ಕಂಡಂಗಾಲ ಹಾಕಿ: ಕೊಂಗಂಡ, ಅಪ್ಪಂಡೇರಂಡ ಫೈನಲ್‌ಗೆ

| Published : Dec 25 2024, 12:45 AM IST

ಸಾರಾಂಶ

ಕಂಡಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ಆಶ್ರಯದಲ್ಲಿ ಕಳೆದ 5 ದಿನಗಳಿಂದ ಇಲ್ಲಿನ ಮೈದಾನದಲ್ಲಿ ನಡೆಯುತ್ತಿರುವ ಪುರುಷರ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ರೋಚಕ ಸೆಮಿಫೈನಲ್ಸ್‌ನಲ್ಲಿ ಕೊಂಗಂಡ ಹಾಗೂ ಅಪ್ಪಂಡೇರಂಡ ತಂಡಗಳು ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿವೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕಂಡಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾ ಸಮಿತಿ ಆಶ್ರಯದಲ್ಲಿ ಕಳೆದ 5 ದಿನಗಳಿಂದ ಇಲ್ಲಿನ ಮೈದಾನದಲ್ಲಿ ನಡೆಯುತ್ತಿರುವ ಪುರುಷರ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ನಡೆದ ರೋಚಕ ಸೆಮಿಫೈನಲ್ಸ್‌ನಲ್ಲಿ ಕೊಂಗಂಡ ಹಾಗೂ ಅಪ್ಪಂಡೇರಂಡ ತಂಡಗಳು ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿವೆ.

ಮಂಗಳವಾರ ಬೆಳಗ್ಗೆ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕೊಂಗಂಡ ತಂಡವು ಕುಪ್ಪಂಡ ತಂಡದ ವಿರುದ್ಧ 2-1 ಅಂತರದಿಂದ ಗೆದ್ದು ಫೈನಲ್‌ಗೆ ಮುನ್ನಡೆಯಿತು. ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದರೂ, ಅಂತಿಮವಾಗಿ ಕೊಂಗಂಡ ತಂಡ ಗೆಲವಿನ ನಗೆ ಬೀರಿತು.

ಕೊಂಗಂಡ ಪರ 29ನೇ ನಿಮಿಷದಲ್ಲಿ ನಾಚಪ್ಪ ಆಕರ್ಷಕ ಫೀಲ್ಡ್ ಗೋಲು ಮೂಲಕ 1-0 ಮುನ್ನಡೆ ಒದಗಿಸಿದರು. 45ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಮಾಚಯ್ಯ ಎರಡನೇ ಗೋಲು ಗಳಿಸಿದರು.

ಪಂದ್ಯಾಟ ಆರಂಭದಲ್ಲಿಯೇ 10ನೇ ನಿಮಿಷದಲ್ಲಿ ಕುಪ್ಪಂಡ ತಂಡದ ಅತಿಥಿ ಆಟಗಾರ ಸೆಲ್ವರಾಜ್ ಆಕರ್ಷಕ ಫೀಲ್ಡ್ ಗೋಲ್ ಬಾರಿಸಿ ಉತ್ಸಾಹ ಮೂಡಿಸಿದರು. ಕೊಂಗಂಡ ತಂಡದ ರಕ್ಷಣಾತ್ಮಕ ಆಟದ ಎದುರು ಕುಪ್ಪಂಡ ತಂಡ ಮಂಕಾದಂತೆ ಕಂಡುಬಂತು. ಕುಪ್ಪಂಡ ತಂಡಕ್ಕೆ ಒಟ್ಟು 11 ಪೆನಾಲ್ಟಿ ಕಾರ್ನರ್ ದೊರೆತರೂ, ಯಾವುದೇ ಗೋಲಾಗುವ ಅದೃಷ್ಟ ಇರಲಿಲ್ಲ. ಅಂತಿಮವಾಗಿ ಕೊಂಗಂಡ ತಂಡ 2-1 ಗೋಲು ಗೆಲವಿನೊಂದಿಗೆ ಫೈನಲ್ ಪ್ರವೇಶ ಪಡೆಯಿತು.

