ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಆಯ್ದ ರಸ್ತೆಗಳಲ್ಲಿ ಇರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಬಳಕೆ ಮಾಡುವ ಬಗ್ಗೆ ಅಭಿಯಾನ ನಡೆಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮೈಸೂರು ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಸಮಿತಿಗೆ ಆಯ್ಕೆ ಮಾಡಿರುವ ಸದಸ್ಯರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ನಮ್ಮ ಮಾತೃ ಭಾಷೆ, ಕನ್ನಡ ಭಾಷೆಯನ್ನು ಗೌರವಿಸಿ ಹೆಚ್ಚು ಬಳಕೆ ಮಾಡುವುದನ್ನು ನಾಡಿನ ಜನತೆಯಾದ ನಾವು ಬೆಳಸಿಕೊಳ್ಳಬೇಕು ಎಂದರು.ಕನ್ನಡ ಭಾಷೆಯ ಬಳಕೆಯನ್ನು‌ ಜನರಲ್ಲಿ ಹೆಚ್ಚು ‌ಮಾಡಲು ಕನ್ನಡಕ್ಕಾಗಿ ಓಟ ಸೇರಿದಂತೆ ‌ವಿವಿಧ ಕಾರ್ಯಕ್ರಮಗಳನ್ನು‌ ಕನ್ನಡ ‌ಜಾಗೃತಿ ‌ಸಮಿತಿ ‌ಸದಸ್ಯರೊಂದಿಗೆ ಸಂಘಟಿಸಿ ಆಯೋಜಿಸಿ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯಲ್ಲಿ ಬಹಳಷ್ಟು ಇಲಾಖೆಯವರು ಗೈರು ಹಾಜರಾಗಿದ್ದು, ಮುಂದಿನ ಸಭೆಗೆ ಗೈರು ಹಾಜರಾದಲ್ಲಿ ನೋಟೀಸ್ ಜಾರಿ ಮಾಡುವುದಾಗಿ ಅವರು ಎಚ್ಚರಿಸಿದರು.ಕನ್ನಡ ಅಭಿವೃದ್ಧಿ ಪ್ರಧಿಕಾರದ ನಾಮನಿರ್ದೇಶಿತ ಸದಸ್ಯ ಟಿ. ಗುರುರಾಜ್ ಮಾತನಾಡಿ, ಸಂಚಾರ ನಿಯಮಗಳ ಫಲಕಗಳಲ್ಲಿ ಒಂದು ಬದಿಯಲ್ಲಿ ಆದರೂ ಕನ್ನಡ ಭಾಷೆ ಬಳಸಬೇಕು. ಪೆಟ್ರೋಲ್ ಬಂಕ್ ಹಾಗೂ ಇತರೆ ಸ್ಥಳಗಳಲ್ಲಿ ಐ ಲವ್ ಮೈಸೂರು ಎಂಬ ಇಂಗ್ಲಿಷ್ ಪದದ ಬದಲು ನನ್ನ ಮೈಸೂರು ಎಂಬ ಕನ್ನಡ ಪದ ಉಪಯೋಗಿಸುವುದು ಉತ್ತಮ. ಕೆಲವು ಖಾಸಗಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ‌ ನೇಮಕವೇ ಮಾಡಿಕೊಂಡಲ್ಲಿ ಹಾಗೂ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ದಂಡ ವಿಧಿಸುವ ಕ್ರಮವಿದೆ ಇವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕಡಕೊಳ ಕುಮಾರಸ್ವಾಮಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕನ್ನಡಪರ‌ ಹೋರಾಟಗಾರರು ಹೋರಾಟಕ್ಕೆ ಅನುಮತಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅವರನ್ನು ಗೌರವಯುತವಾಗಿ ಕಾಣಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಚನಾ ಫಲಕಗಳು ಹಾಗೂ ಜಾಹೀರಾತು ಫಲಕಗಳಲ್ಲಿ ಹೆಚ್ಚಿನ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು. ಡಿಟಿಪಿ ಆಪರೇಟರ್ ಗಳಿಗೆ ಕನ್ನಡ ಭಾಷಾ ಜ್ಞಾನದ ತರಬೇತಿ ನೀಡಬೇಕು ಎಂದು ಹೇಳಿದರು.ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಜಿ. ಮೋಹನ್ ಮಾತನಾಡಿ, ಅಂಗಡಿ ಮುಂಗುಟ್ಟು, ಶಿಕ್ಷಣ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡದಲ್ಲಿರಬೇಕು. ಆದರೆ ಇನ್ನೂ ಬಹಳಷ್ಟು ಕಡೆ ಈ ನಿಯಮ ಪಾಲಿಸುತ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಹೋರಾಟ ನಡೆಸುವುದಾಗಿ ತಿಳಿಸಿದರು.ನಗರ ಪಾಲಿಕೆ ವ್ಯಾಪ್ತಿಯ ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಕೆ.ಆರ್. ಗೋಪಾಲಕೃಷ್ಣ ಮಾತನಾಡಿ, ಬ್ಯಾಂಕ್ ಗಳಲ್ಲಿ ಚಲನ್ ಗಳು ಸೇರಿದಂತೆ ಇತರೆ ನಮೂನೆಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿ ಕನ್ನಡ ಭಾಷೆಯ ಬಳಕೆಯಾಗಬೇಕು. ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡದ ಬಳಕೆಗೆ ಆದ್ಯತೆ ನೀಡಬೇಕು ಎಂದರು.ಕನ್ನಡ ಜಿಲ್ಲಾ ಜಾಗೃತಿ ‌ಸಮಿತಿ ‌ಸದಸ್ಯರು ‌ಚರ್ಚಿಸಿರುವ ವಿಷಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆಯಾ ಇಲಾಖೆಗೆ ಪತ್ರ ಬರೆಯುವಂತೆ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದರು.ನಗರ ಪಾಲಿಕೆ ಉಪ ಆಯುಕ್ತ ದಾಸೇಗೌಡ, ಕನ್ನಡ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಡಾ. ವಿನೋದಮ್ಮ, ರವಿಪ್ರಸಾದ್, ಕುಮಾರ್, ಡಾ.ಬಿ.ಎಸ್. ದಿನಮಣಿ, ನಾ. ದಿವಾಕರ, ಪರಮೇಶ್, ಮೋಹನ್ ಕುಮಾರ್ ಗೌಡ, ಎಂ.ಪಿ. ಮಂಜಪ್ಪ ಶೆಟ್ಟಿ ಮಸಗಲಿ ಮೊದಲಾದವರು ಇದ್ದರು.