣದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು. ಈಗ ಮಹಾನ್ ನಾಯಕರ ಜಯಂತಿಗಳನ್ನು ನಡೆಸಲು ಭವ್ಯ ಭವನವಾಯಿತು. ಜಿಲ್ಲಾ ಕೇಂದ್ರದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸುತ್ತಿರುವ ಜೊತೆ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ರಾಜ್ಯದ ರೇಷ್ಮೇ ಬೆಳೆಗಾರರಿಗೆ ಅನುಕೂಲವಾಗುವಂತೆ ದೇಶದಲ್ಲಿಯೇ ಅತಿ ಹೆಚ್ಚು ರೇಷ್ಮೆ ಗೂಡು ವಹಿವಾಟು ನಡೆಯುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯನ್ನು 200 ಕೋಟಿ ವೆಚ್ಚದಲ್ಲಿ ಸುಮಾರು 12.36 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಕ್ರಮವಹಿಸಲಾಗಿದೆ ಎಂದರು.

28ರಂದು ಸಿಎಂರಿಂದ ಶಿಲಾನ್ಯಾಸ

ನವೆಂಬರ್ 28 ಕ್ಕೆ ಜಿಲ್ಲೆಯಲ್ಲಿ 1700 ಕೋಟಿ ರೂಗಳಿಗೂ ಹೆಚ್ಚುಅನುದಾನದಲ್ಲಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಗಳಿಂದ ಶಿಲಾನ್ಯಾಸ ಮತ್ತು ಉಧ್ಘಾಟನೆ ಮಾಡಿಸಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉದ್ಪಾದಕರ ಒಕ್ಕೂಟದ ಹಾಲು ಮತ್ತು ಮೊಸರು ಪ್ಯಾಕಿಂಗ್ ಘಟಕ ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರ ಹೊರವಲಯದ ಮೆಗಾ ಡೇರಿ ಪಕ್ಕದಲ್ಲಿರುವ 9.5ಎಕರೆ ಜಮೀನನ್ನು ಚಿಮುಲ್ ಗೆ ಹಸ್ತಾಂತರಿಸಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜನಾಂಗ ಶಿಕ್ಷಣಕ್ಕೆ ಒತ್ತು ನೀಡಲಿ

ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಸಮುದಾಯದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸಮಾಜದ ಹೆಸರು ಉನ್ನತವಾಗಿ ಬೆಳೆಯ ಬೇಕಾದರೆ ಸಮುದಾಯದ ಮಕ್ಕಳು ಸಾಧಕರಾಗಬೇಕು. ಇಂದು ಕ್ಷೇತ್ರದಲ್ಲಿ ಎಷ್ಟೋ ಕಡೆ ಪರಿಶಿಷ್ಟ ಪಂಗಡ ಮತ್ತು ವರ್ಗಕ್ಕೆ ಸೇರಿದವರನ್ನು ಬೇರೆಯವರು ಮನೆಗಳಿಗೆ ಸೇರಿಸುವುದಿಲ್ಲ. ಆದರೆ ನಾನು ಅದೇ ಪರಿಶಿಷ್ಟ ಪಂಗಡ ಮತ್ತು ವರ್ಗಕ್ಕೆ ಸೇರಿದವರ ಮನೆಗಳಿಗೆ ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇನೆ ಎಂದರು.

ಡಾ.ಎಂ.ಚಂದ್ರಶೇಖರ್ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಇದಕ್ಕೂ ಮುನ್ನ ಕನಕದಾಸರ ಪಲ್ಲಕ್ಕಿ ಮತ್ತು ಜಾನಪದ ಕಲಾತಂಡದ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಪಂ ಸಿಇಒ ವೈ.ನವೀನ್ ಭಟ್, ಅಪರ ಡಿಸಿ ಎನ್.ಭಾಸ್ಕರ್, ಎಸಿ ಡಿ.ಹೆಚ್.ಅಶ್ವಿನ್, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಯಲು.ಎನ್.ರಮೇಶ್, ತಹಸೀಲ್ದಾರ್ ರಷ್ಮೀ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿ ಕುಮಾರ್ ಮತ್ತಿತರರು ಇದ್ದರು.