ಅಪರಾಹ್ನ ಜರುಗಿದ ದ್ವಿತೀಯ ಸೆಮಿಫೈನಲ್‌ನಲ್ಲಿ ಅಪ್ಪಂಡೇರಂಡ ತಂಡ 2-1 ಗೋಲುಗಳ ಅಂತರದಿಂದ ಫೈನಲ್‌ಗೆ ಅರ್ಹತೆ ಪಡೆಯಿತು. ಅಪ್ಪಂಡೇರಂಡ ತಂಡದ ಪರ ಪೆನಾಲ್ಟಿ ಕಾರ್ನರ್‌ನಲ್ಲಿ 35ನೇ ನಿಮಿಷ ಲಿಖಿತ್ ಮೊದಲ ಗೋಲು ಗಳಿಸಿದರು. ನಂತರ ಕೇವಲ 2 ನಿಮಿಷದ ಅವಧಿಯಲ್ಲಿ 37ನೇ ನಿಮಿಷ ಮಾಚಯ್ಯ ಆಕರ್ಷಕ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ 2-0 ಮುನ್ನಡೆ ಒದಗಿಸಿದರು. ಪಂದ್ಯಾಟದ ಕೊನೆಯ ನಿಮಿಷದಲ್ಲಿ (59ನೇ ನಿಮಿಷ) ಮೂಕಚಂಡ ತಂಡದ ಹರ್ಪಾಲ್ ಗೋಲುಗಳಿಸಿ ಗೆಲವಿನ ಅಂತರ ತಗ್ಗಿಸಿದರು.

ಬುಧವಾರ ಬೆಳಗ್ಗೆ 9.30ಕ್ಕೆ ಕುಪ್ಪಂಡ ಹಾಗೂ ಮೂಕಚಂಡ ತಂಡಗಳ ನಡುವೆ 3ನೇ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.

ವಿಜೇತ ತಂಡವು ರು.50 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡ ರು.30 ಸಾವಿರ ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆದ ತಂಡ ರು.10 ಸಾವಿರ ನಗದು/ ಟ್ರೋಫಿ ಮತ್ತು 4 ನೇ ಸ್ಥಾನ ಪಡೆದ ತಂಡ ರು.5 ಸಾವಿರ ನಗದು ಗೆಲ್ಲಲಿದೆ.

ಹಗ್ಗಜಗ್ಗಾಟ ಪಂದ್ಯ:

ಬುಧವಾರ ಪೂರ್ವಾಹ್ನ 10.30ಕ್ಕೆ ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದ್ದು ಅಪರಾಹ್ನ 2.30 ಕ್ಕೆ ಹಾಕಿ ಫೈನಲ್ ಪಂದ್ಯಾಟ ನಡೆಯಲಿದೆ.

ಮಧ್ಯಾಹ್ನ ಎಲ್ಲ ಕ್ರೀಡಾಭಿಮಾನಿಗಳಿಗೂ ಬೋಜನ ವ್ಯವಸ್ಥೆ ಇರುವುದಾಗಿ ಅಧ್ಯಕ್ಷ ಬಲ್ಲಡಿಚಂಡ ಯು. ರವಿ ಸೋಮಯ್ಯ ಹಾಗೂ ಉಪಾಧ್ಯಕ್ಷೆ ಮೂಕಚಂಡ ಜಾಲಿ ಕಾವೇರಮ್ಮ ತಿಳಿಸಿದ್ದಾರೆ.

ಕ್ರೀಡೋತ್ಸವದ ವೀಕ್ಷಕ ವಿವರಣೆಯನ್ನು ಮಾಳೇಟಿರ ಶ್ರೀನಿವಾಸ್ ಹಾಗೂ ನಿರೂಪಣೆಯನ್ನು ಮುಧೋಶ್ ಪೂವಯ್ಯ ನಿರ್ವಹಿಸಿದರು.