ರಸ್ತೆ, ಚರಂಡಿ, ಪಾರ್ಕ್, ನಾಮಫಲಕಗಳ ಅಳವಡಿಕೆ, ಸಿಸಿಟಿವಿ, ಕನ್ನಡ ಭವನ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಯೋಜನೆಗಳಿಗೆ ಮುಂಬರುವ 2026-27ನೇ ಸಾಲಿನ ಬಜೆಟ್ ಆಯ-ವ್ಯಯದಲ್ಲಿ ಹಣ ಮೀಸಲಿಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- ಹರಿಹರ ನಗರಸಭೆಯಲ್ಲಿ 2026-27ನೇ ಸಾಲಿನ ಆಯ-ವ್ಯಯದ ಪೂರ್ವಭಾವಿ ಸಭೆ । ಯೋಜನಾ ನಿರ್ದೇಶಕ ಡಾ. ಮಹಂತೇಶ್ ಎನ್. ಅಧ್ಯಕ್ಷತೆ

- - -

ಕನ್ನಡಪ್ರಭ ವಾರ್ತೆ ಹರಿಹರ

ರಸ್ತೆ, ಚರಂಡಿ, ಪಾರ್ಕ್, ನಾಮಫಲಕಗಳ ಅಳವಡಿಕೆ, ಸಿಸಿಟಿವಿ, ಕನ್ನಡ ಭವನ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಯೋಜನೆಗಳಿಗೆ ಮುಂಬರುವ 2026-27ನೇ ಸಾಲಿನ ಬಜೆಟ್ ಆಯ-ವ್ಯಯದಲ್ಲಿ ಹಣ ಮೀಸಲಿಡಲು ಸಾರ್ವಜನಿಕರು ಒತ್ತಾಯಿಸಿದರು.

ನಗರಸಭಾ ಸಭಾಂಗಣದಲ್ಲಿ ಶನಿವಾರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ಮಹಂತೇಶ್ ಎನ್. ಅಧ್ಯಕ್ಷತೆಯಲ್ಲಿ ನಡೆದ 2026-27ನೇ ಸಾಲಿನ ಆಯ-ವ್ಯಯದ ಪೂರ್ವಭಾವಿ ಸಭೆಯಲ್ಲಿ ನಗರದ ಸಾರ್ವಜನಿಕರು ನಗರಸಭೆ ಆಡಳಿತ ವೈಖರಿ ಹಾಗೂ ಸಾರ್ವಜನಿಕರ ಕುಂದುಕೊರತೆಗಳ ಪರಿಹಾರ ನಿರ್ಲಕ್ಷ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಆರಂಭದಲ್ಲಿ ದಾವಣಗೆರೆ- ಹರಿಹರ ನಗರ ಅಭಿವೃದ್ಧಿ ಪ್ರಾಧಿಕಾರ ಹರಿಹರ ನಗರ ಪ್ರಗತಿಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಗೋವಿಂದ ಆಕ್ರೋಶ ವ್ಯಕ್ತಪಡಿಸಿದರು. ಆನಂದ್‌ ಮಾತನಾಡಿ, ತುಂಗಭದ್ರಾ ಸೇತುವೆ ಮೇಲೆ ವಿದ್ಯುತ್ ದೀಪಗಳು ಬಂದಾಗಿ ಹಲವು ತಿಂಗಳುಗಳೇ ಕಳೆದಿವೆ. ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಸರಿಪಡಿಸುತ್ತಿಲ್ಲ ಎಂದರು. ರೈತ ಮಹಿಳೆ ರತ್ನಮ್ಮ ಮಾತನಾಡಿ, ಆಂಜನೇಯ ಬಡಾವಣೆಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಶಾಲೆಗಳಿಗೆ ಕಾಂಪೌಂಡ್ ಇಲ್ಲ, ಶೌಚಾಲಯಗಳಿಲ್ಲ. ಇದರ ಬಗ್ಗೆ ಹೆಚ್ಚು ಗಮನಿಸಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ಎಂ.ಬಿ. ಅಣ್ಣಪ್ಪ ಮಾತನಾಡಿ, ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಲು ಹಾಗೂ ಅಮರಾವತಿ ಕೆ.ಎಚ್.ಬಿ. ಕಾಲೋನಿ ರಸ್ತೆಗಳ ಅಭಿವೃದ್ಧಿಗೆ ಹಣ ಮೀಸಲು ಇಡಬೇಕು ಎಂದರೆ, ಮುಖಂಡ ಎಚ್.ಕೆ. ಕೊಟ್ರಪ್ಪ ಮಾತನಾಡಿ, ಮನೆಗಳ ನಳಗಳಿಗೆ ಮೀಟರ್ ಅಳವಡಿಸಿರುವ ಕಾರಣ ಮನೆಯ ಸುತ್ತಮುತ್ತಲು ಗಿಡಗಳನ್ನು ಬೆಳೆಸುವ ಪರಿಪಾಠ ಇತ್ತೀಚಿಗೆ ಕಡಿಮೆಯಾಗುತ್ತಿದೆ. ಹಸಿರೇ ಉಸಿರು ಎಂಬಂತೆ ಹಸಿರು ಮರಗಳನ್ನು ಬೆಳೆಸಲು ನಗರಸಭೆಯಿಂದ ನೀರಿನ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ಸಲಹೆ ನೀಡಿದರು.

