ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ, ಬಾಗಲಕೋಟೆ ಜಿಲ್ಲಾ ಪ್ರವೇಶ ನಿರ್ಭಂಧ ಹೇರಿರುವುದು ಖಂಡನೀಯ. ಕೂಡಲೇ ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ ಜಿಲ್ಲಾಧಿಕಾರಿಗಳು ನೀಡಿರುವ ಆದೇಶವನ್ನು ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೂಡಲೇ ನಿರ್ದೇಶನ ನೀಡುವಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಕ್ರಾಂತಿವೀರ ಬ್ರಿಗೇಡ್ ನೇತೃತ್ವದಲ್ಲಿ ಶುಕ್ರವಾರ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಈಶ್ವರಪ್ಪ, ಶ್ರೀಗಳ ನಿರ್ಬಂಧ ಆದೇಶವನ್ನು ವಾಪಸ್ ಪಡೆಯುವಂತೆ ಮನವಿಯಲ್ಲಿ ಒತ್ತಾಯಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ಹೇರಿ ಸ್ವಾಮಿಗಳು ನಮ್ಮೆಲ್ಲರಿಗೂ ದೇವರ ಸ್ವರೂಪ. ದೇವರು ಮಾಡದ ಹಾಗೂ ಸರ್ಕಾರ ಮಾಡದ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಸಾವಯವ ಕೃಷಿ, ಶೈಕ್ಷಣಿಕ ಸೇವೆ, ಸಾಮಾಜಿಕ ಸೇವೆ, ಆರೋಗ್ಯ ಸೇವೆ ಸೇರಿದಂತೆ ಅನೇಕ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದಾರೆ. ಅಂತಹ ಶ್ರೀಗಳಿಗೆ ರಾಜ್ಯ ಸರ್ಕಾರ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಬರದಂತೆ ನಿರ್ಬಂಧ ಹಾಕಿದ್ದು ಕೋಟಿ ಕೋಟಿ ಹಿಂದೂಗಳಿಗೆ ನೋವಾಗಿದೆ. ತಕ್ಷಣ ನಿರ್ಬಂಧ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ನಿರ್ಬಂಧದ ಕುರಿತು ಶ್ರೀಗಳು ಒಂದು ಕರೆ ಕೊಟ್ಟರೆ ರಾಜ್ಯದಲ್ಲಿ ದಂಗೆ ಏಳುತ್ತದೆ. ಯಾರ ಮುಲಾಜಿಗೂ ಒಳಗಾಗದೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಸನ್ಯಾಸಿ ಅವರು. ಆದರೆ ಹಿಂದೂ ಸಮಾಜದಲ್ಲಿ ಗುಂಪುಗಾರಿಕೆ ಆಗಲು ಕಾರಣವೇ ಈ ರಾಜ್ಯ ಕಾಂಗ್ರೆಸ್ ಸರ್ಕಾರ. ಹಿಂದೂ ಸಮಾಜವನ್ನು ತುಂಡು ಮಾಡುವುದರಲ್ಲಿ ಮೊದಲನೇ ಅಗ್ರ ಸ್ಥಾನದಲ್ಲಿರುವುದೇ ಸಚಿವ ಎಂ.ಬಿ.ಪಾಟೀಲ. ರಾಜ್ಯ ಸರ್ಕಾರಕ್ಕೆ ಯಾಕೆ ದುರ್ಬುದ್ಧಿ ಬಂತೋ ಗೊತ್ತಿಲ್ಲ. ಶ್ರೀಗಳಿಗೆ ನಿರ್ಬಂಧ ಹಾಕಿದ್ದರಿಂದಲೇ ರಾಜ್ಯ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಇದೇ ರೀತಿ ಮುಂದುವರೆದರೆ ರಾಜ್ಯ ಸರ್ಕಾರ ಅಂತಿಮ ಕ್ಷಣವನ್ನು ಎಣಿಸುತ್ತದೆ ಎಂದು ಭವಿಷ್ಯ ನುಡಿದರು. ಸರ್ಕಾರದ ನಡೆಯಿಂದಾಗಿ ಈ ಸರ್ಕಾರ ಬಹಳ ದಿನಗಳ ಕಾಲ ಉಳಿಯಲ್ಲ. ರಾಷ್ಟ್ರಪತಿ ಆಡಳಿತ ಬರುತ್ತೋ ಅಥವಾ ಚುನಾವಣೆಯೇ ಎದುರಾಗಬಹುದು ಎಂದು ಅಭಿಪ್ರಾಯಪಟ್ಟರು.
ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಆರ್‌ಎಸ್‌ಎಸ್‌ನಲ್ಲಿ ಎಲ್ಲಾದರೂ ದೇಶಪ್ರೇಮ ಬಿಟ್ಟು ಸ್ವಾರ್ಥಿಗಳಾಗಿ ಎಂದು ಹೇಳಿದ್ದಾರಾ? ಸರ್ಕಾರ ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಅದರ ಬಗ್ಗೆ ಏಕೆ ಸಿಟ್ಟು ಗೊತ್ತಿಲ್ಲ. ಸರ್ಕಾರಿ ನೌಕರರು ಆರ್‌ಎಸ್‌ಎಸ್ ಹೋಗಬಾರದು ಎಂದು ಪ್ರಿಯಾಂಕ ಖರ್ಗೆ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ಇಂದು ನಾವೆಲ್ಲ ಮುಲ್ಲಾಗಳಾಗುತ್ತಿದ್ದೆವು. ಮೋದಿ ಪ್ರಧಾನಿ ಆಗುವವರೆಗೂ ಭಾರತಕ್ಕೆ ಅನ್ಯ ರಾಷ್ಟ್ರಗಳು ಸಪೋರ್ಟ್ ಮಾಡುತ್ತಿರಲಿಲ್ಲ. ಈಗ ನಮ್ಮ ದೇಶಕ್ಕೆ ಸಪೋರ್ಟ್ ಮಾಡುತ್ತಿವೆ ಎಂದು ತಿಳಿಸಿದರು.ಈ ವೇಳೆ ಕ್ರಾಂತಿವೀರ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ಕಾರ್ಯಾಧ್ಯಕ್ಷ ಕೆ.ಇ.ಕಾಂತೇಶ, ವೀರಣ್ಣ ಹಳೆಗೌಡರ, ರಾಹುಲ ಔರಂಗಾಬಾದ, ಕಾಶಿನಾಥ ಚನವೀರ, ರಾಜು ಬಿರಾದಾರ ಮುಂತಾದವರು ಹಾಜರಿದ್ದರು.
--------------ಕೋಟ್
ಕಾಂಗ್ರೆಸ್ ಪಕ್ಷಕ್ಕೆ ಹೇಳೋರು ಕೇಳೋರು ಯಾರು ಇಲ್ಲ, ಅದು ಅಪ್ಪ-ಅಮ್ಮ ಇಲ್ಲದ ಪಕ್ಷ. ಪಕ್ಷದ ಕುರಿತು ಯಾರಾದರೂ ಮಾತನಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಸಿಎಂ ಹಾಗೂ ಅವರ ಮಗನೇ ಮಾತನಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲು ಡಿಕೆಶಿಗೆ ತಾಕತ್ತಿಲ್ಲವಾ? ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರಗೆ ಸಿಎಂ ಮಾಡಲು ಬಿಡುವುದಿಲ್ಲ. ಹಾಗಂತ ಡಿಕೆಶಿಯೂ ಸುಮ್ಮನೆ ಕೂಡುವ ಹುಳ ಅಲ್ಲ.- ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
;Resize=(128,128))
;Resize=(128,128))
;Resize=(128,128))
;Resize=(128,128))