ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಕನ್ನಡ ಜಾಗೃತಿ ಯಾತ್ರೆ!

| Published : Dec 29 2023, 01:30 AM IST

ಸಾರಾಂಶ

ಡಿ. 27ರಂದು ಕಲಬುರಗಿಯಿಂದ ಹೊರಟ ಈ ಬೈಕ್‌ ಸಾಹಸಿ 860 ಕಿಮೀ ಯಾತ್ರೆಯನ್ನು ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಪೂರೈಸುತ್ತಿದ್ದಾರೆ. ಇಲಕಲ್‌ನ ಈ ಸಾಹಸಿ ಈಗ ಕನ್ನಡಿಗರ ಮನವನ್ನು ಗೆಲ್ಲುತ್ತಿದ್ದಾರೆ.

ಕೃಷ್ಣ ಎನ್‌. ಲಮಾಣಿಹೊಸಪೇಟೆ: ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಈರಣ್ಣ ಜಿ. ಕುಂದರಗಿಮಠ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಕಲಬುರಗಿ ಜಿಲ್ಲಾಡಳಿತ ಭವನದಿಂದ ಬೆಂಗಳೂರಿನ ವಿಧಾನಸೌಧದವರೆಗೆ ವಿಶೇಷ ಬೈಕ್‌ ಸಾಹಸ ಕ್ರೀಡೆ ಮೂಲಕ ಕನ್ನಡ ನಾಡು, ನುಡಿಯ ಜಾಗೃತಿ ಮೂಡಿಸುತ್ತಿದ್ದಾರೆ.

ಡಿ. 27ರಂದು ಕಲಬುರಗಿಯಿಂದ ಹೊರಟ ಈ ಬೈಕ್‌ ಸಾಹಸಿ 860 ಕಿಮೀ ಯಾತ್ರೆಯನ್ನು ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಪೂರೈಸುತ್ತಿದ್ದಾರೆ. ಇಲಕಲ್‌ನ ಈ ಸಾಹಸಿ ಈಗ ಕನ್ನಡಿಗರ ಮನವನ್ನು ಗೆಲ್ಲುತ್ತಿದ್ದಾರೆ. ಈ ಸಾಹಸಿ, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ಕನ್ನಡ ನುಡಿಯ ಜಾಗೃತಿಗಾಗಿ ಕನ್ನಡದ ಬಾವುಟವನ್ನು ಕೈಯಲ್ಲಿ ಹಿಡಿದುಕೊಂಡು ಬೈಕ್‌ ಓಡಿಸುತ್ತಾರೆ. ಬಳಸಬೇಕು ಕನ್ನಡ, ಉಳಿಸಬೇಕು ಕನ್ನಡ, ಬೆಳೆಸಬೇಕು ಕನ್ನಡ ಎಂಬ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ. ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಕರ್ನಾಟಕ ಸುವರ್ಣ ಸಂಭ್ರಮ ಲಾಂಛನದೊಂದಿಗೆ ಕಲಬುರಗಿಯಿಂದ ಬೆಂಗಳೂರುವರೆಗೆ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲೇ ಪ್ರಯಾಣ ಮಾಡುತ್ತಾ ಕನ್ನಡ ನಾಡು, ನುಡಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಕಲಬುರಗಿಯಿಂದ ಜೇವರ್ಗಿ, ಶಹಪುರ, ಸುರಪುರ, ಲಿಂಗಸ್ಗೂರು, ಸಿಂಧನೂರು, ಕಾರಟಗಿ, ಗಂಗಾವತಿ ಮೂಲಕ ಹೊಸಪೇಟೆಗೆ ಆಗಮಿಸಿದ ಈರಣ್ಣರ ಬೈಕ್‌ ಸಾಹಸ ಮೆಚ್ಚಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ನಗರದ ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಬೈಕ್‌ ಸಾಹಸ ನಡೆಸಿ ಕನ್ನಡಪರ ಘೋಷಣೆಗಳನ್ನು ಮೊಳಗಿಸಿದ ಈರಣ್ಣ ಕನ್ನಡಕ್ಕಾಗಿ ನಾವೆಲ್ಲರೂ ಒಂದಾಗಬೇಕು. ಕನ್ನಡ ನಾಡು ಒಗ್ಗಟ್ಟಾಗಿ ಅಭಿವೃದ್ಧಿ ಕಾಣಲಿ ಎಂದರು.

ವಿಶಿಷ್ಟ ದಾಖಲೆಗಳು: ಬೈಕ್‌ ಸಾಹಸದಲ್ಲೇ ಈರಣ್ಣ ಕುಂದರಗಿಮಠ ರಾಷ್ಟ್ರಮಟ್ಟದ ದಾಖಲೆಗಳನ್ನು ಮಾಡಿ ಈಗಾಗಲೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಹೆಸರು ಮಾಡಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ತನ್ನ ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿಕೊಂಡು ಬಾಗಲಕೋಟ ಜಿಲ್ಲಾಡಳಿತ ಭವನದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಚಲಾಯಿಸಿ ದಾಖಲೆ ಮಾಡಿದ್ದಾರೆ. ಇಲಕಲ್‌, ವಿಜಯಪುರ, ಸೋಲ್ಲಾಪುರ, ಪುಣೆ, ಕೊಲ್ಲಾಪುರ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ 1341 ಕಿಮೀಗಳನ್ನು 47 ಗಂಟೆ 55 ನಿಮಿಷಗಳಲ್ಲಿ ಕ್ರಮಿಸಿ 2014ರಲ್ಲಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ.

2015ರಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಹೊಸಪೇಟೆ-ತುಮಕೂರು ಮಾರ್ಗವಾಗಿ 510 ಕಿಮೀ ರೋಮಾಂಚನಕಾರಿಯಾಗಿ ಬೈಕ್‌ ಓಡಿಸಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ದಾಖಲೆ ಬರೆದು ಈರಣ್ಣ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಜಾಗೃತಿ ಕೈಂಕರ್ಯ: ಕನ್ನಡ ನಾಡು, ನುಡಿಗಾಗಿ ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಹ್ಯಾಂಡಲ್‌ ಇಲ್ಲದ ಬೈಕ್‌ನಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಿರುವೆ. ಕಲಬುರಗಿಯಿಂದ ಬೆಂಗಳೂರಿನ ವಿಧಾನಸೌಧದವರೆಗೆ 860 ಕಿಮೀಯವರೆಗೆ ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಕ್ರಮಿಸುತ್ತಿರುವೆ. ಮಾರ್ಗದಲ್ಲಿ ಬರುವ ಊರು. ಪಟ್ಟಣ, ನಗರಗಳಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಿರುವೆ. ಕನ್ನಡ ಮನಸ್ಸುಗಳು ಈ ಜಾಗೃತಿ ಕೈಂಕರ್ಯಕ್ಕೆ ಬೆಂಬಲವಾಗಿ ನಿಂತಿವೆ ಎಂದರು ಬೈಕ್‌ ಸಾಹಸ ಕ್ರೀಡಾಪಟು ಈರಣ್ಣ ಜಿ. ಕುಂದರಗಿ ತಿಳಿಸಿದರು.