ಕರವೇ ಮುಖಂಡ ಬಿ.ಮುಗ್ದಮ್ ಮಾತನಾಡಿ, ಬೀದಿನಾಯಿಗಳ ಹಾವಳಿಯಿಂದ ಜನ ರೋಸಿ ಹೋಗಿದ್ದಾರೆ. ಇತ್ತೀಚಿಗೆ ನಾಯಿ ಬೆನ್ನಹತ್ತಿ ಕಡಿಯುವುದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಯುವಕ ಚರಂಡಿಗೆ ಬಿದ್ದು, ಆಸ್ಪತ್ರೆ ಸೇರಿದ್ದಾನೆ. ಅವನ ಆಸ್ಪತ್ರೆ ಖರ್ಚು ವೆಚ್ಚವನ್ನು ನಗರಸಭೆಯೇ ಭರಿಸಬೇಕೆಂದು ಸಭೆ ಗಮನ ಸೆಳೆದರು.

ಮುಖಂಡ ಗೋಪಿ ಮಾತನಾಡಿ, ನಗರದಲ್ಲಿ ₹20 ಲಕ್ಷ ವೆಚ್ಚದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಕಾಂಕ್ರೀಟ್ ಹಾಕಿದ ನಂತರ ಅವುಗಳಿಗೆ ಸರಿಯಾಗಿ ನೀರು ಹಾಕುತ್ತಿಲ್ಲ. ಹಾಗೂ ಕಾಂಕ್ರೀಟ್ ಹಾಕುವ ವೇಳೆ ರಸ್ತೆಗೆ ಅಡ್ಡಲಾಗಿಟ್ಟರುವ ಕಲ್ಲುಗಳನ್ನು ಗುತ್ತಿಗೆದಾರರು ತೆರವು ಮಾಡಿಲ್ಲ. ಇದನ್ನು ಗಮನಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದರು.

ಪಾರ್ಕುಗಳ ಅಭಿವೃದ್ಧಿ ಪೌರಕಾರ್ಮಿಕರ ಕೊರತೆ, ಪಾರ್ಕುಗಳಲ್ಲಿ ಲೈಟ್ ಅಳವಡಿಸಲು, ಸೇತುವೆಗಳಿಗೆ ತಡೆಗೋಡೆ ನಿರ್ಮಿಸುವುದು ಸೇರಿದಂತೆ ಹಲವು ಯೋಜನೆಗಳಿಗೆ ಹಣ ಮೀಸಲಿಡಲು ಕರವೇ ರಮೇಶ್ ಮಾನೆ, ಪ್ರೀತಮ್ ಬಾಬು ಸಲಹೆ ನೀಡಿದರು.

ನಗರದ ಸೌಂದರ್ಯೀಕರಣ, ರಸ್ತೆ, ಚರಂಡಿ, ಪಾರ್ಕ್, ನಾಮಫಲಕ ಅಳವಡಿಕೆ, ಸಿಸಿಟಿವಿ, ಕನ್ನಡ ಭವನ, ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಹಲವಾರು ಯೋಜನೆಗಳಿಗೆ ಮುಂಬರುವ ಆಯ-ವ್ಯಯದಲ್ಲಿ ಹಣ ಮೀಸಲಿಡಲು ಕೆ.ಬಿ. ರಾಜಶೇಖರ್, ಆಟೋ ಹನುಮಂತಪ್ಪ, ದಾದಾ ಖಲಂದರ್, ಪ್ರಭು ಪೂಜಾರ್, ವಿವೇಕಾನಂದ ಸ್ವಾಮಿ, ಶಶಿ ನಾಯಕ್, ಎಚ್.ಕೆ. ಮೂರ್ತಿ, ದೇವೇಂದ್ರಪ್ಪ, ಪತ್ರಕರ್ತರು, ಸಾರ್ವಜನಿಕರು ಸಲಹೆ ನೀಡಿದರು.

ಸಭೆಯಲ್ಲಿ ನಗರಸಭೆ ಪ್ರಭಾರ ಆಯುಕ್ತರಾದ ವಿನಯ್ ಕುಮಾರ್, ಕಚೇರಿ ವ್ಯವಸ್ಥಾಪಕ ಏಕನಾಥ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯಗಳು ಸಿಗ್ತಿಲ್ಲ: ಅಧ್ಯಕ್ಷೆ ಪುಟ್ ಪಾತ್ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ಡಿ.ಮಂಜಮ್ಮ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ನಲ್ಮ್‌ ಯೋಜನೆಯಡಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಬಹುತೇಕ ಬೀದಿಬದಿ ವ್ಯಾಪಾರಸ್ಥರು ಮಹಿಳೆಯರೇ ಇರುತ್ತಾರೆ. ಆದಕಾರಣ ಅವರಿಗೆ ಸಾರ್ವಜನಿಕ ಶೌಚಾಲಯಗಳ ಸೌಲಭ್ಯವಿಲ್ಲ. ಜೊತೆಗೆ ಬೀದಿ ವ್ಯಾಪಾರಿಗಳಿಗೆ ದಿನನಿತ್ಯ ಬಿಡಾಡಿ ದನಗಳ ಕಾಟ ನಿಯಂತ್ರಿಸಲು ಆಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮೌನವಹಿಸಿರುವ ಕಾರಣ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- - -

-03ಎಚ್‌ಆರ್‌ಆರ್‌03:

ಹರಿಹರದ ನಗರಸಭಾ ಸಭಾಂಗಣದಲ್ಲಿ ನಡೆದ 2026-27ನೇ ಸಾಲಿನ ಆಯ-ವ್ಯಯದ ಪೂರ್ವಭಾವಿ ಸಭೆ ನಡೆಯಿತು.