ಕಾಂಡ್ಲಾ ಸಾಗರಜೀವ ವೈವಿಧ್ಯತೆಯ ಪ್ರಮುಖ ಭಾಗವಾಗಿದ್ದು, ಸಾಗರ ತೀರಗಳ ರಕ್ಷಾ ಕವಚ ಇದ್ದಂತೆ. ಕಾಂಡ್ಲಾ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ

ಕನ್ನಡಪ್ರಭ ವಾರ್ತೆ ಕುಮಟಾ

ಕಾಂಡ್ಲಾ ಸಾಗರಜೀವ ವೈವಿಧ್ಯತೆಯ ಪ್ರಮುಖ ಭಾಗವಾಗಿದ್ದು, ಸಾಗರ ತೀರಗಳ ರಕ್ಷಾ ಕವಚ ಇದ್ದಂತೆ. ಕಾಂಡ್ಲಾ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಲಿ ಎಂದು ಎಸಿಎಫ್ ಕೃಷ್ಣೇಗೌಡ ಹೇಳಿದರು.

ತಾಲೂಕಿನ ಕಿಮಾನಿಯಲ್ಲಿ ಅಘನಾಶಿನಿ ನದಿ ತೀರದಲ್ಲಿ ಆಸ್ಟರ್ ಡಿ.ಎಂ. ಫೌಂಡೇಶನ್‌ನ ಆಸ್ಟರ್ ವಾಲೆಂಟೀರ್ಸ್‌, ಸ್ಕೊಡ್‌ವೆಸ್ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೩ ದಿನಗಳ ಕಾಂಡ್ಲಾ ಸಂರಕ್ಷಣಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಕಾಂಡ್ಲಾ ವನಗಳು ಅತೀ ಹೆಚ್ಚು ಆಮ್ಲಜನಕ ಉತ್ಪಾದಿಸುವ ಸಸ್ಯ ಪ್ರಬೇಧಗಳಾಗಿರುವುದಿಂದ ಈ ಪ್ರದೇಶದಲ್ಲಿ ವಿಶಿಷ್ಟ ರೀತಿಯ ಜೀವ ವೈವಿಧ್ಯ ಸರಪಳಿಗಳು ಸಹಜವಾಗಿಯೇ ರೂಪುಗೊಳ್ಳುತ್ತವೆ. ಅಲ್ಲದೇ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸುಮಾರು ಶೇ.೬೫ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅನಾಹುತಗಳನ್ನು ತಡೆಯುವುದರಿಂದ ಕಾಂಡ್ಲಾ ಸಂರಕ್ಷಣೆಯ ಜವಾಬ್ದಾರಿ ಸಾರ್ವತ್ರಿಕಗೊಳ್ಳಬೇಕು ಎಂದರು.

ಮುಖ್ಯಅತಿಥಿ ಆಸ್ಟರ್ ಡಿ.ಎಂ. ಫೌಂಡೇಶನ್‌ನ ಸಿ.ಎಸ್.ಆರ್. ಮುಖ್ಯಸ್ಥ ರೋಹನ್ ಪ್ರಾಂಕೋ ಮಾತನಾಡಿ, ಭಾರತದ ಪಶ್ಚಿಮ ಸಾಗರತೀರ ಪ್ರದೇಶಗಳ ಸಂರಕ್ಷಣೆಯಲ್ಲಿ ಕಾಂಡ್ಲಾ ನೆಡುತೋಪುಗಳು ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಅವುಗಳನ್ನು ಸಂರಕ್ಷಿಸುವ ಅವಶ್ಯಕತೆಯಿದೆ. ಈ ಹಿನ್ನೆಲೆ ಕರ್ನಾಟಕದ ಕರಾವಳಿ ತೀರಗಳಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಕಾಂಡ್ಲಾ ಸಂರಕ್ಷಣಾ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.

ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನಿಂದ ೩ ದಿನ ನಡೆಯುವ ಕಾಂಡ್ಲಾ ಸಂರಕ್ಷಣಾ ಅಭಿಯಾನದಲ್ಲಿ ೫ ಸಾವಿರಕ್ಕೂ ಹೆಚ್ಚು ಕಾಂಡ್ಲಾ ಸಸಿಗಳನ್ನು ನೆಡುವ ಉದ್ದೇಶ ಹೊಂದಲಾಗಿದ್ದು, ಈಗಾಗಲೇ ನೆಡುತೋಪು ಕಾರ್ಯ ಆರಂಭಗೊಂಡಿದೆ ಎಂದರು. ಸ್ಕೊಡ್‌ವೆಸ್‌ನ ಕೃಷಿ ವಿಭಾಗದ ಮುಖ್ಯಸ್ಥ ಪ್ರಶಾಂತ ನಾಯಕ ವಂದಿಸಿದರು. ಸಂಯೋಜಕ ಗಂಗಾಧರ ನಾಯ್ಕ ನಿರ್ವಹಿಸಿದರು. ಆರ್‌ಎಫ್‌ಒ ರಾಜು ನಾಯ್ಕ, ಆಸ್ಟರ್‌ ಡಿ.ಎಂ. ಫೌಂಡೇಶನ್‌ನ ಸ್ವಯಂ ಸೇವಕರು, ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿ ಇದ್ದರು.