ಸಾರಾಂಶ
ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಸುದ್ದಿಗಾರರೊಂದಿಗೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ಕಾರ ಪರಿಶಿಷ್ಟ ಜಾತಿ, ಪಂಗಡಗಳಿಗೆ ವಿನಿಯೋಗಿಸಬೇಕಾದ ಅನುದಾನವನ್ನು ಗ್ಯಾರಂಟಿಗಳಿಗೆ ವಿನಿಯೋಗಿಸುತ್ತಿರುವುದು ತಾವೆ ಮಾಡಿದ ಕಾನೂನನ್ನು ಉಲ್ಲಂಘನೆ ಮಾಡುತ್ತಿದೆ, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜನಾಂದೋಲನ ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಶೇ.೨೪- ೫೦ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವ ಕಾನೂನು ಜಾರಿಗೊಳಿಸಿದ್ದೆ ಕಾಂಗ್ರೆಸ್ ಸರ್ಕಾರ ಎಂದು ಪದೇ ಪದೆ ಹೇಳುತ್ತಾರೆ. ಆದರೆ ಇದೇ ಕಾಯ್ದೆಯಲ್ಲಿದ್ದ ಅನ್ಯ ಉದ್ದೇಶಕ್ಕೆ ಬಳಸಬಾರದೆಂಬ ೭ಡಿ ಉಪ ಬಂಧವನ್ನು ತೆಗೆದುಹಾಕಿ, ಅನುದಾನವನ್ನು ಅನ್ಯ ಉದ್ದೇಶ ಅದರಲ್ಲೂ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದು ಶೋಷಿತ ವರ್ಗಕ್ಕೆ ಮಾಡಿದ ದ್ರೋಹ ಎಂದರು.ಪರಿಶಿಷ್ಟ ಜಾತಿ, ಪಂಗಡಗಳಿಗೆ ವಿನಿಯೋಗಿಸಬೇಕಾದ ಅನುದಾನ ಬೇರೆಡೆ ತಿರುಗಿಸುವುದು ದುರ್ಬಳಕೆಯೇ ಸರಿ. 2 ವರ್ಷಗಳಲ್ಲಿ ಒಟ್ಟು ೨೫ ಸಾವಿರ ಕೋಟಿ ರು. ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸಿ ಶೋಷಿತ ಸಮುದಾಯಗಳಿಗೆ ವಂಚಿಸಿದೆ. ಈಗ ಬರುವ ಬಜೆಟ್‌ನಲ್ಲೂ ೧೫ ಸಾವಿರ ಕೋಟಿ ಹಣ ಬಳಕೆಗೆ ತಂತ್ರ ರೂಪಿಸಿದ್ದು, ಒಟ್ಟು ೪೦ ಸಾವಿರ ಕೋಟಿ ಟಿಎಸ್‌ಪಿ, ಎಸ್‌ಸಿಇಪಿ ಹಣ ದುರ್ಬಳಕೆಗೆ ಸರ್ಕಾರ ಮುಂದಾಗಿದ್ದು, ಇದರ ವಿರುದ್ಧ ಬಿಜೆಪಿ ಅಧಿವೇಶನದ ಒಳಗೆ ಹಾಗೂ ಹೊರಗೂ ದೊಡ್ಡ ಮಟ್ಟದ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.ಹಿಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಸದನ ಒಳ-ಹೊರಗೆ ಹೋರಾಟ ಮಾಡಿದರೂ ೨೫ ಸಾವಿರ ಕೋಟಿ ರು. ಗ್ಯಾರಂಟಿಗಳಿಗೆ ವಿನಿಯೋಗಿಸಿ, ಕಾಯ್ದೆಯ ೭ಸಿ ಸೆಕ್ಷನ್ ಪ್ರಕಾರ ಗ್ಯಾರಂಟಿಗಳಡಿ ಅದೇ ಸಮುದಾಯಗಳಿಗೆ ನಿಯೋಗಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದೆ. ಇದೊಂದು ಆರ್ಥಿಕ ದಿವಾಳಿ ಸರ್ಕಾರ ಎಂದರು.ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಇಲ್ಲ. ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತದೆ. ಆದರೆ ಎಸ್ಸಿ, ಎಸ್ಟಿ ಮಂದಿಗೆ ದಲಿತರ ಮೀಸಲು ನಿಧಿಗೆ ಕನ್ನ ಹಾಕುತ್ತಿದೆ ಎಂದು ಆರೋಪಿಸಿದರು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಬಲೀಕರಣ ಶಿಕ್ಷಣ, ಉದ್ಯೋಗ, ಸ್ಥಾವಲಂಬನೆ ಮೂಲಕ ಪ್ರತಿ ವ್ಯಕ್ತಿ, ಕುಟುಂಬವನ್ನು ಸಶಕ್ತಗೊಳಿಸುವುದು ದಲಿತ ಕೇರಿ, ಕಾಲೋನಿಗಳಿಗೆ ಆದಿವಾಸಿ ಹಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು. ಭೂ ಒಡೆತನ, ಭೂಮಿಗೆ ನೀರು, ಸ್ವಉದ್ಯೋಗ, ಸ್ವಂತ ವಾಹನ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿ ಶಾಲೆ, ಹಾಸ್ಟೆಲ್ ನಿರ್ಮಾಣ ಮಾಡುವುದು ಈ ವಿಶೇಷ ಅನುದಾನದ ಉದ್ದೇಶ, ಆದರೆ ಈಗ ಗ್ಯಾರಂಟಿಗಳಿಗೆ ಈ ಹಣದ ಬಳಕೆಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ವಿದ್ಯಾರ್ಥಿ ವೇತನ, ಗಂಗಾ ಕಲ್ಯಾಣಕ್ಕೆ ಅನುದಾನ, ಸಮುದಾಯಗಳಿಗೆ ಹಣ ನೀಡಲು ಆಗದೇ ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡುತ್ತಿದೆ ಎಂದರು.ಗ್ಯಾರಂಟಿಗಳನ್ನು ಕೊಡಬೇಡಿ ಎಂದು ನಾವು ಹೇಳುವುದಿಲ್ಲ, ಅದಕ್ಕಾಗಿ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಮೀಸಲಿಸಿರಿಸಿ. ಅದು ಬಿಟ್ಟು ಪರಿಶಿಷ್ಟ ಜಾತಿ, ಪಂಗಡಗಳಿಗೆ ವಿನಿಯೋಗಿಸಬೇಕಾದ ಹಣವನ್ನು ಉಪಯೋಗಿಸುತ್ತಿರುವುದು ಸರ್ಕಾರದ ಆರ್ಥಿಕ ದಿವಾಳಿತನವನ್ನು ತೋರಿಸುತ್ತದೆ ಎಂದರು.ಈಗಾಗಲೇ ರಾಜ್ಯಾದ್ಯಂತ ಪಕ್ಷದಿಂದ ೧೪ ತಂಡಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲು ಜನಾಂದೋಲನ ನಡೆಸಲಾಗುತ್ತಿದೆ ಎಂದರು. ಸರ್ಕಾರದ ಖಜಾನೆ ಖಾಲಿಯಾಗಿದ್ದು ಆರ್ಥಿಕ ದಿವಾಳಿಯಾಗಿದೆ. ಇದರಿಂದಾಗಿ ಸರ್ಕಾರವು ತೆರಿಗೆ ಹೆಚ್ಚಳ, ಕರೆಂಟ್ ಬಿಲ್, ಸಬ್ ರಿಜಿಸ್ಟ್ರಾರ್ ಶುಲ್ಕ ಹೆಚ್ಚಳ ಮಾಡಿದ್ದು ಅಭಿವೃದ್ಧಿ ಕೆಲಸಗಳಿಗೆ ತೊಡಕಾಗಿದೆ. ಗ್ಯಾರಂಟಿ ಯೋಜನೆ ರಾಜಕೀಯ ನಿರ್ಧಾರವಾಗಿದೆ. ಮುಂದಿನ ದಿನಗಳಲ್ಲಿ ಎಸ್ಸಿ, ಎಸ್ಟಿ ಜನಾಂಗದ ಹಣವನ್ನು ಒಂದು ರು. ಕೂಡ ಮುಟ್ಟಬಾರದು ಎಂದು ಎಚ್ಚರಿಸಿದರು,ಪತ್ರಿಕಾಗೋಷ್ಠಿಯಲ್ಲಿ ಚಂದ್ರು ಲಮಾಣಿ, ನರೇಂದ್ರ, ರೇವಣ್ಣ, ಚಿದಾನಂದ್, ಶೀನಿವಾಸ್, ಕರಿಯಪ್ಪ, ಜಿಲ್ಲಾಧ್ಯಕ್ಷ ನಿರಂಜನಕುಮಾರ್, ಎಸ್. ಬಾಲರಾಜು, ಎಂ. ರಾಮಚಂದ್ರ ಇತರರು ಇದ್ದರು.